- TV9 Kannada Kannada News Photos Cricket Photos Yashasvi Jaiswal IPL Future: RR Considers Trade Amidst Exit Rumors
ನಾಯಕತ್ವ ಬದಲಾವಣೆ ಬಳಿಕ ರಾಜಸ್ಥಾನ್‌ನಲ್ಲಿ ಬಿರುಕು?; ತಂಡ ತೊರೆಯಲು ಜೈಸ್ವಾಲ್ ನಿರ್ಧಾರ
ಐಪಿಎಲ್ 2027ರ ಆಟಗಾರರ ಉಳಿಸಿಕೊಳ್ಳುವ ಪ್ರಕ್ರಿಯೆ ಮುಗಿದರೂ, ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡ ತೊರೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಜೈಸ್ವಾಲ್ ಅವರನ್ನು ಬೇರೆ ತಂಡಕ್ಕೆ ವರ್ಗಾಯಿಸಲು ರಾಜಸ್ಥಾನ್ ಚಿಂತಿಸುತ್ತಿದೆ. ಲಕ್ನೋ ಮತ್ತು ದೆಹಲಿ ಜೊತೆಗಿನ ಮಾತುಕತೆ ವಿಫಲವಾದರೂ, ಮುಂಬೈ ಮತ್ತು ಕೆಕೆಆರ್ ಆಸಕ್ತಿ ತೋರಿಸಿವೆ. ಜೈಸ್ವಾಲ್ ಭವಿಷ್ಯ ಈಗ ಕುತೂಹಲ ಮೂಡಿಸಿದೆ.
Updated on: Nov 19, 2026 | 4:53 PM

ಐಪಿಎಲ್ ಆಟಗಾರರ ಉಳಿಸಿಕೊಳ್ಳುವ ಪ್ರಕ್ರಿಯೆ ಮುಗಿದಿದ್ದರೂ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅವರ ಭವಿಷ್ಯ ಮಾತ್ರ ಇನ್ನೂ ನಿರ್ಧಾರವಾಗಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ತಂಡವನ್ನು ತೊರೆಯುವ ಇಂಗಿತವನ್ನು ಜೈಸ್ವಾಲ್ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರನ್ನು ಬೇರೆ ತಂಡಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ರಾಜಸ್ಥಾನ್ ರಾಯಲ್ಸ್ ಚಿಂತನೆ ನಡೆಸುತ್ತಿದೆ(PC-PTI).

ಜೈಸ್ವಾಲ್ ಅವರನ್ನು ಪಡೆಯಲು ಬೇರೆ ಫ್ರಾಂಚೈಸಿಗಳಿಂದ ಉತ್ತಮ ಪ್ರಸ್ತಾಪ ಬಂದರೆ, ರಾಜಸ್ಥಾನ್ ತಂಡ ಅವರನ್ನು ಬಿಟ್ಟುಕೊಡುವ ಸಾಧ್ಯತೆಯೂ ಇದೆ. ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜು ಮುಗಿದ ಬಳಿಕವೂ ಜೈಸ್ವಾಲ್ ಅವರ ಬದಲಿ ಆಟಗಾರನ ಹುಡುಕಾಟ ಮುಂದುವರಿಯಬಹುದು ಎನ್ನಲಾಗಿದೆ(PC-PTI).

ಕಳೆದ ಎರಡು ತಿಂಗಳಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಹಲವು ಫ್ರಾಂಚೈಸಿಗಳ ಜೊತೆ ಜೈಸ್ವಾಲ್ ವರ್ಗಾವಣೆ ಕುರಿತು ಮಾತುಕತೆ ನಡೆಸಿದೆ. ಆದರೆ ಈವರೆಗೂ ಯಾವುದೇ ಒಪ್ಪಂದ ಅಂತಿಮಗೊಂಡಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಜೊತೆ ಉಳಿಸಿಕೊಳ್ಳುವ ಗಡುವಿನ ಕೊನೆಯವರೆಗೂ ಮಾತುಕತೆ ನಡೆದಿತ್ತು. ಆದರೆ ಜೈಸ್ವಾಲ್ ಅವರನ್ನು ಬಿಟ್ಟುಕೊಡಲು ಪ್ರತಿಯಾಗಿ ರಾಜಸ್ಥಾನ್ ಕೇಳಿದ್ದ ಇಬ್ಬರು ಆಟಗಾರರನ್ನು ನೀಡಲು ಲಕ್ನೋ ಒಪ್ಪಿರಲಿಲ್ಲ. ಹೀಗಾಗಿ ಮಾತುಕತೆ ಮುಂದುವರಿಯಲಿಲ್ಲ(PC-PTI).

