‘ಜೀವನದಲ್ಲಿ ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು’; ಕಿರಣ್ ರಾಜ್
ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಕಿರಣ್ ರಾಜ್ ಈಗ ಸಿನಿಮಾ ರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಲು ಹೊರಟಿದ್ದಾರೆ. ಜಾಕಿ 42 ಸಿನಿಮಾ ತಮ್ಮ ಪಾಲಿಗೆ ದೊಡ್ಡ ಬೆಟ್ಟಿಂಗ್ ಇದ್ದಂತೆ ಎಂದು ಹೇಳಿದ್ದಾರೆ. ಗುರುತೇಜ್ ಶೆಟ್ಟಿ ಹಾಗೂ ತಮ್ಮ ಹತ್ತು ವರ್ಷದ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ಕಿರುತೆರೆಯಿಂದ ಸಿನಿಮಾ ರಂಗಕ್ಕೆ ಜಿಗಿಯಲು ಸಜ್ಜಾದ ನಟ ಕಿರಣ್ ರಾಜ್
- ಮಣ್ಣಾಗುವ ಮುನ್ನ ಶಿಲೆಯಾಗಿ ನಿಲ್ಲಬೇಕು
- 'ಜಾಕಿ 42' ಬಗ್ಗೆ ಕಿರಣ್ ರಾಜ್ ಭಾವುಕ ಮಾತು
ನಟ ಕಿರಣ್ ರಾಜ್ ಅವರು ಕಿರುತೆರೆಯಿಂದ ಬೆಳ್ಳಿತೆರೆಯತ್ತ ಹೆಜ್ಜೆ ಹಾಕಲು ಮತ್ತೊಮ್ಮೆ ಸಜ್ಜಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡಿರುವ ಅವರು ಈಗ ‘ಜಾಕಿ 42’ ಸಿನಿಮಾ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂಬ ಆಸೆ ಹೊಂದಿದ್ದಾರೆ. ಈ ಸಿನಿಮಾ ತಮ್ಮ ಪಾಲಿಗೆ ದೊಡ್ಡ ಬೆಟ್ಟಿಂಗ್ ಇದ್ದಂತೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ತಮ್ಮ ಹತ್ತು ವರ್ಷದ ಪಯಣವನ್ನು ಕಿರಣ್ ರಾಜ್ ನೆನಪಿಸಿಕೊಂಡಿದ್ದಾರೆ. ‘ಈ ಕ್ಷೇತ್ರಕ್ಕೆ ಬಂದಾಗ ತಮಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಇಲ್ಲಿನ ನಿಯಮಗಳನ್ನು ಕಲಿತು ಜಾರಿಗೆ ತರುವ ಹಾದಿಯಲ್ಲಿ ಮಾಧ್ಯಮಗಳು ಸಾಥ್ ನೀಡಿವೆ. ಕಿರುತೆರೆಯಲ್ಲಿ ಪ್ರೇಕ್ಷಕರು ಮತ್ತು ಮಾಧ್ಯಮಗಳು ನೀಡಿದ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದಿದ್ದಾರೆ.
ತಮ್ಮ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಸಿಗದಿದ್ದಾಗ ಕೆಲವೊಮ್ಮೆ ಕಟ್ಟಿಹಾಕಿದಂತೆ ಭಾಸವಾಗುತ್ತದೆ ಎಂದಿದ್ದಾರೆ. ಹಾಗಾಗಿ ಈಗ ಟಿವಿಯಿಂದ ಸಿನಿಮಾ ರಂಗದ ಕಡೆ ಜಿಗಿಯಲು ಬಯಸಿದ್ದಾರೆ. ಶುಕ್ರವಾರದ ರೇಸ್‌ನಲ್ಲಿ ಗೆಲ್ಲಲು ತಾವು ಸಜ್ಜಾಗಿದ್ದಾಗಿ ಹೇಳಿದ್ದಾರೆ. ತಮ್ಮ ಬದುಕು ಕೂಡ ಒಂದು ಜೂಜಿನಂತೆ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಸೋತಾಗಲೆಲ್ಲ ಕಲ್ಲಿಗೆ ಏಟು ಬಿದ್ದಾಗಲೇ ಅದು ಶಿಲೆಯಾಗುತ್ತದೆ ಎಂಬ ಮಾತು ನೆನಪಾಗುತ್ತದೆ. ಆದರೆ ಏಟು ಬೀಳುತ್ತಲೇ ಇದ್ದರೆ ಕಲ್ಲು ಮಣ್ಣಾಗುತ್ತದೆ. ಮಣ್ಣಾಗುವ ಮುನ್ನ ಜೀವನದಲ್ಲಿ ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು’ ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಕುಟುಂಬ ಮತ್ತು ಸ್ನೇಹಿತರನ್ನೆಲ್ಲ ಬಿಟ್ಟು ಗೆಲುವಿನ ಹಿಂದೆ ಓಡುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪಾರ್ಟಿ ಜೋಶ್ ಹೆಚ್ಚಿಸಲು ಬಂದ ‘ಸೆಲ್ಫಿ ಸರೋಜಾ’; ಕಿರಣ್ ರಾಜ್ ಸಿನಿಮಾದಿಂದ ಹೊಸ ಹಾಡು
ನಿರ್ದೇಶಕ ಗುರುತೇಜ್ ಶೆಟ್ಟಿ ಅವರನ್ನು ಕಿರಣ್ ರಾಜ್ ಸ್ಮರಿಸಿದ್ದಾರೆ. ಮೂರು ಸಿನಿಮಾಗಳ ಪಾತ್ರ ಬರೆಯುವಾಗ ತಾವು ನೆನಪಾಗಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಅದೃಷ್ಟದ ಜೊತೆಗೆ ನಮ್ಮ ಸಿದ್ಧತೆಯೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್ 18ರಂದು ‘ಜಾಕಿ 42’ ಚಿತ್ರ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




