AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸವಾಲುಗಳಿಗೆ ಸವಾಲು ಹಾಕುವುದೇ ನನ್ನ ಸ್ವಭಾವ: ಐಐಟಿ ಖರಗ್​ಪುರ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಪ್ರಧಾನಿ ಮೋದಿ ಐಐಟಿ ಖರಗ್‌ಪುರದ 75ನೇ ವರ್ಷಾಚರಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, "ಸವಾಲುಗಳನ್ನು ಎದುರಿಸುವುದೇ ನನ್ನ ಸ್ವಭಾವ" ಎಂದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದರು. ಬಡತನ ನಿರ್ಮೂಲನೆ, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಭಾರತದ ಪ್ರಗತಿಯನ್ನು ಉಲ್ಲೇಖಿಸಿ, ದೇಶದ ಅಭಿವೃದ್ಧಿಗೆ ನಾವೀನ್ಯತೆ ಮತ್ತು ಸಂಶೋಧನೆ ಅಗತ್ಯ ಎಂದು ಕರೆ ನೀಡಿದರು.

ನಯನಾ ರಾಜೀವ್
|

Updated on: Nov 21, 2026 | 4:10 PM

Share

ಕೋಲ್ಕತ್ತಾ, ನವೆಂಬರ್ 21: ಯಾವುದೇ ಸವಾಲನ್ನು ಎದುರಿಸದೆ ಬಿಡಲು ನನಗೆ ಸಾಧ್ಯವಿಲ್ಲ. ಸವಾಲುಗಳನ್ನು ಎದುರಿಸುವುದೇ ನನ್ನ ಸ್ವಭಾವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಐಐಟಿ ಖರಗ್‌ಪುರದ 75ನೇ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. “ಸವಾಲಿಗೆ ಸವಾಲು ಹಾಕದೆ ನಾನು ಸುಮ್ಮನಿರಲು ಸಾಧ್ಯವಿಲ್ಲ ಅದು ನನ್ನ ಸ್ವಭಾವ” ಎಂದು ತಮ್ಮ ಜೀವನದ ನಿಲುವನ್ನು ಹಂಚಿಕೊಂಡರು.

ಯುವಕರು ತಮ್ಮ ಕನಸುಗಳಿಗೆ ಮಿತಿ ಹಾಕಿಕೊಳ್ಳಬಾರದು. ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮುಂದಿನ ಎರಡು ದಶಕಗಳು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಿರ್ಣಾಯಕವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಐಐಟಿ ಖರಗ್‌ಪುರದ 75ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ದೊಡ್ಡ ಗುರಿಗಳನ್ನು ಹೊಂದುವಂತೆ ಕರೆ ನೀಡಿದರು. ದೇಶದ ಮೊದಲ ಐಐಟಿಯಾದ ಖರಗ್‌ಪುರ ಸಂಸ್ಥೆಯ 75 ವರ್ಷಗಳ ಸಾಧನೆಯನ್ನು ಶ್ಲಾಘಿಸಿದ ಮೋದಿ, ಭಾರತವು ತನ್ನ ಚಿಂತನೆಯ ಮಿತಿಗಳನ್ನು ಮುರಿದಾಗ ಮಾತ್ರ ನಿಜವಾದ ಸಾಮರ್ಥ್ಯವನ್ನು ಗುರುತಿಸಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ:

‘ಇದು ನಿಮ್ಮದೇ ತಪ್ಪೊಪ್ಪಿಗೆ’; ಭಾರತೀಯ ಉದ್ಯಮಿಗಳ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ತಿರುಗೇಟು

