ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ತಡೆಗೆ ಕರ್ನಾಟಕ ಆರೋಗ್ಯ ಇಲಾಖೆ ಆ್ಯಕ್ಷನ್ ಪ್ಲಾನ್: ಆ್ಯಂಟಿಬಯೋಟಿಕ್ ದುರ್ಬಳಕೆಗೆ ಕಡಿವಾಣ
ಆ್ಯಂಟಿಬಯೋಟಿಕ್‌ಗಳ ಅತಿಯಾದ ಬಳಕೆಯಿಂದ ಹೆಚ್ಚುತ್ತಿರುವ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಅಪಾಯ ತಡೆಗೆ ಕರ್ನಾಟಕ ಆರೋಗ್ಯ ಇಲಾಖೆ ಹೊಸ ಕಾರ್ಯಯೋಜನೆ ಜಾರಿಗೊಳಿಸಿದೆ. KSAPCAR ಹೆಸರಿನ ಈ ಯೋಜನೆಯಲ್ಲಿ ಆ್ಯಂಟಿಬಯೋಟಿಕ್ ದುರ್ಬಳಕೆ ನಿಯಂತ್ರಣ, ರೋಗಗಳ ಮೇಲ್ವಿಚಾರಣೆ ಮತ್ತು ಆಸ್ಪತ್ರೆಗಳಲ್ಲಿ ಸೋಂಕು ತಡೆ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ.

ಮುಖ್ಯಾಂಶಗಳು
- ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ತಡೆಗೆ ರಾಜ್ಯಮಟ್ಟದ ಕಾರ್ಯಯೋಜನೆ
- ಆ್ಯಂಟಿಬಯೋಟಿಕ್ ದುರ್ಬಳಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕ್ರಮ
- ಮಹತ್ವದ ಕ್ರಮಕ್ಕೆ ಮುಂದಾದ ಕರ್ನಾಟಕ ಸರ್ಕಾರ
ಬೆಂಗಳೂರು, ನವೆಂಬರ್ 22: ಆ್ಯಂಟಿಬಯೋಟಿಕ್‌ಗಳ ಅತಿಯಾದ ಮತ್ತು ಅನಗತ್ಯ ಬಳಕೆಯಿಂದ ಹೆಚ್ಚುತ್ತಿರುವ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ಅಪಾಯವನ್ನು ನಿಯಂತ್ರಿಸಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ರೋಗಗಳ ಮೇಲ್ವಿಚಾರಣೆ ಬಲಪಡಿಸುವುದು, ಆರೋಗ್ಯ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣ ಕ್ರಮಗಳನ್ನು ಸುಧಾರಿಸುವುದು ಹಾಗೂ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆಗೆ ಕಡಿವಾಣ ಹಾಕುವುದಕ್ಕೆ ಆದ್ಯತೆ ನೀಡಿ ರಾಜ್ಯಮಟ್ಟದ ಕಾರ್ಯಯೋಜನೆ ರೂಪಿಸಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ. ರಜನಿ ಎಂ. ಅವರು ‘ಕರ್ನಾಟಕ ಸ್ಟೇಟ್ ಆ್ಯಕ್ಷನ್ ಪ್ಲಾನ್ ಫಾರ್ ಕಂಟೈನ್‌ಮೆಂಟ್ ಆಫ್ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (KSAPCAR)’ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಜನಿ, ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ನಿಯಂತ್ರಣಕ್ಕೆ ಔಷಧಗಳ ಜವಾಬ್ದಾರಿಯುತ ಬಳಕೆ ಅತ್ಯಗತ್ಯ ಎಂದು ಒತ್ತಿಹೇಳಿದ್ದಾರೆ. ರೋಗ ಪತ್ತೆ ಮಾಡುವ ಪ್ರಯೋಗಾಲಯಗಳ ಸಾಮರ್ಥ್ಯ ಹೆಚ್ಚಿಸುವುದು, ರೋಗಗಳ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಆಸ್ಪತ್ರೆಗಳಲ್ಲಿ ಸೋಂಕು ತಡೆಗಟ್ಟುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯಕ್ಕೂ ಒತ್ತು
ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸಮಸ್ಯೆಯನ್ನು ಕೇವಲ ಮಾನವ ಆರೋಗ್ಯಕ್ಕೆ ಸೀಮಿತವಾಗಿ ನೋಡಬಾರದು. ಮಾನವರು, ಪ್ರಾಣಿಗಳು ಮತ್ತು ಪರಿಸರದ ಆರೋಗ್ಯ ಪರಸ್ಪರ ಸಂಬಂಧ ಹೊಂದಿರುವುದರಿಂದ ಎಲ್ಲ ಕ್ಷೇತ್ರಗಳಲ್ಲೂ ಸಮನ್ವಯದ ಪ್ರಯತ್ನ ಅಗತ್ಯವಿದೆ ಎಂದು ಡಾ. ರಜನಿ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ‘ವನ್ ಹೆಲ್ತ್’ ವಿಧಾನವನ್ನು ಅನುಸರಿಸಿ ಕಾರ್ಯಯೋಜನೆ ಜಾರಿಗೊಳಿಸುವಂತೆ ಕರೆ ನೀಡಿದ್ದಾರೆ.
ಈ ಕಾರ್ಯಯೋಜನೆಯನ್ನು ರಾಜ್ಯಮಟ್ಟಕ್ಕೆ ಸೀಮಿತಗೊಳಿಸದೆ ಜಿಲ್ಲಾ ಮಟ್ಟದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಮುಖ್ಯ ಎಂದು ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ವಿಭಾಗದ ಉಪನಿರ್ದೇಶಕ ಹಾಗೂ ರಾಜ್ಯ ನೋಡಲ್ ಅಧಿಕಾರಿ ಡಾ. ಚಂದ್ರಮೋಹನ್ ಕೆ.ಎನ್. ಹೇಳಿದ್ದಾರೆ.
ಆ್ಯಂಟಿಬಯೋಟಿಕ್ ಬಳಕೆ ಕುರಿತು ಜಾಗೃತಿ
ಕಾರ್ಯಾಗಾರದಲ್ಲಿ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ನಿಯಂತ್ರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳ ಕುರಿತು ತಜ್ಞರು ಚರ್ಚಿಸಿದರು. ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಮತ್ತು ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಸೋಂಕು ತಡೆ ಮತ್ತು ನಿಯಂತ್ರಣ ಹಾಗೂ ಆ್ಯಂಟಿಬಯೋಟಿಕ್‌ಗಳ ಸೂಕ್ತ ಬಳಕೆಯನ್ನು ಉತ್ತೇಜಿಸುವ ‘ಅವಾರೆ’ ಉಪಕ್ರಮದ ಕುರಿತು ಮಾಹಿತಿ ನೀಡಲಾಯಿತು.
ಅಲ್ಲದೆ, ‘ವನ್ ಹೆಲ್ತ್’ ಚೌಕಟ್ಟಿನಡಿ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಮೇಲ್ವಿಚಾರಣೆ ನಡೆಸುವ ವಿಧಾನಗಳ ಬಗ್ಗೆಯೂ ಚರ್ಚೆ ನಡೆಯಿತು. ಆ್ಯಂಟಿಬಯೋಟಿಕ್‌ಗಳ ಅನಗತ್ಯ ಬಳಕೆಯಿಂದ ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುವ ಸೂಕ್ಷ್ಮಜೀವಿಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ವ್ಯವಸ್ಥೆಯಲ್ಲಿ ಜಾಗೃತಿ ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು ಈ ಕಾರ್ಯಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




