AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗಿಳಿಯಬೇಕು; ಮಣಿಶಂಕರ್ ಅಯ್ಯರ್ ಒತ್ತಾಯ

ಕಾಂಗ್ರೆಸ್​ ಹೈಕಮಾಂಡ್ ಪಾಲಿಗೆ ಕಾಂಗ್ರೆಸ್​​ನಲ್ಲಿರುವ ಕೆಲವು ಹಿರಿಯ ನಾಯಕರೇ ನುಂಗಲಾರದ ತುಪ್ಪವಾಗಿದ್ದಾರೆ. ಶಶಿ ತರೂರ್, ಮಣಿಶಂಕರ್ ಅಯ್ಯರ್ ರೀತಿಯ ಹಿರಿಯ ಕಾಂಗ್ರೆಸ್ ನಾಯಕರು ಈಗಿನ ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಆಗಾಗ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುವ ಮೂಲಕ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುತ್ತಲೇ ಇರುತ್ತಾರೆ. ಅತ್ತ ಶಶಿ ತರೂರ್ ಪ್ರಧಾನಿ ಮೋದಿಯನ್ನು ಹೊಗಳಿ ಹೊಗಳಿ ಕಾಂಗ್ರೆಸ್ ನಾಯಕರ ಹೊಟ್ಟೆ ಉರಿಸಿದರೆ ಇತ್ತ ಮಣಿಶಂಕರ್ ಅಯ್ಯರ್ ನೇರವಾಗಿಯೇ ಗಾಂಧಿ ಕುಟುಂಬದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗಿಳಿಯಬೇಕು; ಮಣಿಶಂಕರ್ ಅಯ್ಯರ್ ಒತ್ತಾಯ
Mani Shankar Aiyar
ಸುಷ್ಮಾ ಚಕ್ರೆ
|

Updated on:Feb 23, 2026 | 3:28 PM

Share

ನವದೆಹಲಿ, ಫೆಬ್ರವರಿ 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಮಣಿಶಂಕರ್ ಅಯ್ಯರ್ ರಾಹುಲ್ ಗಾಂಧಿ (Rahul Gandhi) ಇಂಡಿಯ ಬ್ಲಾಕ್ ನಾಯಕ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯ ಬ್ಲಾಕ್‌ನ ನಾಯಕ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಎಂ.ಕೆ. ಸ್ಟಾಲಿನ್ ಮತ್ತು ತೇಜಸ್ವಿ ಯಾದವ್ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿಯ ಬದಲಾಗಿ ಇಂಡಿಯ ಬ್ಲಾಕ್ ನಾಯಕರಾಗಲು ಅರ್ಹತೆ ಹೊಂದಿದ್ದಾರೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ಇತ್ತೀಚಿನ ಚುನಾವಣಾ ಹಿನ್ನಡೆಗಳ ಕಾರಣದಿಂದಾಗಿ ರಾಹುಲ್ ಗಾಂಧಿ ಬದಲು ಈ ನಾಯಕರು ಇಂಡಿಯ ಮೈತ್ರಿಕೂಟವನ್ನು ಬಲಪಡಿಸಲು ಮತ್ತು ಮುನ್ನಡೆಸಲು ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆಂಬ ಭರವಸೆಯಿದೆ. ಹೀಗಾಗಿ, ಅವರ ಪೈಕಿ ಒಬ್ಬರು ಇಂಡಿಯ ಬ್ಲಾಕ್ ನಾಯಕರಾಗಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಸಂಸದರ ಆಗ್ರಹ

“ನಾವು ಈಗ ತುಂಬಾ ಅಸಮರ್ಥರಾಗಿದ್ದೇವೆ. ನಾವು ಮಮತಾ ಬ್ಯಾನರ್ಜಿಯನ್ನು ದೂರವಿಟ್ಟಿದ್ದು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಕಾರಣವಾಯಿತು. ಹೀಗಾಗಿ, ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಪ್ರಾದೇಶಿಕ ಪಕ್ಷದ ನಾಯಕರಾದ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅಖಿಲೇಶ್, ತೇಜಸ್ವಿ ಅಥವಾ ಬೇರೆ ಯಾರಿಗಾದರೂ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಹಾಗೇ, ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರು ಭಾರತ ಬಣದ ಸಂಚಾಲಕರಾಗಲು “ಅತ್ಯುತ್ತಮ” ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. “2029ರ ಗುರಿಯನ್ನು ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಡಿಯ ಬಣವನ್ನು ಮುನ್ನಡೆಸಲು ಎಂ.ಕೆ ಸ್ಟಾಲಿನ್ ಅವರಿಗಿಂತ ಉತ್ತಮ ವ್ಯಕ್ತಿ ಯಾರೂ ಇಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಬಗ್ಗೆ ಈ ರೀತಿಯ ನಿಲುವು ತಳೆದಿರುವುದು ಇದೇ ಮೊದಲಲ್ಲ. ಈ ಹಿಂದಿನ ಹೇಳಿಕೆಯಲ್ಲಿ, ಪಿಣರಾಯಿ ವಿಜಯನ್ ಅವರು ಕೇರಳದ ಮುಖ್ಯಮಂತ್ರಿಯಾಗಿ ತಮ್ಮ ಪಾತ್ರವನ್ನು ಉಳಿಸಿಕೊಳ್ಳಲು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಅಯ್ಯರ್ ಹೇಳಿದ್ದರು. ಕೇರಳ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿರುವಾಗ ಅವರು ನೀಡಿದ ಈ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್​​ಗೆ ಮುಜುಗರ ತಂದಿತ್ತು.

ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಅವರಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ನಿಲುವನ್ನು ಮಾತ್ರ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:27 pm, Mon, 23 February 26