AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಗೌಪ್ಯತೆ: DPDP ಕಾಯಿದೆ, ಡೇಟಾ ಪ್ರಿನ್ಸಿಪಾಲ್ ಹಕ್ಕುಗಳು ಮತ್ತು ಕಂಪನಿಗಳ ಹೊಣೆಗಾರಿಕೆ

Santosh Nair's article in 'Your India' series: ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ (DPDP Act) ಜಾರಿಗೆ ಬಂದಿದೆ. ಈ ಕಾನೂನು ನಿಮ್ಮ ಡಿಜಿಟಲ್ ಗೌಪ್ಯತೆಯನ್ನು ರಕ್ಷಿಸುತ್ತದೆ. ಡೇಟಾ ಪ್ರಿನ್ಸಿಪಾಲ್ ಆಗಿ ನಿಮಗೆ ನಿಮ್ಮ ಡೇಟಾ ಬಗ್ಗೆ ಕೇಳಲು, ಸರಿಪಡಿಸಲು, ಅಳಿಸಲು ಮತ್ತು ಅನುಮತಿ ಹಿಂಪಡೆಯಲು ಹಕ್ಕಿದೆ. ಕಂಪನಿಗಳು (ಡೇಟಾ ಫಿಡ್ಯೂಷಿಯರಿಗಳು) ನಿಮ್ಮ ಅನುಮತಿ ಪಡೆಯಬೇಕು ಮತ್ತು ಡೇಟಾ ಸುರಕ್ಷಿತವಾಗಿಡಬೇಕು, ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ.

ಡಿಜಿಟಲ್ ಗೌಪ್ಯತೆ: DPDP ಕಾಯಿದೆ, ಡೇಟಾ ಪ್ರಿನ್ಸಿಪಾಲ್ ಹಕ್ಕುಗಳು ಮತ್ತು ಕಂಪನಿಗಳ ಹೊಣೆಗಾರಿಕೆ
ಮೊಬೈಲ್ ಬಳಕೆImage Credit source: Getty Images
Santosh Nair
| Edited By: |

Updated on: Nov 12, 2026 | 7:42 PM

Share

ಸಂಜೆ ಕತ್ತಲಾಗುವ ಸಮಯದಲ್ಲಿ ನೀಲಮ್ ಬಸ್ ನಿಲ್ದಾಣದಲ್ಲಿ ನಿಂತಿದ್ದಾಳೆ; ದಣಿದಿರುವ ಏಳು ವರ್ಷದ ಮಗುವೊಂದು ಅವಳ ಕೈಯನ್ನು ಎಳೆಯುತ್ತಿದೆ; ಲೋಡ್ ಆಗಲು ಪರದಾಡುತ್ತಿರುವ ಟ್ಯಾಕ್ಸಿ ಆ್ಯಪ್ ಜೊತೆಯಲ್ಲಿದೆ. ಮಗುವಿಗೆ ಆಟವಾಡಬೇಕಿತ್ತು. ಟ್ಯಾಕ್ಸಿಗೆ ಅವಳಿರುವ ಸ್ಥಳ ಬೇಕಾಗಿತ್ತು. ಪರದೆಯ ಮೇಲೆ ಉದ್ದನೆಯ ಮತ್ತು ಬೂದು ಬಣ್ಣದ, ಸಣ್ಣ ಅಕ್ಷರಗಳಿಂದ ಕೂಡಿದ ಒಂದು ಬಾಕ್ಸ್ ಪಾಪ್ ಅಪ್ ಆಗುತ್ತದೆ. ಅದರ ಕೆಳಭಾಗದಲ್ಲಿ “ನಾನು ಒಪ್ಪುತ್ತೇನೆ” (I agree) ಎಂದು ಹೇಳುವ ಪ್ರಕಾಶಮಾನವಾದ ಹಸಿರು ಬಟನ್ ಇದೆ. ಆ ವಿಚಾರದಲ್ಲಿ ನೀವು ಏನು ಮಾಡುತ್ತಿದ್ದರೋ, ಅದನ್ನೇ ಅವಳೂ ಮಾಡಿದಳು. ಆ ಬಟನ್ ಒತ್ತಿದಳು. ಟ್ಯಾಕ್ಸಿ ಬಂತು. ಆಟ ಪ್ರಾರಂಭವಾಯಿತು. ನೀಲಮ್ ಅವರ ಜೀವನದ ಸಣ್ಣ ತುಣುಕುಗಳೆಂದು ಕರೆಯಬಹುದಾದ ಅವರ ಫೋನ್ ಸಂಖ್ಯೆ, ಅವರ ಇರುವಿಕೆಯ ಮಾಹಿತಿ, ಅವರ ಸಂಪರ್ಕಗಳ ಪಟ್ಟಿ, ಇವೆಲ್ಲವೂ ಯಾವುದೋ ಅಜ್ಞಾತ ಜಾಗಕ್ಕೆ ಸೇರಿದವು.

