AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊಂದಲದಿಂದಾಗಿ ಎಡವಟ್ಟು; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪೊಲೀಸರ ಎಡವಟ್ಟಿನಿಂದಾಗಿ ವಿಚಿತ್ರ ಘಟನೆಯೊಂದು ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ಸ್ವಾಗತಕ್ಕಾಗಿ ಸಿದ್ಧಪಡಿಸಲಾಗಿದ್ದ ‘ಗಾರ್ಡ್ ಆಫ್ ಆನರ್’ (ಗೌರವ ವಂದನೆ)ಯನ್ನು ಪೊಲೀಸರು ಗೊಂದಲಕ್ಕೊಳಗಾಗಿ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಎಡವಟ್ಟಿನ ಬಗ್ಗೆ ಸಂಪೂರ್ಣ ಪೊಲೀಸ್ ತನಿಖೆಗೆ ಆದೇಶಿಸಲಾಗಿದೆ.

ಗೊಂದಲದಿಂದಾಗಿ ಎಡವಟ್ಟು; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!
ಗೌರವ ವಂದನೆ ಪಡೆದ ಓವೈಸಿ
ಸುಷ್ಮಾ ಚಕ್ರೆ
|

Updated on:Nov 22, 2026 | 12:20 PM

Share

ಸಹರಾನ್‌ಪುರ, ನವೆಂಬರ್ 22: ಉತ್ತರ ಪ್ರದೇಶದ ಸಹರಾನ್‌ಪುರದ ಪೊಲೀಸ್ ಸಿಬ್ಬಂದಿ ಶನಿವಾರ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ‘ಗಾರ್ಡ್ ಆಫ್ ಆನರ್’ (ಗೌರವ ವಂದನೆ) ನೀಡಿದ್ದಾರೆ. ಆ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರಿಗಾಗಿ ಗೌರವ ವಂದನೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪೊಲೀಸ್ ಸಿಬ್ಬಂದಿಯ ತಪ್ಪಿನಿಂದಾಗಿ ನ್ಯಾಯಮೂರ್ತಿಯ ಬದಲು ಓವೈಸಿಗೆ ಗೌರವ ವಂದನೆ ನೀಡಲಾಗಿದೆ. ಈ ಶಿಷ್ಟಾಚಾರ ಲೋಪದ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಗೌರವ ವಂದನೆ ಸಲ್ಲಿಸಲು ಪೊಲೀಸ್ ಸಿಬ್ಬಂದಿ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಸಜ್ಜಾಗಿ ನಿಂತಿದ್ದರು. ಇದೇ ಸಮಯಕ್ಕೆ, ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಮೈತ್ರಿಕೂಟದ ಪಾಲುದಾರ ಹಾಗೂ ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆ ಅನಿರೀಕ್ಷಿತವಾಗಿ ಸರ್ಕ್ಯೂಟ್ ಹೌಸ್‌ಗೆ ಬಂದಿಳಿಯಿತು. ಓವೈಸಿ ಅವರ ವಾಹನಗಳ ಸಾಲು ಮತ್ತು ಅವರೊಂದಿಗಿದ್ದ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ಕಂಡ ಪೊಲೀಸರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಆಗಮಿಸಿದ್ದಾರೆ ಎಂದು ತಪ್ಪಾಗಿ ಭಾವಿಸಿದರು.

ಇದನ್ನೂ ಓದಿ: ನೆಹರು, ಗಾಂಧಿ, ಯಾದವ್ ನಮ್ಮ ನಾಯಕರಲ್ಲ: ಯುವ ಮುಸ್ಲಿಮರಿಗೆ ಅಸಾದುದ್ದೀನ್ ಓವೈಸಿ ಕರೆ

ಓವೈಸಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ನಿಯೋಜಿತ ಪೊಲೀಸರು ಅವರಿಗೆ ಸಕಲ ಶಿಷ್ಟಾಚಾರದೊಂದಿಗೆ ಗೌರವ ವಂದನೆ (ಸಲ್ಯೂಟ್) ಸಲ್ಲಿಸಿದರು. ಪೊಲೀಸರು ವಂದನೆ ಸಲ್ಲಿಸುತ್ತಿರುವುದನ್ನು ಕಂಡ ಓವೈಸಿ ಕೂಡ ಕೆಲಕ್ಷಣ ನಿಂತು ಗೌರವ ಸ್ವೀಕರಿಸಿ ಒಳನಡೆದರು. ಈ ಘಟನೆಯು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಶಿಷ್ಟಾಚಾರವನ್ನು ಪಾಲಿಸುವ ರೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗಾರ್ಡ್ ಆಫ್ ಆನರ್ ನಿಯಮಗಳು ಏನು?:

ಗಾರ್ಡ್ ಆಫ್ ಆನರ್ ಎಂಬುದು ಪೊಲೀಸ್ ಇಲಾಖೆಯ ನಿಯಮಗಳಿಂದ ನಿಯಂತ್ರಿಸಲ್ಪಡುವ ಔಪಚಾರಿಕ ಗೌರವ ವಂದನೆಯಾಗಿದೆ. ಇಂತಹ ವಂದನೆಗಳು ಸಾಮಾನ್ಯವಾಗಿ ಅಧಿಕೃತ ಇಲಾಖಾ ಕಾರ್ಯವಿಧಾನಗಳ ಭಾಗವಾಗಿರುತ್ತವೆ ಮತ್ತು ಇಲಾಖೆಯ ಹೊರಗೆ ನಿಗದಿತ ಸರ್ಕಾರಿ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ. ಉತ್ತರ ಪ್ರದೇಶದ ಗಾರ್ಡ್ ಮತ್ತು ಎಸ್ಕಾರ್ಟ್ ನಿಯಮಗಳ ಅಡಿಯಲ್ಲಿ, ಸೇನಾ ಅಧಿಕಾರಿಗಳು, ಸೇನಾ ತುಕಡಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಮವಸ್ತ್ರಧಾರಿ ಸಿಬ್ಬಂದಿಗೆ ಮಾತ್ರ ಗಾರ್ಡ್ ಆಫ್ ಆನರ್ ಅಥವಾ ಔಪಚಾರಿಕ ವಂದನೆಯನ್ನು ನೀಡಲಾಗುತ್ತದೆ. ಇತರ ಹಿರಿಯ ಅಧಿಕಾರಿಗಳು ಕೇವಲ ಸಾಮಾನ್ಯ ಸೆಲ್ಯೂಟ್‌ಗೆ ಮಾತ್ರ ಅರ್ಹರಾಗಿರುತ್ತಾರೆಯೇ ಹೊರತು, ಔಪಚಾರಿಕ ಗಾರ್ಡ್ ಆಫ್ ಆನರ್‌ಗೆ ಅಲ್ಲ.

ಇದನ್ನೂ ಓದಿ: 2027ರ ಯುಪಿ ಚುನಾವಣೆಯಲ್ಲಿ ಎಐಎಂಐಎಂ ಏಕಾಂಗಿ ಸ್ಪರ್ಧೆಯಿಲ್ಲ: ಆಜಾದ್ ಸಮಾಜ್ ಪಾರ್ಟಿ ಜೊತೆ ಮೈತ್ರಿ ಸುಳಿವು ನೀಡಿದ ಓವೈಸಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಹರಾನ್‌ಪುರ ಪೊಲೀಸ್ ಇಲಾಖೆ, ಇದೊಂದು ಉದ್ದೇಶಪೂರ್ವಕವಲ್ಲದ ಪ್ರಮಾದ ಎಂದು ಸ್ಪಷ್ಟಪಡಿಸಿದೆ. ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು (SSP) ಗ್ರಾಮಾಂತರ ಎಸ್‌ಪಿ ಅವರಿಗೆ ಆದೇಶಿಸಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Sun, 22 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More