ಉನ್ನತ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ ಎಂದಮಾತ್ರಕ್ಕೆ ಸಮಾನತೆ ಸಾಧಿಸಿದಂತಲ್ಲ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ
ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಮಹಿಳೆಯರು ಸ್ಥಾನ ಪಡೆದಿದ್ದಾರೆ ಎಂಬ ಕಾರಣಕ್ಕೆ ಇಡೀ ಸಮಾಜದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ ಎಂದು ಅರ್ಥವಲ್ಲ ಎಂದು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಸಾಲಿನಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ವೃತ್ತಿಪರ ಅವಕಾಶಗಳನ್ನು ಪಡೆಯುವುದರಿಂದ ಮಹಿಳೆಯರನ್ನು ತಡೆಯುತ್ತಿರುವ ರಚನಾತ್ಮಕ ಅಡೆತಡೆಗಳ ಬಗ್ಗೆ ಆಳವಾದ ಪರಿಶೀಲನೆ ನಡೆಸುವಂತೆ ಅವರು ಕರೆ ನೀಡಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೊಮರ್‌ವಿಲ್ಲೆ ಕಾಲೇಜಿನಲ್ಲಿ ನಡೆದ ಚೊಚ್ಚಲ ‘ಕಾರ್ನೆಲಿಯಾ ಸೊರಾಬ್ಜಿ ಸ್ಮಾರಕ ಉಪನ್ಯಾಸ’ದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾಗರತ್ನ, ಸಾರ್ವಜನಿಕ ಜೀವನದಲ್ಲಿ ಕೆಲವು ಗಣ್ಯ ಮಹಿಳೆಯರ ಉಪಸ್ಥಿತಿಯನ್ನು ದೇಶಾದ್ಯಂತ ಇರುವ ಮಹಿಳೆಯರ ನೈಜ ಸ್ಥಿತಿಯ ಪ್ರತಿಬಿಂಬವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು.

ಆಕ್ಸ್‌ಫರ್ಡ್, ನವೆಂಬರ್ 22: ಸಮಾಜದ ಕೆಲವು ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಮಹಿಳೆಯರು ಇದ್ದಾರೆ ಎಂಬ ಒಂದೇ ಕಾರಣಕ್ಕೆ ಇಡೀ ಸಮಾಜದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ. ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೊಮರ್‌ವಿಲ್ಲೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಕಾರ್ನೆಲಿಯಾ ಸೊರಾಬ್ಜಿ ಸ್ಮಾರಕ ಉಪನ್ಯಾಸ’ ನೀಡಿ ಅವರು ಮಾತನಾಡಿದರು. 2027ರ ಸೆಪ್ಟೆಂಬರ್‌ನಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾ. ನಾಗರತ್ನ, ಸಂವಿಧಾನದ ಆಶಯಗಳು ಕೇವಲ ಕಾಗದದ ಮೇಲೆ ಉಳಿಯದೆ ವಾಸ್ತವಿಕ ಸಮಾನತೆಯಾಗಿ ಜಾರಿಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
“ನನಗೆ ಶಿಕ್ಷಣ ಪಡೆಯುವ ಮತ್ತು ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಅವಕಾಶ ಸಿಕ್ಕಿತು. ಆದರೆ, ಭಾರತದಲ್ಲಿ ಉತ್ತಮ ವಿದ್ಯಾರ್ಹತೆ ಹೊಂದಿದ್ದರೂ ಶಿಕ್ಷಣ ಮುಂದುವರಿಸಲು ಅಥವಾ ವೃತ್ತಿ ಮಾಡಲು ಕಷ್ಟಪಡುತ್ತಿರುವ ಅನೇಕ ಮಹಿಳೆಯರಿದ್ದಾರೆ. ಸಂವಿಧಾನದ ಆಶಯಗಳನ್ನು ಭಾರತದ ಮಹಿಳೆಯರು ಸಾಧಿಸಬೇಕಾದರೆ, ಭಾರತೀಯ ಸಮಾಜ ಮತ್ತು ವಿಶೇಷವಾಗಿ ಪುರುಷ ಸಮಾಜವು ಈ ನಿರ್ಣಾಯಕ ಅಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರಾ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ?
