AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಮುಖ್ಯ ಬಾಗಿಲಿನ ಮುಂದೆ ಈ ವಸ್ತುಗಳನ್ನು ಇಡಲೇಬೇಡಿ; ವಾಸ್ತು ಎಚ್ಚರಿಕೆ ಇಲ್ಲಿದೆ

ಮನೆ ಮುಖ್ಯ ದ್ವಾರವು ಸಕಾರಾತ್ಮಕ ಶಕ್ತಿಯ ಪ್ರವೇಶ ದ್ವಾರ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಬಾಗಿಲಿನ ಮುಂದೆ ಇಡುವುದು ನಕಾರಾತ್ಮಕ ಶಕ್ತಿ ತರಬಹುದು. ಕಸದ ಬುಟ್ಟಿ, ಮುರಿದ ವಸ್ತುಗಳು, ಮುಳ್ಳಿನ ಗಿಡಗಳು, ಚಪ್ಪಲಿ ಮುಂತಾದವುಗಳನ್ನು ದೂರವಿಡಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ. ಶುಚಿತ್ವ ಮತ್ತು ಅಚ್ಚುಕಟ್ಟುತನ ಕಾಪಾಡುವುದು ಮುಖ್ಯ.

ಮನೆಯ ಮುಖ್ಯ ಬಾಗಿಲಿನ ಮುಂದೆ ಈ ವಸ್ತುಗಳನ್ನು ಇಡಲೇಬೇಡಿ; ವಾಸ್ತು ಎಚ್ಚರಿಕೆ ಇಲ್ಲಿದೆ
ಮನೆಯ ಮುಖ್ಯ ದ್ವಾರImage Credit source: Pinterest
ಅಕ್ಷತಾ ವರ್ಕಾಡಿ
|

Updated on: Nov 22, 2026 | 8:00 AM

Share

ಮನೆ ಎಂದರೆ ಕೇವಲ ನಾಲ್ಕು ಗೋಡೆಗಳಿಂದ ನಿರ್ಮಾಣವಾದ ಕಟ್ಟಡವಲ್ಲ. ಅದು ಪ್ರತಿಯೊಬ್ಬರ ನೆಮ್ಮದಿ, ಸಂತೋಷ ಮತ್ತು ಸುಖ-ಸಮೃದ್ಧಿಯ ನೆಲೆಯಾಗಿದೆ. ಹೀಗಾಗಿ ಮನೆಯ ಪ್ರತಿಯೊಂದು ಭಾಗಕ್ಕೂ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಅದರಲ್ಲೂ ಮನೆಯ ಮುಖ್ಯ ಬಾಗಿಲನ್ನು ಅತ್ಯಂತ ಪ್ರಮುಖ ಸ್ಥಳವೆಂದು ಪರಿಗಣಿಸಲಾಗುತ್ತದೆ. ವಾಸ್ತು ನಂಬಿಕೆಗಳ ಪ್ರಕಾರ, ಮುಖ್ಯ ದ್ವಾರವು ಮನೆಗೆ ಸಕಾರಾತ್ಮಕ ಶಕ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ಸ್ವಾಗತಿಸುವ ಪ್ರವೇಶದ್ವಾರವಾಗಿದೆ.

ಹೀಗಾಗಿಯೇ ಮನೆಯ ಮುಖ್ಯ ಬಾಗಿಲಿನ ವಿನ್ಯಾಸ, ದಿಕ್ಕು, ಸ್ವಚ್ಛತೆ ಮತ್ತು ಅದರ ಸುತ್ತಮುತ್ತಲಿನ ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಕೆಲವೊಂದು ವಸ್ತುಗಳನ್ನು ಮುಖ್ಯ ಬಾಗಿಲಿನ ಮುಂದೆ ಇಡುವುದರಿಂದ ನಕಾರಾತ್ಮಕತೆ ಹೆಚ್ಚಾಗಬಹುದು ಎಂಬ ನಂಬಿಕೆಯೂ ಇದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿನ ಮುಂದೆ ಯಾವ ವಸ್ತುಗಳನ್ನು ಇಡಬಾರದು? ಅದರ ಹಿಂದಿನ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಸದ ಬುಟ್ಟಿ ಇಡಬಾರದು:

ಮನೆಯ ಮುಖ್ಯ ಬಾಗಿಲಿನ ಮುಂದೆ ಕಸದ ಬುಟ್ಟಿಯನ್ನು ಇಡುವುದು ಒಳ್ಳೆಯದಲ್ಲ ಎಂಬುದು ವಾಸ್ತು ನಂಬಿಕೆ. ಮುಖ್ಯ ದ್ವಾರ ಸ್ವಚ್ಛವಾಗಿರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಕಸದ ಬುಟ್ಟಿಯಿಂದ ದುರ್ವಾಸನೆ ಮತ್ತು ಕೊಳಕು ಉಂಟಾಗುವುದರಿಂದ ಮನೆಯ ಪ್ರವೇಶದ್ವಾರದ ಸೌಂದರ್ಯವೂ ಹಾಳಾಗುತ್ತದೆ. ಆದ್ದರಿಂದ ಕಸದ ಬುಟ್ಟಿಯನ್ನು ಮುಖ್ಯ ಬಾಗಿಲಿನಿಂದ ಸ್ವಲ್ಪ ದೂರದಲ್ಲಿ ಇಡುವುದು ಉತ್ತಮ.

