ಅರ್ಧನಾರೀಶ್ವರನ ಚಿತ್ರ ಬಳಸಿ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಕಿರಣ್ ರಿಜಿಜು ತಿರುಗೇಟು
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶಿವ-ಪಾರ್ವತಿಯರ ಐಕ್ಯ ರೂಪವಾದ ‘ಅರ್ಧನಾರೀಶ್ವರ’ ಚಿತ್ರವನ್ನು ಬಳಸಿಕೊಂಡು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು "ಜಾತಿವಾದಿ ಪುರುಷ ಪ್ರಧಾನ ಮನಸ್ಥಿತಿಯವರು" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಹಿಂದೂ ಧರ್ಮದ ಪುರಾಣಗಳಲ್ಲಿ ಶಿವ ಮತ್ತು ಶಕ್ತಿ (ಪಾರ್ವತಿ) ಸಮಾನವಾಗಿ ಬೆರೆತಿರುವ ಅರ್ಧನಾರೀಶ್ವರ ಸ್ವರೂಪವು ಲಿಂಗ ಸಮಾನತೆ ಮತ್ತು ಪ್ರಕೃತಿಯ ಸಮತೋಲನದ ಸಂಕೇತವಾಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವು ಇದಕ್ಕೆ ತದ್ವಿರುದ್ಧವಾಗಿದ್ದು, ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣುತ್ತದೆ ಎಂದು ಅವರು ಆರೋಪಿಸಿದ್ದಾರೆ.

ನವದೆಹಲಿ, ನವೆಂಬರ್ 22: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ್ದು, ಅವರನ್ನು “ಅನಾಗರಿಕ, ದುರಾಸೆಯ, ಜಾತಿವಾದಿ ಪುರುಷ ಪ್ರಧಾನ ಮನಸ್ಥಿತಿಯವರು” ಎಂದು ಕರೆದಿದ್ದಾರೆ. ಅಲ್ಲದೆ, ಭಾರತದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಗಳ ಬಗ್ಗೆ ಅವರಿಗೆ ಯಾವುದೇ ತಿಳುವಳಿಕೆ ಇಲ್ಲ ಎಂದು ಆರೋಪಿಸಿದ್ದಾರೆ. ಶಿವ ಮತ್ತು ಪಾರ್ವತಿ ದೇವಿಯನ್ನು ‘ಅರ್ಧನಾರೀಶ್ವರ’ ರೂಪದಲ್ಲಿ ಚಿತ್ರಿಸುವ ಶಿಲ್ಪದ ಫೋಟೋವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ರಾಜಕೀಯ ವಾಕ್ಸಮರದ ನಡುವೆ ಈ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಪೋಸ್ಟ್ ಹಾಗೂ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿ ಮಹಿಳೆಯರಿಗೆ ಹಾಗೂ ದಲಿತರು, ಹಿಂದುಳಿದ ವರ್ಗಗಳಿಗೆ ಉನ್ನತ ನಿರ್ಧಾರ ತೆಗೆದುಕೊಳ್ಳುವ ಹುದ್ದೆಗಳಲ್ಲಿ ಸಮಾನ ಪ್ರಾತಿನಿಧ್ಯವಿಲ್ಲ ಎಂದು ದೂರಿದ್ದಾರೆ. “ಅವರು ತಮ್ಮನ್ನು ತಾವು ಹಿಂದೂ ಸಂಸ್ಕೃತಿಯ ರಕ್ಷಕರು ಎಂದು ಕರೆದುಕೊಳ್ಳುತ್ತಾರೆ, ಆದರೆ ಅರ್ಧನಾರೀಶ್ವರ ತತ್ವದ ಮೂಲ ಆಶಯವಾದ ಸಮಾನತೆಯನ್ನು ವಿರೋಧಿಸುತ್ತಾರೆ” ಎಂದು ಅವರು ಟೀಕಿಸಿದ್ದಾರೆ.
The deeper I go into Indian spiritual and religious traditions, the clearer it becomes.
The BJP and RSS are uncouth, greedy, casteist male chauvinists with absolutely no understanding of our spiritual and religious traditions. https://t.co/CrJxkEXNgI
— Rahul Gandhi (@RahulGandhi) November 22, 2026
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ಮಾಡಿದ್ದ “ರಾಜಿ ಮಾಡಿಕೊಂಡ ಪ್ರಧಾನಿ” ಎಂಬ ವ್ಯಂಗ್ಯದ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಈ ಪೋಸ್ಟ್ ಹೊರಬಿದ್ದಿದೆ. 1962ರ ಭಾರತ-ಚೀನಾ ಯುದ್ಧಕ್ಕೆ ಕಾಂಗ್ರೆಸ್ ಕ್ಷಮೆಯಾಚಿಸುತ್ತದೆಯೇ? ಎಂದು ಪ್ರಶ್ನಿಸಿರುವ ಕಿರಣ್ ರಿಜಿಜು, ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಭಾರತದ ಆರ್ಥಿಕ ದಾಖಲೆಯ ಬಗ್ಗೆ ವಿರೋಧ ಪಕ್ಷಕ್ಕೆ 4 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಟೀಕಿಸುತ್ತಾ ಭಾರತೀಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಉಲ್ಲೇಖಿಸಿದ್ದಾರೆ. ಅವರು ಹಂಚಿಕೊಂಡ ಚಿತ್ರವು ಎಲಿಫೆಂಟಾ ಗುಹೆಗಳಲ್ಲಿರುವ ಶಿಲ್ಪವಾಗಿದ್ದು, ಶಿವ ಮತ್ತು ಪಾರ್ವತಿ ದೇವಿಯ ಸಂಯೋಜಿತ ರೂಪವಾದ ಅರ್ಧನಾರೀಶ್ವರನನ್ನು ಅರ್ಧ ಪುರುಷ ಮತ್ತು ಅರ್ಧ ಮಹಿಳೆಯ ಏಕರೂಪವಾಗಿ ಚಿತ್ರಿಸುತ್ತದೆ.
