ಆಪರೇಷನ್ ಸಿಂಧೂರ್ ಬಳಿಕ ಮೊದಲ ಪಾಕ್ ಸಚಿವರ ಭೇಟಿ, ದೆಹಲಿಗೆ ಬಂದಿಳಿದ ಮುಸಾದಿಕ್ ಮಲಿಕ್
ಆಪರೇಷನ್ ಸಿಂಧೂರ್ ಬಳಿಕ ಪಾಕ್ ಸಚಿವ ಮುಸಾದಿಕ್ ಮಲಿಕ್ ದೆಹಲಿಗೆ ಆಗಮಿಸಿದ್ದಾರೆ. ನವೆಂಬರ್ 20ರಂದು ಆರಂಭವಾದ ಎಸ್‌ಸಿಒ ನಾಗರಿಕತೆಗಳ ಸಂವಾದ ವೇದಿಕೆಯಲ್ಲಿ ಭಾಗವಹಿಸಲು ಬಂದಿದ್ದಾರೆ. ಸಿಂಧೂ ನದಿ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಇವರ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದು ಬಹುಪಕ್ಷೀಯ ಕಾರ್ಯಕ್ರಮ, ದ್ವಿಪಕ್ಷೀಯ ಮಾತುಕತೆಯಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ನವದೆಹಲಿ, ನವೆಂಬರ್ 20: ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಬಿಗುವಿನಿಂದ ಕೂಡಿರುವ ನಡುವೆಯೇ, ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಪಾಕಿಸ್ತಾನದ ಹವಾಮಾನ ಬದಲಾವಣೆ ಮತ್ತು ಪರಿಸರ ಸಮನ್ವಯ ಸಚಿವ ಮುಸಾದಿಕ್ ಮಸೂದ್ ಮಲಿಕ್ ಶುಕ್ರವಾರ (ನವೆಂಬರ್ 20) ನವದೆಹಲಿಗೆ ಬಂದಿಳಿದಿದ್ದಾರೆ. ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ ನಾಗರಿಕತೆಗಳ ಸಂವಾದ ವೇದಿಕೆಯಲ್ಲಿ ಅವರು ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸಲಿದ್ದಾರೆ.
2023ರ ಮೇ ತಿಂಗಳಲ್ಲಿ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಗೋವಾದಲ್ಲಿ ನಡೆದ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಪಾಕಿಸ್ತಾನಿ ಫೆಡರಲ್ ಸಚಿವ ಮುಸಾದಿಕ್ ಮಲಿಕ್. 2025ರ ಮೇ ತಿಂಗಳಲ್ಲಿ ಉಭಯ ದೇಶಗಳ ನಡುವೆ ನಡೆದ ನಾಲ್ಕು ದಿನಗಳ ಸೈನಿಕ ಸಂಘರ್ಷದ ಬಳಿಕ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಬರುತ್ತಿರುವುದು ಇದೇ ಮೊದಲು.
ಏನಿದು ಎಸ್‌ಸಿಒ ನಾಗರಿಕತೆಗಳ ಸಂವಾದ ವೇದಿಕೆ?
ಎಸ್‌ಸಿಒ ಎಂದರೆ ಶಾಂಘೈ ಸಹಕಾರ ಸಂಘಟನೆ. ಇದು ಏಷ್ಯಾ ಮತ್ತು ಯುರೇಷಿಯಾ ಪ್ರದೇಶದ ರಾಷ್ಟ್ರಗಳ ನಡುವಿನ ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಸಾಂಸ್ಕೃತಿಕ ಸಹಕಾರವನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಸಂಘಟನೆ. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ ಸೇರಿದಂತೆ ಒಟ್ಟು 10 ರಾಷ್ಟ್ರಗಳು ಇದರ ಸದಸ್ಯರಾಗಿವೆ.
ಎಸ್‌ಸಿಒ ನಾಗರಿಕತೆಗಳ ಸಂವಾದ ವೇದಿಕೆ ಮೊದಲ ಬಾರಿಗೆ ನಡೆಯುತ್ತಿದೆ. ವಿವಿಧ ದೇಶಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆಗಳ ನಡುವಿನ ಸಾಮ್ಯತೆಗಳನ್ನು ಚರ್ಚಿಸುವುದು ಇದರ ಉದ್ದೇಶ. ನವದೆಹಲಿಯ ಪುರಾಣ ಕಿಲ್ಲಾದಲ್ಲಿ ನಡೆಯುವ ಈ ಮೂರು ದಿನಗಳ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 20ರಂದು ಉದ್ಘಾಟಿಸಲಿದ್ದಾರೆ.
