ಸಿಎಂ ಡಿಕೆ ಶಿವಕುಮಾರ್ ಜಪಾನ್ ಪ್ರವಾಸ: ಹೂಡಿಕೆ ಸೆಳೆಯಲು, ಮೂಲಸೌಕರ್ಯ ಅಧ್ಯಯನಕ್ಕೆ ಒತ್ತು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂರು ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗಲಿರುವ ಸಿಎಂ, ಜಪಾನ್‌ನ ನಗರಾಭಿವೃದ್ಧಿ, ಫ್ಲೈಓವರ್ ತಂತ್ರಜ್ಞಾನ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ರಾಜ್ಯದಲ್ಲಿ ಟೊಯೋಟಾ ಕಂಪನಿಯ ವಿಸ್ತರಣೆ ಬಗ್ಗೆ ಅವರು ಕಂಪನಿಯನ್ನು ಕೋರಲಿದ್ದಾರೆ.
ಬೆಂಗಳೂರು, ನವೆಂಬರ್ 22: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಲೋಬಲ್ ಇನ್ವೆಸ್ಟರ್ಸ್ ಮೀಟಿಂಗ್‌ಗಾಗಿ ಮೂರು ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಈ ಭೇಟಿಯ ಉದ್ದೇಶಗಳನ್ನು ವಿವರಿಸಿದರು. ಜಪಾನ್‌ನ ಅತ್ಯಾಧುನಿಕ ನಗರಾಭಿವೃದ್ಧಿ, ಫ್ಲೈಓವರ್ ನಿರ್ಮಾಣ ತಂತ್ರಜ್ಞಾನ ಹಾಗೂ ವಿವಿಧ ಹೊಸ ತಂತ್ರಜ್ಞಾನಗಳನ್ನು ಅಧ್ಯಯನ ಮಾಡುವುದು ತಮ್ಮ ಪ್ರವಾಸದ ಮುಖ್ಯ ಗುರಿಗಳಲ್ಲಿ ಒಂದಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಜಪಾನ್‌ನಲ್ಲಿ ಅಳವಡಿಸಲಾಗಿರುವ ಈ ತಂತ್ರಜ್ಞಾನಗಳನ್ನು ಕರ್ನಾಟಕದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಈ ಪ್ರವಾಸದಲ್ಲಿ ಮುಖ್ಯಮಂತ್ರಿಗಳ ಜೊತೆ ಎಂ.ಬಿ. ಪಾಟೀಲ್ ಹಾಗೂ ಎಂಟರಿಂದ ಹತ್ತು ಮಂದಿ ಅಧಿಕಾರಿಗಳ ತಂಡವೂ ಇರಲಿದೆ. ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ಗೆ ಸಂಬಂಧಿಸಿದ ರೋಡ್‌ಶೋನಲ್ಲಿ ಭಾಗಿಯಾಗಲಿರುವ ಈ ತಂಡ, ಹೂಡಿಕೆದಾರರನ್ನು ರಾಜ್ಯಕ್ಕೆ ಆಕರ್ಷಿಸುವ ಪ್ರಯತ್ನ ಮಾಡಲಿದೆ.
ಅಲ್ಲದೆ, ಕರ್ನಾಟಕದಲ್ಲಿ ಈಗಾಗಲೇ ಬಂಡವಾಳ ಹೂಡಿರುವ ಟೊಯೋಟಾ ಕಂಪನಿಯ ಪ್ರತಿನಿಧಿಗಳನ್ನು ಭೇಟಿ ಮಾಡಿ, ರಾಜ್ಯದಲ್ಲಿ ಮತ್ತಷ್ಟು ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂರು ದಿನಗಳ ಪ್ರವಾಸದ ನಂತರ ಮುಖ್ಯಮಂತ್ರಿಗಳು ಅಕ್ಟೋಬರ್ 25 ರಂದು ರಾಜ್ಯಕ್ಕೆ ಮರಳಲಿದ್ದಾರೆ. ಈ ಭೇಟಿ ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೂಡಿಕೆ ಆಕರ್ಷಣೆಗೆ ಮಹತ್ವದ ಹೆಜ್ಜೆಯಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