ಪಾರ್ವತಿ ದೇವಿಯು ಶಿವನ ತೊಡೆಯ ಮೇಲೆ ಕುಳಿತಿರುವ 12ನೇ ಶತಮಾನದ ದೇವಾಲಯದ ಶಿಲ್ಪದ ಚಿತ್ರವನ್ನು ರಾಹುಲ್ ಗಾಂಧಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಈ ಪೋಸ್ಟ್ ಬಂದಿದೆ. ಕಳೆದ ಮಂಗಳವಾರ ಪೋಸ್ಟ್ ಮಾಡಿದ್ದ ಅವರು, ಭಯ, ಕೋಪ ಮತ್ತು ದ್ವೇಷವು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬೆಂಬಲಿಗರ ಹೃದಯದಲ್ಲಿ ಬಲೆಯನ್ನು ಹೆಣೆದಿದ್ದು, ಅವರು ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ತಡೆಯುತ್ತಿದೆ ಎಂದಿದ್ದರು. “ಒಬ್ಬ ನಿಜವಾದ ಹಿಂದೂವಾಗಿ, ಈ ಬಲೆಯಿಂದ ಅವರನ್ನು ಮುಕ್ತಗೊಳಿಸುವುದು ನನ್ನ ಕರ್ತವ್ಯವಾಗಿದೆ, ಇದರಿಂದ ಅವರೂ ಸಹ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಆತ್ಮೀಯತೆಯ ಅದ್ಭುತ ಸೌಂದರ್ಯ ಹಾಗೂ ಆನಂದವನ್ನು ಅನುಭವಿಸಲು ಪ್ರಾರಂಭಿಸಬಹುದು. ಸತ್ಯಂ ಶಿವಂ ಸುಂದರಂ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ‘ಅಪ್ಪನ ತೊಡೆ ಮೇಲೆ ಅಮ್ಮ ಕೂರುತ್ತಿದ್ದರು’ ಹೇಳಿಕೆ ವಿವಾದಕ್ಕೆ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಕಾಂಗ್ರೆಸ್‌ಗೆ 4 ಪ್ರಶ್ನೆಗಳನ್ನು ಕೇಳಿದ ಕಿರಣ್ ರಿಜಿಜು:
ಸಾಮಾಜಿಕ ಜಾಲತಾಣ ‘ಎಕ್ಸ್’ ಪೋಸ್ಟ್‌ನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು 1962ರ ಭಾರತ-ಚೀನಾ ಯುದ್ಧ, ದೇಶದ ಆರ್ಥಿಕ ಸ್ಥಿತಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತಿತ್ತು ಎಂಬುದನ್ನು ಉಲ್ಲೇಖಿಸಿ 4 ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್ ಅನ್ನು ಕೇಳಿದ್ದಾರೆ.
Congress must answer 4 questions:
1. My village was occupied by China in 1962. Will Congress apologize for 1962 humiliation? 2. Congress kept India a poor nation. Why? 3. Why was India called land of snake charmers? 4. Why was India’s economy insulted as Hindu rate of growth? https://t.co/ojrdYYDFLA
— Kiren Rijiju (@KirenRijiju) November 20, 2026
- 1962ರಲ್ಲಿ ನನ್ನ ಗ್ರಾಮವನ್ನು ಚೀನಾ ಆಕ್ರಮಿಸಿಕೊಂಡಿತ್ತು. 1962ರ ಅವಮಾನಕ್ಕೆ ಕಾಂಗ್ರೆಸ್ ಕ್ಷಮೆಯಾಚಿಸುತ್ತದೆಯೇ?
- ಕಾಂಗ್ರೆಸ್ ಭಾರತವನ್ನು ಬಡ ರಾಷ್ಟ್ರವಾಗಿಯೇ ಉಳಿಸಿತು. ಏಕೆ?
- ಭಾರತವನ್ನು ಹಾವಾಡಿಗರ ನಾಡು ಎಂದು ಏಕೆ ಕರೆಯಲಾಗುತ್ತಿತ್ತು?
- ಭಾರತದ ಆರ್ಥಿಕತೆಯನ್ನು ‘ಹಿಂದೂ ಬೆಳವಣಿಗೆ ದರ’ ಎಂದು ಏಕೆ ಅವಮಾನಿಸಲಾಯಿತು?
ಎಂಬ ಪ್ರಶ್ನೆಗಳನ್ನು ಕಿರಣ್ ರಿಜಿಜು ಕೇಳಿದ್ದಾರೆ. ಸಚಿವರ ಈ ಪ್ರತಿಕ್ರಿಯೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರಕ್ಕೆ 1962ರ ಯುದ್ಧ ಮತ್ತು ಭಾರತದ ಆರ್ಥಿಕ ಇತಿಹಾಸವನ್ನು ಎಳೆದು ತಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sun, 22 November 26