ನವೆಂಬರ್ 21 ಮತ್ತು 22ರಂದು ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ, ಹಸ್ತಪ್ರತಿಗಳು ಹಾಗೂ ತಾತ್ವಿಕ ಪರಂಪರೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. SCO ಸದಸ್ಯ ರಾಷ್ಟ್ರಗಳ ಜೊತೆಗೆ ವೀಕ್ಷಕ ರಾಷ್ಟ್ರಗಳು ಮತ್ತು ಸಂವಾದ ಪಾಲುದಾರರಿಗೂ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ ಮಾತುಕತೆಗೆ ಸಿದ್ಧ: ಚಿಕಾಗೋದಲ್ಲಿ ರಾಹುಲ್ ಗಾಂಧಿ
ಸಿಂಧೂ ನದಿ ನೀರಿನ ವಿಚಾರದಲ್ಲಿ ಭಾರತಕ್ಕೆ ಬೆದರಿಕೆ ಹಾಕಿದ್ದ ಸಚಿವ
ಮುಸಾದಿಕ್ ಮಲಿಕ್ ಅವರ ಭಾರತ ಭೇಟಿ ರಾಜಕೀಯವಾಗಿಯೂ ಗಮನ ಸೆಳೆದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿಯುವ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ನಿರ್ಧಾರವನ್ನು ಟೀಕಿಸಿದ್ದ ನಾಯಕರಲ್ಲಿ ಮುಸಾದಿಕ್ ಮಲಿಕ್ ಕೂಡ ಒಬ್ಬರು.
ಜೂನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ನಮ್ಮ ನೀರನ್ನು ಮುಟ್ಟುವವರ ಕೈಗಳನ್ನು ಕತ್ತರಿಸಲಾಗುವುದು’ ಎಂಬ ಬೆದರಿಕೆಯ ಮಾತುಗಳನ್ನಾಡಿದ್ದರು. ಹೀಗಾಗಿ ಭಾರತಕ್ಕೆ ಭೇಟಿ ನೀಡುತ್ತಿರುವ ಅವರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರ ಆಹ್ವಾನದ ಮೇರೆಗೆ ಮಲಿಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನಾಗರಿಕತೆಗಳ ನಡುವಿನ ಸಂವಾದದ ಮಹತ್ವ, ಪಾಕಿಸ್ತಾನದ ಸಾಂಸ್ಕೃತಿಕ ಪರಂಪರೆ ಹಾಗೂ ಈ ಕ್ಷೇತ್ರದಲ್ಲಿ ಪಾಕಿಸ್ತಾನದ ಕೊಡುಗೆಯ ಬಗ್ಗೆ ಅವರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
ಪಾಕ್ ಸಚಿವರ ಭೇಟಿಗೆ ಕಾಂಗ್ರೆಸ್ ವಿರೋಧ
ಪಾಕಿಸ್ತಾನಿ ಸಚಿವರ ಭಾರತ ಭೇಟಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಭಾರತಕ್ಕೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ ಆಹ್ವಾನ ನೀಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸಿಂಧೂ ನದಿ ನೀರಿನ ವಿಚಾರದಲ್ಲಿ ಮಲಿಕ್ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ, ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ನಿಲ್ಲಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಪಾಕಿಸ್ತಾನದ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲದ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ.
ಇನ್ನೊಂದೆಡೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನದಿಂದ ಭಾರತದಲ್ಲಿ ನಡೆಯುವ ಭಯೋತ್ಪಾದನೆಗೆ ಬೆಂಬಲ ಮತ್ತು ಪ್ರೋತ್ಸಾಹ ನಿಲ್ಲಬೇಕು ಎಂದು ಹೇಳಿದ್ದಾರೆ. ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದು ಭಾರತ–ಪಾಕ್ ದ್ವಿಪಕ್ಷೀಯ ಮಾತುಕತೆಯೇ?
ಈ ಭೇಟಿಯ ಬಗ್ಗೆ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ಇದು ಎಸ್‌ಸಿಒ ಚೌಕಟ್ಟಿನಲ್ಲಿನ ಬಹುಪಕ್ಷೀಯ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಹೀಗಾಗಿ ಮುಸಾದಿಕ್ ಮಲಿಕ್ ಅವರ ಭೇಟಿ ಭಾರತ–ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ಅಥವಾ ಸಂಬಂಧ ಸುಧಾರಣೆಯ ಅಧಿಕೃತ ಹೆಜ್ಜೆ ಎಂದು ಅರ್ಥೈಸಲು ಸಾಧ್ಯವಿಲ್ಲ. ಸದ್ಯಕ್ಕೆ ಅವರ ಭೇಟಿಯ ಉದ್ದೇಶ ಎಸ್‌ಸಿಒ ವೇದಿಕೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದಾಗಿದೆ. 2025ರ ಪಹಲ್ಗಾಮ್ ದಾಳಿ ಮತ್ತು ಅದರ ಬಳಿಕ ನಡೆದ ಆಪರೇಷನ್ ಸಿಂಧೂರ್‌ನಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಆಗಮಿಸಿರುವುದು ರಾಜತಾಂತ್ರಿಕವಾಗಿ ಮಹತ್ವ ಪಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