ಯಾರೂ ಈ ಪುಟಗಳನ್ನು ಓದುವುದಿಲ್ಲ. ಬಹುತೇಕ ಎಲ್ಲರೂ ಅವುಗಳಿಗೆ ಒಪ್ಪಿಗೆ ಸೂಚಿಸುತ್ತಾರೆ. ಇದು ಡಿಜಿಟಲ್ ಯುಗದ ಅತ್ಯಂತ ಹಳೆಯ ಜೋಕ್ ಹೌದು. ಅನೇಕ ಜೋಕ್‌ಗಳಂತೆ ಇದು ಒಂದು ಸತ್ಯವನ್ನು ಮರೆಮಾಚುತ್ತದೆ: ಅವಸರದಲ್ಲಿ ನೀಡುವ ಒಪ್ಪಿಗೆಯು ಒಂದು ವಿಚಿತ್ರವಾದ ಒಪ್ಪಿಗೆ ಆಗಿರುತ್ತದೆ. ಬಹಳ ಕಾಲ ಭಾರತೀಯ ಕಾನೂನು ಇದರ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಈಗ ಅದು ಬದಲಾಗಲು ಪ್ರಾರಂಭಿಸಿದೆ. 2017 ರಲ್ಲಿ ಸುಪ್ರೀಂ ಕೋರ್ಟ್ ಗೌಪ್ಯತೆಯನ್ನು ಮೂಲಭೂತ ಹಕ್ಕು ಎಂದು ಘೋಷಿಸಿತು. ಆಗಸ್ಟ್ 2023 ರಲ್ಲಿ ಸಂಸತ್ತು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಯನ್ನು (Digital Personal Data Protection Act) ಅಂಗೀಕರಿಸಿತು, ಮತ್ತು ನವೆಂಬರ್ 2025 ರಲ್ಲಿ ಅದನ್ನು ಕಾರ್ಯಗತಗೊಳಿಸುವ ನಿಯಮಗಳಿಗೆ ಅಧಿಸೂಚನೆ ಹೊರಡಿಸಲಾಯಿತು.

