AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೀತಿಯ ಅಣ್ಣನಿಗೆ ನಮ್ಮ ಕಷ್ಟ ತಿಳಿಸುತ್ತೇವೆ, ಹೋರಾಟ ನಿಲ್ಲಿಸಲ್ಲ’: ಡಿಕೆಶಿ ಮನವಿಗೆ ಆಶಾ ಕಾರ್ಯಕರ್ತೆಯರ ತಿರುಗೇಟು

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮುಂದುವರಿದಿದೆ. ಡಿಕೆ ಶಿವಕುಮಾರ್ ಹೋರಾಟ ಕೈಬಿಡುವಂತೆ ಭಾವನಾತ್ಮಕ ಮನವಿ ಮಾಡಿದರೂ ಕಾರ್ಯಕರ್ತೆಯರು ಒಪ್ಪಿಲ್ಲ. ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆಗಿನ ಸಭೆಯಲ್ಲಿ ಸ್ಪಷ್ಟ ಭರವಸೆ ಸಿಗಲಿಲ್ಲ ಎಂದು ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸಿ, ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

'ಪ್ರೀತಿಯ ಅಣ್ಣನಿಗೆ ನಮ್ಮ ಕಷ್ಟ ತಿಳಿಸುತ್ತೇವೆ, ಹೋರಾಟ ನಿಲ್ಲಿಸಲ್ಲ': ಡಿಕೆಶಿ ಮನವಿಗೆ ಆಶಾ ಕಾರ್ಯಕರ್ತೆಯರ ತಿರುಗೇಟು
ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ
ಕಿರಣ್​ ಸೂರ್ಯ
| Edited By: |

Updated on:Nov 21, 2026 | 10:01 PM

Share

ಮುಖ್ಯಾಂಶಗಳು

  • ಡಿಕೆಶಿ ಭಾವನಾತ್ಮಕ ಮನವಿಗೂ ಜಗ್ಗದೆ ಹೋರಾಟ ಮುಂದುವರಿಸಲು ಆಶಾ ಕಾರ್ಯಕರ್ತೆಯರ ನಿರ್ಧಾರ.
  • ಸಚಿವ ಖಾದರ್ ಜೊತೆಗಿನ ಸಭೆಯಲ್ಲಿ ಸ್ಪಷ್ಟ ಭರವಸೆ ಸಿಗಲಿಲ್ಲ ಎಂದು ನಾಗಲಕ್ಷ್ಮೀ ಹೇಳಿದ್ದಾರೆ.
  • ಸೋಮವಾರದಿಂದ ಪ್ರತಿಭಟನೆ ತೀವ್ರಗೊಳಿಸುವುದಾಗಿ ಆಶಾ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಘೋಷಣೆ ಮಾಡಿದ್ದಾರೆ.

ಬೆಂಗಳೂರು, ನವೆಂಬರ್ 21: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆ ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ನಿಮ್ಮ ಅಣ್ಣನಾಗಿ ಹೇಳುತ್ತೇನೆ, ಹೋರಾಟ ಕೈಬಿಡಿ’ ಎಂದು ಎಕ್ಸ್ ಪೋಸ್ಟ್ ಮೂಲಕ ಭಾವನಾತ್ಮಕ ಮನವಿ ಮಾಡಿದ್ದರೂ ಆಶಾ ಕಾರ್ಯಕರ್ತೆಯರು ಮಾತ್ರ ಜಗ್ಗಿಲ್ಲ. ಮತ್ತೊಂದೆಡೆ ಆರೋಗ್ಯ ಸಚಿವರ ಜೊತೆ ನಡೆದ ಸಭೆಯೂ ಯಾವುದೇ ಸ್ಪಷ್ಟ ಭರವಸೆ ಇಲ್ಲದೆ ಅಂತ್ಯಗೊಂಡಿದೆ. ಹೀಗಾಗಿ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾರ್ಯಕರ್ತೆಯರು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವರ ಸಭೆ ವಿಫಲ; ಬೇಡಿಕೆ ಈಡೇರಿಕೆಗೆ ಪಟ್ಟು

ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಅವರ ನೇತೃತ್ವದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ಸಭೆ ನಡೆದಿದೆ. ಈ ವೇಳೆ ಮಾಸಿಕ 15 ಸಾವಿರ ರೂಪಾಯಿ ಗೌರವಧನ ಸೇರಿದಂತೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹಿಂದಿನ ಮುಖ್ಯಮಂತ್ರಿ ನೀಡಿದ್ದ ಭರವಸೆಗಳನ್ನೂ ಸಚಿವರ ಗಮನಕ್ಕೆ ತಂದಿದ್ದಾರೆ. ಆದರೆ ಹಳೆಯ ವಿಚಾರಗಳನ್ನು ಬಿಟ್ಟು ಹೊಸದಾಗಿ ನಿಮ್ಮ ಬೇಡಿಕೆಗಳ ಬಗ್ಗೆ ಮಾತನಾಡಿ ಎಂದು ಸಚಿವರು ತಿಳಿಸಿರುವುದಾಗಿ ನಾಗಲಕ್ಷ್ಮೀ ಹೇಳಿದ್ದಾರೆ.

ಡಿಸೆಂಬರ್ 12ರವರೆಗೆ ಯಾವುದೇ ಬೇಡಿಕೆಗಳ ಬಗ್ಗೆ ಒತ್ತಡ ಹೇರಬೇಡಿ ಎಂದು ಸಚಿವರು ಮನವಿ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಬೇಡಿಕೆಗಳ ಬಗ್ಗೆ ಚಿಂತನೆ ನಡೆಸುವುದಾಗಿ ಸರ್ಕಾರ ತಿಳಿಸಿದೆ. ಆದರೆ ಬೇಡಿಕೆ ಈಡೇರಿಸುವ ಕುರಿತು ಯಾವುದೇ ಸ್ಪಷ್ಟ ಪ್ರಸ್ತಾವನೆ ಅಥವಾ ಲಿಖಿತ ಭರವಸೆ ಸಿಕ್ಕಿಲ್ಲ. ಹೀಗಾಗಿ ಸಚಿವರ ಜೊತೆಗಿನ ಮಾತುಕತೆ ತೃಪ್ತಿ ತಂದಿಲ್ಲ ಎಂದು ನಾಗಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಟ್ವೀಟ್‌ಗೆ ಆಶಾ ಕಾರ್ಯಕರ್ತೆಯರ ತಿರುಗೇಟು!

ಇನ್ನು ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರನ್ನು ಸಹೋದರಿಯರೆಂದು ಕರೆದು ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಕ್ಕೆ ನಾಗಲಕ್ಷ್ಮೀ ಪ್ರತಿಕ್ರಿಯಿಸಿದ್ದಾರೆ. ನಮ್ಮ ಪ್ರೀತಿಯ ಅಣ್ಣನಿಗೆ ಧನ್ಯವಾದಗಳು. ಆದರೆ ನಿಮ್ಮ ಅಕ್ಕತಂಗಿಯರು ಐದು ದಿನಗಳಿಂದ ಸಂಕಷ್ಟದಲ್ಲಿದ್ದಾರೆ. ಹೋರಾಟದ ನೋವು ಮತ್ತು ಕಷ್ಟವನ್ನು ನಿಮ್ಮ ಗಮನಕ್ಕೆ ತರುತ್ತೇವೆ. ಹೋರಾಟ ಮುಂದುವರಿಸುತ್ತೇವೆ ಎಂದು ಅಣ್ಣನಿಗೆ ತಿಳಿಸುತ್ತೇವೆ ಎಂದಿದ್ದಾರೆ.

ಸೋಮವಾರದಿಂದ ಹೋರಾಟ ಮತ್ತಷ್ಟು ತೀವ್ರ

ಭಾನುವಾರವೂ ರಜೆ ಇಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸೋಮವಾರದಿಂದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ನಾಗಲಕ್ಷ್ಮೀ ಘೋಷಿಸಿದ್ದಾರೆ. ಈ ವೇಳೆ ಹೋರಾಟಕ್ಕೆ ಬೆಂಬಲ ಇದೆಯೇ ಎಂದು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಆಶಾ ಕಾರ್ಯಕರ್ತೆಯರು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸರ್ಕಾರದ ಭರವಸೆಗಳಿಗೆ ಮಣಿಯದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವುದು ಸರ್ಕಾರಕ್ಕೆ ಮತ್ತಷ್ಟು ಸವಾಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Sat, 21 November 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More