ಗಂಡು ಮಗುವಿಗೆ ಜನ್ಮ ನೀಡಿದ ಸಮಂತಾ; ಮಗನಿಗೆ ಸುಂದರ ಹೆಸರಿಟ್ಟು ಮೊದಲ ಫೋಟೋ ಹಂಚಿಕೊಂಡ ದಂಪತಿ
ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿ ಗಂಡು ಮಗುವಿಗೆ ಪೋಷಕರಾಗಿದ್ದಾರೆ. ನವೆಂಬರ್ 19ರಂದು ಜನಿಸಿದ ತಮ್ಮ ಮೊದಲ ಮಗುವಿಗೆ 'ದೇವ್ ನಿಡಿಮೋರು' ಎಂದು ಹೆಸರಿಟ್ಟಿರುವುದಾಗಿ ತಿಳಿಸಿರುವ ಸಮಂತಾ, ಮಗುವಿನ ಮೊದಲ ಸುಂದರ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಮಗನಿಗೆ 'ದೇವ್ ನಿಡಿಮೋರು' ಎಂದು ಸುಂದರ ಹೆಸರಿಟ್ಟ ದಂಪತಿ
- ಗರ್ಭಾವಸ್ಥೆಯಲ್ಲೂ ಜಿಮ್ ವರ್ಕೌಟ್, ವಿಶೇಷ ಪೂಜೆ ಮಾಡಿದ್ದ ನಟಿ
- 2025ರಲ್ಲಿ ಇಶಾ ಯೋಗ ಕೇಂದ್ರದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ನವೆಂಬರ್ 19ರಂದು ಸಮಂತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂದು (ನವೆಂಬರ್ 20) ಸಾಮಾಜಿಕ ಜಾಲತಾಣದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಮೊದಲ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, ಮಗನಿಗೆ ದೇವ್ ನಿಡಿಮೋರುಎಂದು ಸುಂದರವಾದ ಹೆಸರಿಟ್ಟಿದ್ದಾರೆ. ನಮ್ಮ ಹೃದಯಗಳು ಎಂದಿಗಿಂತಲೂ ಹೆಚ್ಚು ಸಂತೋಷದಿಂದ ತುಂಬಿವೆ ಎಂದು ಸಮಂತಾ ಭಾವುಕರಾಗಿ ಬರೆದುಕೊಂಡಿದ್ದಾರೆ.
ಗರ್ಭಿಣಿಯಾದಾಗಿನಿಂದಲೂ ಸಮಂತಾ ತಮ್ಮ ಪ್ರತಿಯೊಂದು ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಗರ್ಭಾವಸ್ಥೆಯಲ್ಲೂ ಜಿಮ್ ಮತ್ತು ವರ್ಕೌಟ್ ಮಾಡುತ್ತಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಅವರು ಗಮನ ಸೆಳೆದಿದ್ದರು. ಕೆಲವೇ ದಿನಗಳ ಹಿಂದೆ ತಾಯಿ ಮತ್ತು ಮಗುವಿನ ಒಳಿತಿಗಾಗಿ ನಡೆದ ವಿಶೇಷ ಪೂಜೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಸಂಪ್ರದಾಯದ ಹಿನ್ನೆಲೆ ವಿವರಿಸಿದ್ದರು.
ಸಮಂತಾ ಮತ್ತು ಖ್ಯಾತ ನಿರ್ದೇಶಕ ರಾಜ್ ನಿಡಿಮೋರು 2025ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಸರಳ ವಿವಾಹದಲ್ಲಿ ಹೊಸ ಬಾಳು ಆರಂಭಿಸಿದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಈ ಜೋಡಿ ಅಧಿಕೃತವಾಗಿ ಘೋಷಿಸಿತ್ತು. ಇದೀಗ ಮಗುವಿನ ಆಗಮನದಿಂದ ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿದೆ.
View this post on Instagram
ವೃತ್ತಿಜೀವನದ ವಿಚಾರಕ್ಕೆ ಬಂದರೆ, ಸಮಂತಾ ಮತ್ತು ರಾಜ್ ನಿಡಿಮೋರು ಒಟ್ಟಿಗೆ ಹಲವು ಯಶಸ್ವಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸಿಟಾಡೆಲ್: ಹನಿ ಬನ್ನಿ’ ವೆಬ್ ಸರಣಿಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ರಾಜ್ ನಿಡಿಮೋರು ಅವರು ‘ರಾಜ್ ಮತ್ತು ಡಿಕೆ’ ನಿರ್ದೇಶಕ ಜೋಡಿಯ ಪ್ರಮುಖರಾಗಿದ್ದು, ‘ಫರ್ಜಿ’ ಮತ್ತು ‘ಫ್ಯಾಮಿಲಿ ಮ್ಯಾನ್’ ಅಂತಹ ಸೂಪರ್ ಹಿಟ್ ಸರಣಿಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಮಗುವಿನ ಆಗಮನದ ಹೊಸ್ತಿಲಲ್ಲಿ ಸಮಂತಾ-ರಾಜ್ ಮನೆಯಲ್ಲಿ ಸಂಭ್ರಮದ ಪೂಜೆ
ಸಮಂತಾ ಕೊನೆಯದಾಗಿ ನಂದಿನಿ ರೆಡ್ಡಿ ನಿರ್ದೇಶನದ ‘ಮಾ ಇಂಟಿ ಬಂಗಾರಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ ಈ ಚಿತ್ರದ ಕಥೆ ಮತ್ತು ಚಿತ್ರಕಥೆಯಲ್ಲಿ ರಾಜ್ ನಿಡಿಮೋರು ಕೂಡ ಭಾಗಿಯಾಗಿದ್ದರು. ಸದ್ಯ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿರುವ ಈ ದಂಪತಿಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