ಇನ್ನು ದೆಹಲಿ ಕ್ಯಾಪಿಟಲ್ಸ್ ಕೂಡ ಜೈಸ್ವಾಲ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿತ್ತು ಎನ್ನಲಾಗಿದೆ. ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಬಲ್ಲ ಅನುಭವಿ ಆಟಗಾರನ ಹುಡುಕಾಟದಲ್ಲಿ ದೆಹಲಿ ತಂಡವಿತ್ತು. ಆದರೆ ದೆಹಲಿ ನೀಡಿದ ಆಟಗಾರರ ಆಯ್ಕೆಯಿಂದ ರಾಜಸ್ಥಾನ್ ತೃಪ್ತಿಯಾಗದ ಕಾರಣ ಆ ಪ್ರಸ್ತಾಪವನ್ನೂ ತಿರಸ್ಕರಿಸಿದೆ(PC-PTI).

2020ರಿಂದಲೂ ರಾಜಸ್ಥಾನ್ ರಾಯಲ್ಸ್ ತಂಡ ಜೈಸ್ವಾಲ್ ಅವರನ್ನು ಬೆಳೆಸಿಕೊಂಡು ಬಂದಿದೆ. ತಂಡದ ಪರ ಅವರ ಪ್ರದರ್ಶನವೂ ಉತ್ತಮವಾಗಿದೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಜೈಸ್ವಾಲ್ ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ ಸೇರಿಕೊಂಡು ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿದ್ದರು(PC-PTI).

ಆದರೆ ಕಳೆದ ಆವೃತ್ತಿಯಲ್ಲಿ ರಿಯಾನ್ ಪರಾಗ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದ್ದು, ತಂಡದ ಒಳಗಿನ ಲೆಕ್ಕಾಚಾರದಲ್ಲಿ ಬದಲಾವಣೆ ತಂದಿದೆ. ಗಾಯದ ಸಮಸ್ಯೆಗಳ ನಡುವೆಯೂ ಪರಾಗ್ ನಾಯಕತ್ವದಲ್ಲಿ ರಾಜಸ್ಥಾನ್ ತಂಡ ಕಳೆದ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಇದೀಗ ಹೊಸ ಆಡಳಿತ ಮಂಡಳಿಯೂ ಮುಂದಿನ ಆವೃತ್ತಿಯಲ್ಲಿ ಪರಾಗ್ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ ಎಂಬ ಭರವಸೆ ನೀಡಿದೆ(PC-PTI).

ಈ ನಡುವೆ, ಜೈಸ್ವಾಲ್ ತಂಡವನ್ನು ತೊರೆಯಲು ಬಯಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರನ್ನು ಉಳಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ಪ್ರಯತ್ನಿಸುತ್ತಿದೆಯಾದರೂ, ಆಟಗಾರನಿಗೆ ತಂಡದ ವಾತಾವರಣದ ಬಗ್ಗೆ ಅಸಮಾಧಾನವಿರುವ ಕಾರಣ ಬದಲಿ ಆಟಗಾರನ ಹುಡುಕಾಟವನ್ನೂ ನಡೆಸುತ್ತಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ(PC-PTI).

ಜೈಸ್ವಾಲ್ ಅವರನ್ನು ಖರೀದಿಸುವ ಇಂಗಿತವನ್ನು ಮುಂಬೈ ಇಂಡಿಯನ್ಸ್ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ತಂಡವನ್ನು ಹೊಸದಾಗಿ ಕಟ್ಟುವ ಪ್ರಯತ್ನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಜೈಸ್ವಾಲ್ ಮೇಲೆ ಕಣ್ಣಿಟ್ಟಿರಬಹುದು ಎನ್ನಲಾಗಿದೆ. ಒಟ್ಟಿನಲ್ಲಿ, ಯಶಸ್ವಿ ಜೈಸ್ವಾಲ್ ಮುಂದಿನ ಐಪಿಎಲ್‌ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