ಹೊಸ ಕಾನೂನು ಏನು ಹೇಳುತ್ತದೆ ಎಂದು ನೀಲಮ್‌ಗೆ ತಿಳಿದಿತ್ತು ಎಂದು ಭಾವಿಸೋಣ. ಕಂಪನಿಯು ತನ್ನ ದತ್ತಾಂಶವನ್ನು ಬಳಸುವ ಮೊದಲು ಅವಳ ಅನುಮತಿಯನ್ನು ಕೇಳಬೇಕು, ಮತ್ತು ಆ ಕೇಳುವಿಕೆಯು ಸ್ಪಷ್ಟವಾಗಿರಬೇಕು. ಆದರೆ, ಈಗಿರುವ ಪರಿಸ್ಥಿತಿ ಏನು? ಎಲ್ಲಾ ಅನುಮತಿಗಳನ್ನು ಒಟ್ಟಿಗೆ ಸೇರಿಸಲಾಗಿದೆ. ಎಲ್ಲಾ ಬಾಕ್ಸ್​ಗಳನ್ನೂ ಟಿಕ್ ಮಾಡಲಾಗಿದೆ. ಈಕೆ ಯಾವುದೋ ಒಂದಕ್ಕೆ ಹೌದು ಎನ್ನಲು ಆಗಲ್ಲ. ಎಲ್ಲದಕ್ಕೂ ಹೌದು ಎಂದಿರುತ್ತಾಳೆ. ವಾಸ್ತವದಲ್ಲಿ ಕಾನೂನಿನ ಉದ್ದೇಶ ಇದಲ್ಲ. ಅವಳು ತನಗೆ ಬೇಕಾದಾಗ ತನ್ನ ಅನುಮತಿಯನ್ನು ಹಿಂಪಡೆಯಬಹುದು. ಕಂಪನಿಯು ತನ್ನ ಬಗ್ಗೆ ಏನು ಮಾಹಿತಿ ಹೊಂದಿದೆ ಮತ್ತು ಯಾಕೆ ಹೊಂದಿದೆ ಎಂದು ಅವಳು ಕೇಳಬಹುದು, ಒಂದು ನಕಲು ಪ್ರತಿಯನ್ನು ಕೇಳಬಹುದು, ತಪ್ಪುಗಳನ್ನು ಸರಿಪಡಿಸಲು ಕೇಳಬಹುದು ಮತ್ತು ತನ್ನ ವಿವರಗಳನ್ನು ಅಳಿಸಲು ಕೇಳಬಹುದು, ಮತ್ತು ಕಂಪನಿಯು ತೊಂಬತ್ತು ದಿನಗಳಲ್ಲಿ ಉತ್ತರಿಸಬೇಕಾಗುತ್ತದೆ. ಅವಳ ದತ್ತಾಂಶ ಸೋರಿಕೆಯಾದರೆ, ಅವಳಿಗೆ ತಿಳಿಸಬೇಕು. ಅವಳ ಮಗಳಿಗೆ ಇನ್ನೂ ಕಟ್ಟುನಿಟ್ಟಾದ ರಕ್ಷಣೆ ಇದೆ: ಮಗುವಿನ ದತ್ತಾಂಶವನ್ನು ಬಳಸುವ ಮೊದಲು ಕಂಪನಿಗೆ ಪೋಷಕರು ಅಥವಾ ರಕ್ಷಕರ ಪರಿಶೀಲಿಸಬಹುದಾದ ಒಪ್ಪಿಗೆಯ ಅಗತ್ಯವಿದೆ, ಮತ್ತು ಈ ಕಾನೂನಿನಡಿಯಲ್ಲಿ ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನ ಯಾರೇ ಆದರೂ ಮಗುವಾಗಿದ್ದಾರೆ.

ಇದನ್ನೂ ಓದಿ: ಆಧಾರ್ ಕಾರ್ಡ್ ಬಳಕೆ: ಕಾನೂನು Vs ವಾಸ್ತವ – ನಿಮ್ಮ ಹಕ್ಕುಗಳು ಮತ್ತು ಗೌಪ್ಯತೆ

ಬೋರ್ಡ್‌ರೂಮ್‌ನ ಗಮನ ಸೆಳೆಯುವಷ್ಟು ದಂಡಗಳು ದೊಡ್ಡದಿವೆ: ದತ್ತಾಂಶವನ್ನು ಸುರಕ್ಷಿತವಾಗಿಡಲು ವಿಫಲವಾದರೆ 250 ಕೋಟಿ ರೂ.ಗಳವರೆಗೆ, ಮತ್ತು ಸೋರಿಕೆಯನ್ನು ವರದಿ ಮಾಡಲು ವಿಫಲವಾದರೆ ಅಥವಾ ಮಕ್ಕಳ ದತ್ತಾಂಶದ ನಿಯಮಗಳನ್ನು ಉಲ್ಲಂಘಿಸಿದರೆ 200 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು. ಭಾರತದ ದತ್ತಾಂಶ ರಕ್ಷಣಾ ಮಂಡಳಿಯು (Data Protection Board of India) ದೂರುಗಳನ್ನು ಆಲಿಸುತ್ತದೆ, ಮತ್ತು ಅದರ ನಿರ್ಧಾರಗಳ ವಿರುದ್ಧ ಟ್ರಿಬ್ಯೂನಲ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಈ ಕಾನೂನಿನಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಅದರಲ್ಲಿರುವ ಎರಡು ಸಣ್ಣ ಪದಗಳು. ಇದು ವ್ಯಕ್ತಿಯನ್ನು “ದತ್ತಾಂಶ ಪ್ರಧಾನ” (Data Principal) ಎಂದು ಕರೆಯುತ್ತದೆ. ದತ್ತಾಂಶ ಯಾರದ್ದಾಗಿರುತ್ತೋ ಅವರೇ ಡಾಟಾ ಪ್ರಿನ್ಸಿಪಾಲ್. ಇದು ಕಂಪನಿಯನ್ನು “ದತ್ತಾಂಶ ರಕ್ಷಕ/ಟ್ರಸ್ಟಿ” (Data Fiduciary) ಎಂದು ಕರೆಯುತ್ತದೆ, ಇದು ಮತ್ತೊಬ್ಬರಿಗಾಗಿ ಯಾವುದನ್ನಾದರೂ ನಂಬಿಕೆಯಿಂದ ಕಾಪಾಡುವವನಿಗೆ ಬಳಸುವ ಹಳೆಯ ಪದವಾಗಿದೆ. ಟ್ರಸ್ಟಿ ಸುಪರ್ದಿಯಲ್ಲಿರುವುದು ಅವನ ಸ್ವತ್ತಲ್ಲ. ಆತ ಅದಕ್ಕೆ ಜವಾಬ್ದಾರನಾಗಿರುತ್ತಾನೆ. ಕಾನೂನು ನಿರ್ದಿಷ್ಟವಾಗಿ ಈ ಎರಡು ಪದಗಳನ್ನು (Data Principal) ಆರಿಸಿಕೊಳ್ಳಲು ಕಾರಣವಿದೆ. ನಾವು ಅನುಮತಿ (Allow) ಟ್ಯಾಪ್ ಮಾಡಿದಾಗ ಅದು ಕಂಪನಿಗೆ ಸಿಗುವ ಬಹುಮಾನವಾಗಿರುವುದಿಲ್ಲ. ಬದಲಾಗಿ ನಮ್ಮದನ್ನು ನೋಡಿಕೊಳ್ಳುವ ಮತ್ತು ಮರಳಿ ನೀಡಬೇಕಾದ ಸಂಗತಿಯಾಗಿಬೇಕು ಎನ್ನುವ ಉದ್ದೇಶ ಕಾನೂನಿನದ್ದು.

