AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ್ ಟ್ಯಾಂಪರಿಂಗ್ ವಿವಾದ: ವಾರ್ನರ್, ಖವಾಜಾಗೆ ಕಾಮೆಂಟರಿಯಿಂದ ಗೇಟ್‌ಪಾಸ್

2018ರ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರಿಗೆ ಫಾಕ್ಸ್ ಕ್ರಿಕೆಟ್ ಕಾಮೆಂಟರಿ ತಂಡದಿಂದ ತಾತ್ಕಾಲಿಕ ವಿರಾಮ ನೀಡಲಾಗಿದೆ. ಹಳೆಯ ಪ್ರಕರಣದ ಬಗ್ಗೆ ಮರು-ಚರ್ಚೆಗಳು ಶುರುವಾಗಿದ್ದು, ಇದರ ಪರಿಣಾಮವಾಗಿ ಇಬ್ಬರೂ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫಾಕ್ಸ್ ಸ್ಪೋರ್ಟ್ಸ್ ಸ್ಪಷ್ಟಪಡಿಸಿದೆ. ಈ ಬೆಳವಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.

ಬಾಲ್ ಟ್ಯಾಂಪರಿಂಗ್ ವಿವಾದ: ವಾರ್ನರ್, ಖವಾಜಾಗೆ ಕಾಮೆಂಟರಿಯಿಂದ ಗೇಟ್‌ಪಾಸ್
ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್
ಪೃಥ್ವಿಶಂಕರ
|

Updated on: Nov 21, 2026 | 9:55 PM

Share

2018ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಾಲ್ ಟ್ಯಾಂಪರಿಂಗ್ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬೆಳವಣಿಗೆಯಿಂದ ಆಸ್ಟ್ರೇಲಿಯಾದ ಕ್ರಿಕೆಟ್ ವಲಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ಫಾಕ್ಸ್ ಕ್ರಿಕೆಟ್ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ತನ್ನ ಕಾಮೆಂಟರಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರನ್ನು ಮುಂದಿನ ಕೆಲವು ವಾರಗಳ ಕಾಲ ಕಾಮೆಂಟರಿ ಪ್ಯಾನಲ್‌ನಿಂದ ದೂರವಿಡಲು ನಿರ್ಧರಿಸಿದೆ. ಹಳೆಯ ವಿವಾದ ಮತ್ತೆ ಸುದ್ದಿಯಾಗಿರುವುದರಿಂದ ಇಬ್ಬರೂ ಆಟಗಾರರು ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಕೆಲಕಾಲ ಕಾಮೆಂಟರಿ ಜವಾಬ್ದಾರಿಯಿಂದ ವಿರಾಮ ನೀಡಲಾಗಿದೆ ಎಂದು ಫಾಕ್ಸ್ ಕ್ರಿಕೆಟ್ ಸ್ಪಷ್ಟಪಡಿಸಿದೆ.

ನಿರ್ಧಾರಕ್ಕೆ ಕಾರಣ ತಿಳಿಸಿದ ಫಾಕ್ಸ್ ಸ್ಪೋರ್ಟ್ಸ್

ಫಾಕ್ಸ್ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಟೀವ್ ಕ್ರೌಲಿ ಅವರು ‘ಕೋಡ್ ಸ್ಪೋರ್ಟ್ಸ್’ ಜೊತೆ ಮಾತನಾಡುವಾಗ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ವಾರ್ನರ್ ಮತ್ತು ಖವಾಜಾ ಅವರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡೇವಿಡ್ ಮತ್ತು ಉಸ್ಮಾನ್ ಇಬ್ಬರಿಗೂ ಮುಂದಿನ ಕೆಲವು ವಾರಗಳ ಕಾಲ ನಮ್ಮ ಪ್ರಸಾರ ಕಾರ್ಯಕ್ರಮಗಳಿಂದ ವಿರಾಮ ನೀಡಲಾಗುತ್ತದೆ. ನಮ್ಮ ಕಾಮೆಂಟರಿ ತಂಡದ ಪ್ರತಿಯೊಬ್ಬರಿಗೂ ನಾವು ಬೆಂಬಲ ನೀಡುತ್ತೇವೆ. ವಿಭಿನ್ನ ಅಭಿಪ್ರಾಯಗಳಿಗೂ ನಮ್ಮಲ್ಲಿ ಸ್ವಾಗತವಿದೆ. ಆದರೆ ಪ್ರತಿಯೊಂದು ಹೊಸ ಹೇಳಿಕೆಗೂ ಪ್ರತಿಕ್ರಿಯೆ ನೀಡಬೇಕಾದ ಒತ್ತಡ ಇಬ್ಬರ ಮೇಲೂ ಹೆಚ್ಚಾಗುತ್ತಿರುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ’ ಎಂದು ಸ್ಟೀವ್ ಕ್ರೌಲಿ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಆಟದ ಮೇಲೆ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ. ಹೀಗಿರುವಾಗ ಇಬ್ಬರು ಕಾಮೆಂಟೇಟರ್‌ಗಳನ್ನು ನಿರಂತರ ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ. ಆಸ್ಟ್ರೇಲಿಯಾದ ಕ್ರಿಕೆಟ್ ಬೇಸನ್‌ ವೇಳೆ ಅಭಿಮಾನಿಗಳಿಗೆ ಅತ್ಯುತ್ತಮ ಪ್ರಸಾರ ನೀಡುವುದೇ ನಮ್ಮ ಮುಖ್ಯ ಗುರಿಯಾಗಿದೆ. ಈ ಬೆಳವಣಿಗೆಯನ್ನು ನಾವು ಗಮನಿಸುತ್ತಲೇ ಇರುತ್ತೇವೆ ಎಂದು ಅವರು ತಿಳಿಸಿದ್ದಾರೆ.

ವಿವಾದದಲ್ಲಿ ವಾರ್ನರ್, ಖವಾಜಾ

ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಇತ್ತೀಚೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಫಾಕ್ಸ್ ಕ್ರಿಕೆಟ್‌ನ ಕಾಮೆಂಟರಿ ತಂಡದಲ್ಲಿದ್ದರು. ಇದಕ್ಕೂ ಸ್ವಲ್ಪ ಮುನ್ನ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ಕುರಿತು ಮರುಪರಿಶೀಲನೆ ನಡೆಸಲು ವಿಶೇಷ ವೇದಿಕೆಯೊಂದನ್ನು ರಚಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿತ್ತು. ಈ ಘೋಷಣೆ ಹಳೆಯ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿತ್ತು.

ಇದರ ಪರಿಣಾಮವಾಗಿ ಪಂದ್ಯದ ನೇರ ಪ್ರಸಾರದ ವೇಳೆಯೇ ವಾರ್ನರ್ ಮತ್ತು ಖವಾಜಾ ಅವರಿಗೆ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಹಲವು ಕಠಿಣ ಪ್ರಶ್ನೆಗಳು ಎದುರಾಗಿದ್ದವು. ಪ್ರಸಾರದ ನಡುವೆಯೇ ಈ ವಿವಾದದ ಕುರಿತು ಇಬ್ಬರೂ ಪ್ರತಿಕ್ರಿಯೆ ನೀಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಇದೀಗ ಈ ಬೆಳವಣಿಗೆಗಳ ಬೆನ್ನಲ್ಲೇ ಫಾಕ್ಸ್ ಕ್ರಿಕೆಟ್ ಇಬ್ಬರು ಮಾಜಿ ಆಟಗಾರರಿಗೆ ತಾತ್ಕಾಲಿಕ ವಿರಾಮ ನೀಡಿರುವುದು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More