ಮುರಿದ ವಸ್ತುಗಳು ಮತ್ತು ಹಳೆಯ ಪೀಠೋಪಕರಣಗಳು:

ಮುರಿದ ಕುರ್ಚಿ, ಹಳೆಯ ಮೇಜು, ಬಳಕೆಗೆ ಬಾರದ ವಸ್ತುಗಳು ಹಾಗೂ ಒಡೆದ ಪಾತ್ರೆಗಳನ್ನು ಮನೆಯ ಮುಖ್ಯ ಬಾಗಿಲಿನ ಮುಂದೆ ಸಂಗ್ರಹಿಸಿಡಬಾರದು ಎಂದು ಹೇಳಲಾಗುತ್ತದೆ. ಇವು ಮನೆಯ ಪ್ರವೇಶಕ್ಕೆ ಅಡ್ಡಿಯಾಗುವುದಲ್ಲದೆ, ಅಸ್ತವ್ಯಸ್ತ ವಾತಾವರಣವನ್ನೂ ಸೃಷ್ಟಿಸುತ್ತವೆ. ವಾಸ್ತು ನಂಬಿಕೆಗಳ ಪ್ರಕಾರ ಇಂತಹ ವಸ್ತುಗಳು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮುಳ್ಳಿನ ಗಿಡಗಳನ್ನು ಬೆಳೆಸಬಾರದು:

ಮನೆಯ ಮುಖ್ಯ ಬಾಗಿಲಿನ ಮುಂದೆ ಮುಳ್ಳಿನ ಗಿಡಗಳನ್ನು ಬೆಳೆಸುವುದು ಅಶುಭ ಎಂಬ ನಂಬಿಕೆಯಿದೆ. ವಿಶೇಷವಾಗಿ ಮುಳ್ಳುಗಳು ಪ್ರವೇಶದ್ವಾರದ ಕಡೆಗೆ ಚಾಚಿಕೊಂಡಿದ್ದರೆ ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸುವುದಿಲ್ಲ. ಇದಕ್ಕೆ ಬದಲಾಗಿ ಅಲಂಕಾರಿಕ ಮತ್ತು ಹಸಿರು ಗಿಡಗಳನ್ನು ಬೆಳೆಸುವುದರಿಂದ ಮನೆಯ ಪ್ರವೇಶದ್ವಾರ ಸುಂದರವಾಗಿ ಕಾಣುತ್ತದೆ.

ಚಪ್ಪಲಿ ಮತ್ತು ಶೂಗಳನ್ನು ಹರಡಬಾರದು:

ಮನೆಯ ಮುಖ್ಯ ಬಾಗಿಲಿನ ಮುಂದೆ ಎಲ್ಲೆಂದರಲ್ಲಿ ಚಪ್ಪಲಿ, ಶೂಗಳನ್ನು ಹರಡಿಡುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಪ್ರವೇಶದ್ವಾರ ಅಸ್ತವ್ಯಸ್ತವಾಗಿ ಕಾಣುವುದಲ್ಲದೆ, ಓಡಾಡಲು ತೊಂದರೆಯಾಗಬಹುದು. ವಾಸ್ತು ಪ್ರಕಾರ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಹೀಗಾಗಿ ಚಪ್ಪಲಿ ಮತ್ತು ಶೂಗಳನ್ನು ಪ್ರತ್ಯೇಕವಾದ ಶೂ ರ್ಯಾಕ್‌ನಲ್ಲಿ ಜೋಡಿಸಿಡುವುದು ಉತ್ತಮ.

ಇದನ್ನೂ ಓದಿ: ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

ನೀರು ನಿಲ್ಲುವಂತೆ ಮಾಡಬಾರದು:

ಮನೆಯ ಮುಖ್ಯ ಬಾಗಿಲಿನ ಮುಂದೆ ನೀರು ನಿಲ್ಲುವುದು ಅಥವಾ ಚರಂಡಿ ನೀರು ಹರಿಯುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಪ್ರವೇಶದ್ವಾರದಲ್ಲಿ ಕೊಳಕು ನೀರು ನಿಲ್ಲುವುದು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರಾಯೋಗಿಕವಾಗಿಯೂ ಸೊಳ್ಳೆಗಳ ಉತ್ಪತ್ತಿ, ದುರ್ವಾಸನೆ ಮತ್ತು ಅನಾರೋಗ್ಯದ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಹೀಗಾಗಿ ಮುಖ್ಯ ಬಾಗಿಲಿನ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಮನೆಯ ಮುಖ್ಯ ಬಾಗಿಲು ಯಾವಾಗಲೂ ಸ್ವಚ್ಛವಾಗಿರಲಿ:

ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ ಮನೆಯ ಮುಖ್ಯ ಬಾಗಿಲು ಸಕಾರಾತ್ಮಕ ಶಕ್ತಿಯ ಪ್ರವೇಶದ್ವಾರವಾಗಿದೆ. ಆದ್ದರಿಂದ ಇಲ್ಲಿ ಸ್ವಚ್ಛತೆ, ಬೆಳಕು ಮತ್ತು ಅಚ್ಚುಕಟ್ಟುತನಕ್ಕೆ ಆದ್ಯತೆ ನೀಡಬೇಕು. ಪ್ರತಿದಿನ ಮುಖ್ಯ ಬಾಗಿಲಿನ ಮುಂಭಾಗವನ್ನು ಸ್ವಚ್ಛಗೊಳಿಸಿ, ಸುಂದರವಾದ ರಂಗೋಲಿ ಹಾಕುವುದು, ಶುಭ ಸಂಕೇತಗಳನ್ನು ಅಳವಡಿಸುವುದು ಮತ್ತು ಹಸಿರು ಗಿಡಗಳಿಂದ ಅಲಂಕರಿಸುವುದು ಉತ್ತಮವೆಂದು ನಂಬಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More