Rahul Gandhi
ನೆಹರು ಕುಟುಂಬದ ನಾಲ್ಕನೇ ತಲೆಮಾರಿನ ಐದನೇ ನಾಯಕ ರಾಹುಲ್ ಗಾಂಧಿ. ನೆಹರು ಮರಿ ಮೊಮ್ಮಗ, ಇಂದಿರಾರ ಮೊಮ್ಮಗ ಹಾಗೂ ರಾಜೀವ್-ಸೋನಿಯಾ ಮಗ ಎನ್ನುವುದು ರಾಹುಲ್‌ಗೆ ಪ್ಲಸ್ ಹಾಗೂ ಮೈನಸ್ ಎರಡೂ ಹೌದು. ಕಳೆದ ಎರಡು ದಶಕಗಳಿಂದ ಭಾರತದ ರಾಜಕೀಯದಲ್ಲಿ ಸಕ್ರಿಯರಾಗಿರುವ ರಾಹುಲ್, ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ರಾಹುಲ್, ಸತತ ಐದು ಬಾರಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಅಮೇಥಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಹುಲ್, ಈಗ ವಯ್ನಾಡು ಕ್ಷೇತ್ರ ಸದಸ್ಯರಾಗಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ರಾಹುಲ್ ಗಾಂಧಿ, ಇದೇ ಕಾರಣದಿಂದ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಸದ್ಯ ಕೋರ್ಟ್‌ನಿಂದ ರಕ್ಷಣೆ ಪಡೆದು, ಮತ್ತೆ ಸದಸ್ಯತ್ವ ಪಡೆದಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದುಹಾಕಿದ್ದು, ರಫೇಲ್ ಹಾಗೂ ಅದಾನಿ ವಿರುದ್ಧ ಪ್ರಕರಣದಲ್ಲಿ ಧ್ವನಿ ಎತ್ತಿದ್ದು, ಎಐಸಿಸಿ ಅಧ್ಯಕ್ಷರಾಗಿ ಲೋಕಸಭೆ ಸೇರಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸೋತಿದ್ದು ಹಾಗೂ ಭಾರತ್ ಜೋಡೋ ಯಾತ್ರೆಯು ರಾಹುಲ್ ಅವರ ರಾಜಕೀಯ ಪಥದಲ್ಲಿನ ಪ್ರಮುಖಾಂಶಗಳು. ರಾಹುಲ್ ಗಾಂಧಿ ಎನ್ನುವ ರಾಜಕೀಯ ವ್ಯಕ್ತಿಯು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಕ್ಕೂ ಪ್ರಮುಖ ದಾಳವಾಗಿದ್ದಾರೆ. ತಮ್ಮ ಪ್ರಚಾರಗಳಿಗೆ ಇವರಿಬ್ಬರೂ ರಾಹುಲ್ ಅವರನ್ನು ಬಳಸಿಕೊಳ್ಳುವುದು ವಿಶೇಷ.