ಎರಡು ಪ್ರಶ್ನೆಗಳು ಹಾಗೆಯೇ ಉಳಿದಿವೆ. ಎರಡೂ ಕಡೆಯಲ್ಲೂ ಚಿಂತನಾಶೀಲರು ನಿಂತಿದ್ದಾರೆ. ಒಂದು ಪ್ರಶ್ನೆಯು ಸ್ವತಃ ಸರ್ಕಾರಕ್ಕೆ ಸಂಬಂಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯಂತಹ ಕಾರಣಗಳಿಗಾಗಿ ತನ್ನದೇ ಆದ ಏಜೆನ್ಸಿಗಳನ್ನು ತನ್ನ ಕೆಲವು ನಿಯಮಗಳಿಂದ ವಿನಾಯಿತಿ ನೀಡಲು ಕಾನೂನು ಅವಕಾಶ ನೀಡುತ್ತದೆ. ತಮ್ಮ ಜನರನ್ನು ರಕ್ಷಿಸಲು ರಾಜ್ಯಕ್ಕೆ ಆ ಅವಕಾಶ ಬೇಕು ಎಂದು ಬೆಂಬಲಿಗರು ಹೇಳುತ್ತಾರೆ. ಅತಿ ಹೆಚ್ಚು ದತ್ತಾಂಶವನ್ನು ಸಂಗ್ರಹಿಸುವವನೇ ಅತ್ಯಂತ ಕಡಿಮೆ ಹೊಣೆಗಾರಿಕೆಯನ್ನು ಹೊಂದಿರುವುದು ದೊಡ್ಡ ವಿನಾಯಿತಿಗಳಿಂದ ಉಂಟಾಗುತ್ತದೆ ಎಂದು ವಿಮರ್ಶಕರು ಹೇಳುತ್ತಾರೆ. ಮತ್ತೊಂದು ಪ್ರಶ್ನೆಯು ಗ್ರಾಮದಲ್ಲಿರುವ ನೀಲಮ್ ಅವರ ಆಪ್ತರಿಗೆ ಸಂಬಂಧಿಸಿದೆ. ತನ್ನ ವಿವರವನ್ನು ಅಳಿಸುವಂತೆ ಕಂಪನಿಗೆ ಕೇಳಬೇಕೆಂಬ ವಿಷಯ ಆಕೆಗೆ ಯಾವತ್ತೂ ತಿಳಿಯದು. ಕಠಿಣ ಇಂಗ್ಲೀಷ್​ನಲ್ಲಿ ಬರೆದ ನೋಟೀಸ್ ಅನ್ನು ಓದಲು ಬಾರದವಳು. ಪಠ್ಯವು ಸರಳ ಭಾಷೆಯಲ್ಲಿ ಇರಬೇಕು, ಅದರಲ್ಲೂ ಭಾರತೀಯ ಭಾಷೆಯಲ್ಲಿ ಇರಬೇಕು ಎಂದು ಕಾನೂನು ನಿರೀಕ್ಷಿಸುತ್ತದೆ.

