ಕಂದಾಯ ಸಚಿವನಾಗಿದ್ದಾಗಲೇ ರಾಜ್ಯದಲ್ಲಿ ಬರ, ಮನಸ್ಸಿಗೆ ನೋವಾಗಿದೆ ಎಂದ ಡಿಸಿಎಂ ಪರಮೇಶ್ವರ್
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ತೀವ್ರ ನೋವು ವ್ಯಕ್ತಪಡಿಸಿದರು. 62,000 ಕೋಟಿ ನಷ್ಟ ಅಂದಾಜಿಸಲಾಗಿದ್ದು, ಕೇಂದ್ರ ನೆರವು ವಿಳಂಬವಾದರೂ ರಾಜ್ಯ ಸರ್ಕಾರ 5000 ರೂ. ಪರಿಹಾರ ನೀಡಲಿದೆ ಎಂದರು. ಎತ್ತಿನಹೊಳೆ ಯೋಜನೆ ಯಶಸ್ವಿಯಾಗಿದ್ದು, ಕೊರಟಗೆರೆ ಅಭಿವೃದ್ಧಿಗೆ ಬದ್ಧ ಎಂದೂ ಭರವಸೆ ನೀಡಿದರು.

ತುಮಕೂರು, ನವೆಂಬರ್ 21: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದು ತೀವ್ರ ನೋವು ತಂದಿದೆ. ತಾವು ಕಂದಾಯ ಸಚಿವರಾಗಿದ್ದ ಸಮಯದಲ್ಲೇ ರಾಜ್ಯದಲ್ಲಿ ಬರ ಕಾಣಿಸಿಕೊಂಡಿದ್ದು, ರೈತರ ಸಂಕಷ್ಟವನ್ನು ಕಂಡು ಮನಸ್ಸಿಗೆ ಬೇಸರವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ತಾಲೂಕು ಅಥವಾ ಜಿಲ್ಲೆಯಲ್ಲಿ ಮಾತ್ರ ಬರ ಬಂದಿದ್ದರೆ ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಿರಲಿಲ್ಲ. ಆದರೆ ಇಡೀ ರಾಜ್ಯವೇ ಬರ ಎದುರಿಸುತ್ತಿದೆ. ಎಲ್ಲೆಡೆ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರದಿಂದ ರಾಜ್ಯಕ್ಕೆ ಸುಮಾರು 62 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಸಿಗದಿದ್ದರೂ ರಾಜ್ಯ ಸರ್ಕಾರ ಜನರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ ಗ್ರಾಮೀಣ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 16 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ನೀಡುತ್ತಿರುವಾಗ ಸರ್ಕಾರದ ಬಳಿ ಹಣವಿಲ್ಲ ಎನ್ನುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳ ಟೀಕೆಗಳಿಗೆ ನಾವು ಜಗ್ಗುವುದಿಲ್ಲ. ಸರ್ಕಾರವನ್ನು ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ ಪರಮೇಶ್ವರ್!
ಎತ್ತಿನಹೊಳೆ ಯೋಜನೆ ಬಗ್ಗೆ ಪ್ರಸ್ತಾಪ
ಎತ್ತಿನಹೊಳೆ ಯೋಜನೆ ಜಾರಿಯಾಗುವುದಿಲ್ಲ ಎಂದು ಕೆಲವರು ಟೀಕಿಸಿದ್ದರು. ಯೋಜನೆಯಿಂದ ಚೊಂಬಿನಲ್ಲಿ ನೀರು ತರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಆದರೆ ಈಗ ಎತ್ತಿನಹೊಳೆ ಯೋಜನೆಯ ನೀರು ತುಮಕೂರು ಜಿಲ್ಲೆಗೆ ಬರುತ್ತಿದೆ. ಅಭಿವೃದ್ಧಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಕೊರಟಗೆರೆಗೆ ಮೊದಲ ಆದ್ಯತೆ
ಬಹಳ ದಿನಗಳಿಂದ ಕೊರಟಗೆರೆಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಕ್ಷೇತ್ರವನ್ನು ನಾನು ಮರೆತಿಲ್ಲ. ಏನೇ ಪರಿಸ್ಥಿತಿ ಎದುರಾದರೂ ಕೊರಟಗೆರೆಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ಇಲ್ಲಿನ ಜನರು ನನಗೆ ನೀಡಿರುವ ಪ್ರೀತಿ ಮತ್ತು ಬೆಂಬಲಕ್ಕೆ ಋಣಿಯಾಗಿದ್ದೇನೆ. ಅವರ ಋಣ ತೀರಿಸುವ ಕೆಲಸವನ್ನು ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾಸೇವಾ ಆಂದೋಲನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಕುರಿತು ಪರಮೇಶ್ವರ್ ಮಾತನಾಡಿದರು.
ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ, 2026ರ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಶೇ.35ರಷ್ಟು ಕಡಿಮೆ ಮಳೆಯಾಗಿದೆ. ಸುಮಾರು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಒಟ್ಟು ಆರ್ಥಿಕ ನಷ್ಟವನ್ನು 62,481.88 ಕೋಟಿ ರೂ. ಎಂದು ಅಂದಾಜಿಸಲಾಗಿದೆ
ರಾಜ್ಯ ಸರ್ಕಾರವು ಬರ ಪರಿಹಾರಕ್ಕಾಗಿ ಕೇಂದ್ರದಿಂದ ಸುಮಾರು 22,400.58 ಕೋಟಿ ರೂ. ನೆರವು ಕೋರಿದೆ. ಕೇಂದ್ರದಿಂದ ನೆರವು ಬರುವುದನ್ನು ಕಾಯದೆ ಅರ್ಹ ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ 5,000 ರೂ. ಪರಿಹಾರ ನೀಡುವ ಕ್ರಮವನ್ನೂ ಪ್ರಕಟಿಸಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