ಮಹಿಳೆಯರ ಹಕ್ಕುಗಳ ಪ್ರಗತಿಯನ್ನು ಕೇವಲ ತಾರತಮ್ಯದ ಕಾನೂನುಗಳನ್ನು ರದ್ದುಗೊಳಿಸಿದ ಅಥವಾ ಹೊಸ ಕಾಯ್ದೆಗಳನ್ನು ಜಾರಿಗೆ ತಂದ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೇವಲ ಹೆಚ್ಚಿನ ಕಾನೂನುಗಳನ್ನು ರೂಪಿಸುವ ಮೂಲಕ ತಡೆಯಲು ಸಾಧ್ಯವಿಲ್ಲ. ಕಾನೂನುಗಳು ಬದಲಾದಷ್ಟು ವೇಗವಾಗಿ ಸಮಾಜದ ನಂಬಿಕೆಗಳು ಮತ್ತು ಸಂಪ್ರದಾಯಗಳು ಬದಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮನೆಗೆಲಸದ ಹೊರೆ ಮತ್ತು ತಾರತಮ್ಯ ನಿಲ್ಲಬೇಕು:
ಮಹಿಳೆಯರ ಮೇಲಿರುವ ಸಂಬಳವಿಲ್ಲದ ಮನೆಗೆಲಸ ಮತ್ತು ಕುಟುಂಬದ ಆರೈಕೆಯ ಹೊರೆಯು ಇಂದಿಗೂ ಅವರ ವೃತ್ತಿ ಮತ್ತು ಜೀವನದ ಆಯ್ಕೆಗಳನ್ನು ನಿರ್ಧರಿಸುತ್ತಿದೆ. ಅಲ್ಲದೆ, ಜಾತಿ, ವರ್ಗ, ಅಂಗವೈಕಲ್ಯ, ಧರ್ಮ ಮತ್ತು ಪ್ರದೇಶದ ಆಧಾರದ ಮೇಲೆ ಮಹಿಳೆಯರು ಎದುರಿಸುವ ಸವಾಲುಗಳು ಭಿನ್ನವಾಗಿವೆ. ಪ್ರತಿಯೊಬ್ಬ ಹೆಣ್ಣು ಮಗುವಿಗೂ ಹುಟ್ಟುವ ಹಕ್ಕು, ಶಿಕ್ಷಣ ಪಡೆಯುವ, ಆಸ್ತಿಯಲ್ಲಿ ಪಾಲು ಪಡೆಯುವ ಮತ್ತು ಸುರಕ್ಷಿತವಾಗಿ ಬದುಕುವ ಹಕ್ಕು ಸಿಕ್ಕಾಗ ಮಾತ್ರ ಸಂವಿಧಾನದ 14 ಮತ್ತು 15ನೇ ವಿಧಿಗಳು ಅರ್ಥಪೂರ್ಣವಾಗುತ್ತವೆ ಎಂದು ನ್ಯಾಯಮೂರ್ತಿ ನಾಗರತ್ನ ಒತ್ತಿ ಹೇಳಿದರು.
ನ್ಯಾಯಾಂಗ ಮತ್ತು ವಕೀಲ ವೃತ್ತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕುರಿತು ಮಾತನಾಡಿದ ಅವರು, ಸರ್ಕಾರಿ ವಕೀಲರ ಸಮಿತಿಗಳು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಕಾನೂನು ನೆರವು ವಿಭಾಗಗಳಲ್ಲಿ ಮಹಿಳಾ ವಕೀಲರಿಗೆ ಮೂರನೇ ಒಂದರಷ್ಟು ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದರು
ನ್ಯಾಯಮೂರ್ತಿ ನಾಗರತ್ನ ಅವರ ಉಪನ್ಯಾಸದಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಸುಪ್ರೀಂ ಕೋರ್ಟ್‌ನ 37 ನ್ಯಾಯಮೂರ್ತಿಗಳಲ್ಲಿ ಕೇವಲ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಇನ್ನು ದೇಶದ 25 ಹೈಕೋರ್ಟ್‌ಗಳಲ್ಲಿ ಒಟ್ಟು 781 ನ್ಯಾಯಮೂರ್ತಿಗಳ ಪೈಕಿ ಕೇವಲ 111 ಮಹಿಳಾ ನ್ಯಾಯಮೂರ್ತಿಗಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