ಇದನ್ನೂ ಓದಿ: ಯುಪಿಐ ಕ್ರಾಂತಿ: ಸಣ್ಣ ವ್ಯಾಪಾರಿಗಳ ಸಬಲೀಕರಣ, ಭಾರತದ ಆರ್ಥಿಕ ರೂಪಾಂತರ

ಒಮ್ಮೆ ಯೋಚಿಸಿ, ನಮ್ಮ ಜೀವನದ ಎಷ್ಟು ಭಾಗವು ಈಗಾಗಲೇ ಇತರ ಜನರ ಡೇಟಾಬೇಸ್‌ಗಳಲ್ಲಿ ಕುಳಿತಿದೆ. ಅಂಗಡಿಯೊಂದರಲ್ಲಿ ಫೋನ್ ನಂಬರ್, ಔಷಧ ಅಂಗಡಿಯಲ್ಲಿ ಔಷಧಗಳು, ಸಾಲದಾತನೊಂದಿಗೆ ಸಾಲ, ಕಟ್ಟಡದ ಭದ್ರತಾ ಮೇಜಿನ ಬಳಿ ಒಂದು ಮುಖ. ಇದರ ಹೆಚ್ಚಿನ ಭಾಗವನ್ನು ಅಗತ್ಯವಿರುವ ಕ್ಷಣದಲ್ಲಿ ನೀಡಿ ನಂತರ ಮರೆಯಲಾಗಿದೆ. ಮತ್ತು ಅದರಲ್ಲಿ ಹೆಚ್ಚಿನವು ಇತರ ಜನರನ್ನು ಸಹ ಒಳಗೊಂಡಿದೆ, ಏಕೆಂದರೆ ಹಂಚಿಕೊಂಡ ಫೋಟೋ ಅಥವಾ ಆಟಕ್ಕೆ ಅಪ್‌ಲೋಡ್ ಮಾಡಿದ ಸಂಪರ್ಕ ಪಟ್ಟಿಯು ಯಾವುದಕ್ಕೂ ಒಪ್ಪಿಗೆ ನೀಡದ ಸ್ನೇಹಿತರ ಹೆಸರುಗಳನ್ನು ಸಹ ಹೊಂದಿರುತ್ತದೆ. ನಮ್ಮ ದತ್ತಾಂಶವು ಅಪರೂಪಕ್ಕೆ ಮಾತ್ರ ನಮ್ಮದಾಗಿರುತ್ತದೆ.

ಅಂದು ಸಂಜೆ ಬಸ್ಸಿನಲ್ಲಿ, ನೀಲಮ್ ಅವರ ಮಗಳು ಆ ಉದ್ದನೆಯ ಪುಟವು ಏನು ಹೇಳಿದೆ ಎಂದು ಕೇಳುತ್ತಾಳೆ. ತನಗೆ ಅದು ತಿಳಿದಿಲ್ಲದಿರುವುದು ಮತ್ತು ಆಟಕ್ಕಾಗಿ ಸಹಿ ಹಾಕಿಬಿಟ್ಟಿರುವುದು ನೀಲಮ್​ನ ಅರಿವಿಗೆ ಬರುತ್ತದೆ.

“ನಾನು ಒಪ್ಪುತ್ತೇನೆ” ಎಂದು ಒತ್ತುವ ಮೊದಲು, ನೀವು ಕೊನೆಯ ಬಾರಿಗೆ ಕನಿಷ್ಠ ಒಂದು ನಿಮಿಷವಾದರೂ ಕಾದಿದ್ದು ಯಾವಾಗ, ಮತ್ತು ನೀವು ನಿಖರವಾಗಿ ಯಾರನ್ನು ನಂಬಿದಿರಿ?

(ಆಧಾರಗಳು: ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆ, 2023; ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ನಿಯಮಗಳು, 2025 (ನವೆಂಬರ್ 14, 2025 ರಂದು ಅಧಿಸೂಚಿಸಲಾಗಿದೆ), ಭಾರತ ಸರ್ಕಾರ; ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವಿ. ಭಾರತ ಒಕ್ಕೂಟ (2017), ಭಾರತದ ಸುಪ್ರೀಂ ಕೋರ್ಟ್. ನೀಲಮ್ ಕಾಲ್ಪನಿಕ ಪಾತ್ರ; ಸಂಗತಿಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More