ಸಮಂತಾ ಮಗುವಿಗಾಗಿ ದೇವಸ್ಥಾನ, ಚರ್ಚ್, ದರ್ಗಾದಲ್ಲಿ ಪ್ರಾರ್ಥಿಸಿದ ರಾಜ್ ನಿಡಿಮೋರು ಸಹೋದರಿ
ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ದೇಶಕ ರಾಜ್ ನಿಡಿಮೋರು ಅವರ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಈ ದಂಪತಿಗೆ ಗಂಡು ಮಗು ಜನಿಸಿದ್ದು, ದೇವ್ ನಿಡಿಮೋರು ಎಂದು ಹೆಸರು ಇಡಲಾಗಿದೆ. ಮಗುವಿನ ಶ್ರೇಯಸ್ಸಿಗಾಗಿ ದೇವಸ್ಥಾನ, ಚರ್ಚ್ ಮತ್ತು ದರ್ಗಾದಲ್ಲಿ ಪ್ರಾರ್ಥನೆ ಮಾಡಲಾಗಿದೆ.

ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿ ಇತ್ತೀಚೆಗಷ್ಟೇ ತಮಗೆ ಮೊದಲ ಮಗು ಜನಿಸಿದ ಸುದ್ದಿಯನ್ನು ಹಂಚಿಕೊಂಡರು. ಸಮಂತಾ ಅವರು ನವೆಂಬರ್ 19ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ದೇವ್ ನಿಡಿಮೋರು ಎಂದು ನಾಮಕರಣ ಮಾಡಿದ್ದಾರೆ. ಇದೀಗ ಪುಟ್ಟ ಕಂದಮ್ಮನ ಒಳಿತಿಗಾಗಿ ರಾಜ್ ಅವರ ಸಹೋದರಿ ಶೀತಲ್ ಅವರು ಸರ್ವಧರ್ಮ ಸಮಭಾವ ಮೆರೆದಿದ್ದು, ಮುಂಬೈನ ಪ್ರಸಿದ್ಧ ದೇವಸ್ಥಾನ, ದರ್ಗಾ ಹಾಗೂ ಚರ್ಚ್‌ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಗುವಿನ ಜನನದ ಸಂಭ್ರಮದಲ್ಲಿರುವ ರಾಜ್ ಅವರ ಸಹೋದರಿ ಶೀತಲ್, ತಮ್ಮ ಚಿಕ್ಕಮ್ಮನೊಂದಿಗೆ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನ, ಹಾಜಿ ಅಲಿ ದರ್ಗಾ ಮತ್ತು ಸೇಂಟ್ ಮೈಕೆಲ್ ಚರ್ಚ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಪುಟ್ಟ ದೇವ್‌ನನ್ನು ‘ದೇವರು ನೀಡಿದ ಅಮೂಲ್ಯ ಉಡುಗೊರೆ’ ಎಂದು ಬಣ್ಣಿಸಿದ್ದಾರೆ. ವಿಶೇಷವೆಂದರೆ, ಶೀತಲ್ ಅವರು ಏಕಾದಶಿಯ ದಿನದಂದು ಉಪವಾಸವಿದ್ದುಕೊಂಡೇ ಈ ಮೂರೂ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಮಗುವಿಗಾಗಿ ಪ್ರಾರ್ಥಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿರುವ ಶೀತಲ್, ‘ಅಮ್ಮ ಮಗುವಿಗೆ ಪ್ರೀತಿಯಿಂದ ದೃಷ್ಟಿ ತೆಗೆದಾಗ, ಅವನ ಮೇಲೆ ಬೀಳುವ ಪ್ರತಿಯೊಂದು ನೋಟವೂ ಆಶೀರ್ವಾದವಾಗಿ ಬದಲಾಗಲಿ ಎಂಬುದೇ ನಮ್ಮ ಆಶಯವಾಗಿತ್ತು. ದೇವ್ ಎಲ್ಲಾ ಜನರನ್ನು ಪ್ರೀತಿಸುತ್ತಾ, ಪ್ರತಿಯೊಂದು ಧರ್ಮವನ್ನೂ ಗೌರವಿಸುತ್ತಾ, ನಮ್ಮೆಲ್ಲರನ್ನೂ ಬೆಸೆಯುವ ವಿವೇಕವನ್ನು ಕಂಡುಕೊಳ್ಳುತ್ತಾ ಬೆಳೆಯಲಿ. ರಾಜ್ ಮತ್ತು ಸ್ಯಾಮ್ ತಮ್ಮ ಪುಟ್ಟ ಮಗನೊಂದಿಗೆ ಬೆಳೆಯುತ್ತಾ ಜೀವನದಲ್ಲಿ ಇನ್ನಷ್ಟು ಆಳವಾದ ಪ್ರೀತಿ, ಸಂತೋಷ ಮತ್ತು ಸಾರ್ಥಕತೆಯನ್ನು ಕಂಡುಕೊಳ್ಳಲಿ’ ಎಂದು ಹಾರೈಸಿದ್ದಾರೆ.
View this post on Instagram
ಈ ಪ್ರಾರ್ಥನೆಯ ಬಳಿಕ ಹಾಜಿ ಅಲಿ ಜ್ಯೂಸ್ ಸೆಂಟರ್‌ನಲ್ಲಿ ಸೀತಾಫಲ ಕ್ರೀಮ್ ಸವಿಯುವ ಮೂಲಕ ಮಗುವಿನ ಜನನವನ್ನು ಸಂಭ್ರಮಿಸಿದ್ದಾಗಿ ತಿಳಿಸಿರುವ ಅವರು, ‘ಸರ್ವ ಮಂಗಳಾನಿ ಭವಂತು’ ಎಂದು ಬರೆದು ಪೋಸ್ಟ್ ಪೂರ್ಣಗೊಳಿಸಿದ್ದಾರೆ.
ಶುಕ್ರವಾರ (ನವೆಂಬರ್ 20) ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನ ಪುಟ್ಟ ಕೈ ತಾಯಿಯ ಬೆರಳನ್ನು ಹಿಡಿದಿರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದರು. ‘ನಮ್ಮ ಮುದ್ದಾದ ಗಂಡು ಮಗು ದೇವ್ ನಿಡಿಮೋರು. 19.11.2026. ನಮ್ಮ ಹೃದಯಗಳು ಎಂದಿಗಿಂತಲೂ ಹೆಚ್ಚು ಸಂತೋಷದಿಂದ ತುಂಬಿವೆ’ ಎಂದು ಬರೆದು ಸಿಹಿ ಸುದ್ದಿ ನೀಡಿದ್ದರು.
ಇದನ್ನೂ ಓದಿ: ಈ ವರ್ಷ ತಾಯಿಯಾದ ನಟಿಯರು, ಸಮಂತಾ ಮತ್ತು ಇನ್ಯಾರ್ಯಾರು?
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಯನತಾರಾ, ತ್ರಿಷಾ ಕೃಷ್ಣನ್, ಚಿನ್ಮಯಿ ಶ್ರೀಪಾದ, ಲಕ್ಷ್ಮಿ ಮಂಚು, ಉಪಾಸನಾ ಕೊನಿಡೇಲಾ, ಕಾಜಲ್ ಅಗರ್ವಾಲ್, ವರಲಕ್ಷ್ಮಿ ಶರತ್‌ಕುಮಾರ್, ನಜ್ರಿಯಾ ನಜೀಮ್, ವಿಕ್ಕಿ ಕೌಶಲ್ ಸೇರಿದಂತೆ ಹಲವು ತಾರೆಯರು ಈ ದಂಪತಿಗೆ ಶುಭ ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




