ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳ ರಿಯಾಲಿಟಿ ಚೆಕ್: ಮೊದಲು ಇರುವ ಕ್ಯಾಂಟೀನ್‌ಗಳ ಊಟ ಸರಿ ಮಾಡಿ ಎಂದ ಜನ
ಬೆಂಗಳೂರಿನಲ್ಲಿ 25 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ಜಿಬಿಎ ಸಿದ್ಧತೆ ನಡೆಸಿದೆ. ಆದರೆ ಈಗಿರುವ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ಆಹಾರದ ಗುಣಮಟ್ಟದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಆಜಾದ್ ನಗರ ಮತ್ತು ಹನುಮಂತನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಟಿವಿ9 ಕನ್ನಡ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂದಿದ್ದೇನು? ಹೊಸ ಕ್ಯಾಂಟೀನ್‌ಗಳಿಗೂ ಮುನ್ನ ಹಳೆಯವುಗಳ ಸುಧಾರಣೆಗೆ ಜನರು ಏಕೆ ಒತ್ತಾಯಿಸುತ್ತಿದ್ದಾರೆ? ಸಂಪೂರ್ಣ ವರದಿ ಇಲ್ಲಿದೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ 25 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ಜಿಬಿಎ ಸಿದ್ಧತೆ.
- ಆಜಾದ್ ನಗರ, ಹನುಮಂತನಗರ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ತೀರಾ ವಿರಳ.
- ಹೊಸ ಕ್ಯಾಂಟೀನ್‌ಗಿಂತ ಹಳೆಯವುಗಳ ಆಹಾರ ಗುಣಮಟ್ಟ ಸುಧಾರಿಸಲು ಜನರ ಆಗ್ರಹ.
ಬೆಂಗಳೂರು, ನವೆಂಬರ್ 22: ಬಡವರು ಮತ್ತು ದುಡಿಯುವ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದು. ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ಒದಗಿಸುವ ಈ ಯೋಜನೆ ಆರಂಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಈಗ ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿ ಹೇಗಿದೆ? ಜನರು ನಿಜವಾಗಿಯೂ ಇಲ್ಲಿಗೆ ಬರುತ್ತಿದ್ದಾರಾ? ಸಿಗುತ್ತಿರುವ ಆಹಾರದ ಗುಣಮಟ್ಟ ಹೇಗಿದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಟಿವಿ9 ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ.
25 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ಜಿಬಿಎ ಸಿದ್ಧತೆ!
ಬೆಂಗಳೂರಿನಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದೆ. ಇದರ ನಡುವೆ ಮತ್ತಷ್ಟು 25 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚಿಂತನೆ ನಡೆಸಿದೆ. ಆದರೆ ಹೊಸ ಕ್ಯಾಂಟೀನ್‌ಗಳನ್ನು ಆರಂಭಿಸುವುದಕ್ಕೂ ಮುನ್ನ ಈಗಿರುವ ಕ್ಯಾಂಟೀನ್‌ಗಳ ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಊಟ ಮತ್ತು ತಿಂಡಿಯ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಸ್ವಚ್ಛತೆ ಹಾಗೂ ಆಹಾರದ ರುಚಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಹೊಸ ಕಟ್ಟಡಗಳ ನಿರ್ಮಾಣಕ್ಕಿಂತ ಈಗಿರುವ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಆಜಾದ್ ನಗರ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರೇ ಇಲ್ಲ!
ಚಾಮರಾಜಪೇಟೆ ಸಮೀಪದ ಆಜಾದ್ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ 1.30ಕ್ಕೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದಾಗ ಕ್ಯಾಂಟೀನ್ ಬಹುತೇಕ ಖಾಲಿಯಾಗಿತ್ತು. ಕೇವಲ ಒಬ್ಬ ವ್ಯಕ್ತಿ ಮಾತ್ರ ಊಟ ಮಾಡುತ್ತಿದ್ದರು. ಅವರೂ ಕೂಡ ನೀಡಲಾಗುತ್ತಿರುವ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಜಿಂಕೆ ಪಾರ್ಕ್ ಬಳಿಯ ಹನುಮಂತನಗರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲೂ ಇದೇ ರೀತಿಯ ಚಿತ್ರಣ ಕಂಡುಬಂದಿದೆ. ಅಲ್ಲಿ ಕೂಡ ಕೇವಲ ಒಬ್ಬ ವ್ಯಕ್ತಿ ಮಾತ್ರ ಊಟ ಮಾಡುತ್ತಿದ್ದರು. ಈ ದೃಶ್ಯಗಳು ಕ್ಯಾಂಟೀನ್‌ಗಳಿಗೆ ಜನರ ಭೇಟಿ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮೊದಲು ಊಟದ ಗುಣಮಟ್ಟ ಸುಧಾರಿಸಲು ಜನರ ಆಗ್ರಹ
ಒಂದು ಕಾಲದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಊಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ ಈಗ ಮೊದಲಿನ ರುಚಿ ಮತ್ತು ಗುಣಮಟ್ಟ ಇಲ್ಲ ಎಂಬ ಅಸಮಾಧಾನ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೀಗಾಗಿ ಜಿಬಿಎ ಅಧಿಕಾರಿಗಳು ಮೊದಲು ಅಸ್ತಿತ್ವದಲ್ಲಿರುವ ಕ್ಯಾಂಟೀನ್‌ಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ರುಚಿಕರವಾದ ಮತ್ತು ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಬೇಕು. ಬಳಿಕ ಹೊಸ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