12 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಗೆ

ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದರು. ಈ ಸಾಧನೆಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಜನರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳು ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೆ ಬಡತನ ನಿರ್ಮೂಲನೆ ಕುರಿತು ಘೋಷಣೆಗಳನ್ನು ಮಾಡಲಾಗುತ್ತಿತ್ತೇ ಹೊರತು, ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಕ್ರಮಗಳು ಸಾಕಷ್ಟು ಪರಿಣಾಮಕಾರಿಯಾಗಿರಲಿಲ್ಲ ಎಂದು ಹಿಂದಿನ ಸರ್ಕಾರಗಳ ಆಡಳಿತವನ್ನು ಟೀಕಿಸಿದರು. ಕೆಂಪುಕೋಟೆಯಿಂದ ಬಡವರಿಗೆ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದಾಗ ಸಂಸತ್ತಿನಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಬಡ ಮಹಿಳೆಯರು ಮತ್ತು ಕುಟುಂಬಗಳಿಗೆ ಶೌಚಾಲಯದ ಅಗತ್ಯ ಎಷ್ಟು ಮುಖ್ಯ ಎಂಬುದನ್ನು ಅವರು ಅರ್ಥಮಾಡಿಕೊಂಡಿರಲಿಲ್ಲ ಎಂದು ಹೇಳಿದರು.

ಭಾರತ ಈಗ ಚಿಪ್‌ಗಳನ್ನೂ ರಫ್ತು ಮಾಡುತ್ತಿದೆ

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ತಡವಾಗಿ ಹೆಜ್ಜೆ ಇಟ್ಟಿದೆ ಎಂಬ ಟೀಕೆಗಳಿದ್ದರೂ, ಸರ್ಕಾರ ಸೆಮಿಕಂಡಕ್ಟರ್ ಮಿಷನ್ ಆರಂಭಿಸಿತು. ಈಗ ದೇಶದಲ್ಲಿ ಹಲವು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗುತ್ತಿವೆ ಮತ್ತು ಭಾರತ ಚಿಪ್‌ಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ ಎಂದು ಪ್ರಧಾನಿ ಹೇಳಿದರು.

ಬಾಹ್ಯಾಕಾಶ ಕ್ಷೇತ್ರವನ್ನೂ ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸಿರುವುದರಿಂದ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದರು. ಐಐಟಿ ಖರಗ್‌ಪುರದ ಹಳೆಯ ವಿದ್ಯಾರ್ಥಿ ಪವನ್ ಕುಮಾರ್ ಚಂದನಾ ಅವರ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಸಾಧನೆಯನ್ನು ಉದಾಹರಣೆಯಾಗಿ ನೀಡಿದರು. ಭಾರತದ ಮೊದಲ ಖಾಸಗಿ ರಾಕೆಟ್ ಅಭಿವೃದ್ಧಿಪಡಿಸುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು.

2047ರ ಅಭಿವೃದ್ಧಿ ಹೊಂದಿದ ಭಾರತದ ಗುರಿ

ಮುಂದಿನ 20 ವರ್ಷಗಳು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಅವಧಿಯಾಗಲಿವೆ. 2047ರ ವೇಳೆಗೆ ನಿಮ್ಮಲ್ಲಿ ಹಲವರು ಪ್ರಮುಖ ನಾಯಕತ್ವದ ಸ್ಥಾನಗಳಲ್ಲಿರುತ್ತೀರಿ. ಅಷ್ಟರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

‘ನೇಷನ್ ಫಸ್ಟ್’ ಅಂದರೆ ರಾಷ್ಟ್ರ ಮೊದಲು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಬೇಕು ಎಂದು ಹೇಳಿದರು.

75 ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಸಂವಾದ

ಐಐಟಿ ಖರಗ್‌ಪುರದ 75 ವರ್ಷಗಳ ಸಂಭ್ರಮದ ಅಂಗವಾಗಿ ಸ್ಮರಣಾರ್ಥ ಬೆಳ್ಳಿ ನಾಣ್ಯವನ್ನೂ ಬಿಡುಗಡೆ ಮಾಡಿದರು. 1951ರಲ್ಲಿ ಸ್ಥಾಪನೆಯಾದ ಐಐಟಿ ಖರಗ್‌ಪುರ, ದೇಶದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆಯಾಗಿದೆ. ಸ್ವಾತಂತ್ರ್ಯಾನಂತರ ಭಾರತದ ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳ ಬೆಳವಣಿಗೆಯಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