ಮಳೆಯಿಂದ ಏಷ್ಯಾಕಪ್ ಫೈನಲ್ ರದ್ದು, ಪಾಕ್‌ಗೆ ಪ್ರಶಸ್ತಿ: ಭಾರತದ ತೀವ್ರ ವಿರೋಧ
2026ರ ಅಂಧರ ಕ್ರಿಕೆಟ್ ಏಷ್ಯಾಕಪ್ ಫೈನಲ್ ಮಳೆಯಿಂದ ರದ್ದಾಗಿದ್ದರೂ, ಪಾಕಿಸ್ತಾನಕ್ಕೆ ಟ್ರೋಫಿ ನೀಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಾಕ್ ಪರ WBCC ಅಧ್ಯಕ್ಷರ ನಿರ್ಧಾರವನ್ನು ಭಾರತ ವಿರೋಧಿಸಿದೆ. ತಾಂತ್ರಿಕ ಸಮಿತಿ ಜಂಟಿ ಚಾಂಪಿಯನ್ ಘೋಷಿಸಲು ಮುಂದಾಗಿದ್ದರೂ, ಗುಂಪು ಹಂತದ ಪ್ರದರ್ಶನ ಆಧರಿಸಿ ಪಾಕ್ ಗೆ ಪ್ರಶಸ್ತಿ ನೀಡಲಾಗಿದೆ. ಈ ಅನ್ಯಾಯದ ವಿರುದ್ಧ ಭಾರತ ತಂಡ ಪ್ರಶಸ್ತಿ ಸಮಾರಂಭದಿಂದ ಹೊರನಡೆದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಆದರೆ 2026ರ ಅಂಧರ ಕ್ರಿಕೆಟ್ ಏಷ್ಯಾಕಪ್ ಫೈನಲ್‌ನಲ್ಲಿ ಮಾತ್ರ ಉಭಯ ತಂಡಗಳ ನಡುವೆ ಪಂದ್ಯವೇ ನಡೆಯಲಿಲ್ಲ. ಮಳೆಯಿಂದಾಗಿ ಫೈನಲ್ ರದ್ದಾದರೂ, ಪಾಕಿಸ್ತಾನ ತಂಡಕ್ಕೆ ಟ್ರೋಫಿ ನೀಡಿರುವುದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ವಿರೋಧಿಸಿರುವ ಭಾರತ ತಂಡ, ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರಶಸ್ತಿ ಪ್ರದಾನ ಸಮಾರಂಭದಿಂದಲೇ ಹೊರನಡೆದಿದೆ. ಹಾಗಾದರೆ ಅಸಲಿಗೆ ಫೈನಲ್ ಪಂದ್ಯ ನಡೆಯದಿರಲು ಕಾರಣವೇನು? ಪಂದ್ಯ ಆಡದೆಯೇ ಪಾಕಿಸ್ತಾನಕ್ಕೆ ಟ್ರೋಫಿ ನೀಡಿದ್ದು ವಿವಾದಕ್ಕೆ ಕಾರಣವಾಗಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಳೆಯಿಂದಾಗಿ ಫೈನಲ್ ಪಂದ್ಯ ರದ್ದು
2026ರ ಅಂಧರ ಕ್ರಿಕೆಟ್ ಏಷ್ಯಾಕಪ್‌ನ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬಾಂಗ್ಲಾದೇಶದ ಢಾಕಾದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಟಾಸ್ ಕೂಡ ನಡೆಯದೆ ಇಡೀ ಪಂದ್ಯ ರದ್ದುಗೊಂಡಿತು. ಇದಾದ ಬಳಿಕ ಟೂರ್ನಿಯ ತಾಂತ್ರಿಕ ಸಮಿತಿಯು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲು ನಿರ್ಧರಿಸಿತ್ತು. ಆದರೆ ವಿಶ್ವ ಅಂಧರ ಕ್ರಿಕೆಟ್ ಮಂಡಳಿ (WBCC) ಅಧ್ಯಕ್ಷ ಸೈಯದ್ ಸುಲ್ತಾನ್ ಶಾ ಅವರು ಈ ನಿರ್ಧಾರವನ್ನು ಬದಲಿಸಿ, ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ ಪಟ್ಟ ನೀಡಿದರು ಎನ್ನಲಾಗಿದೆ.
ಇಲ್ಲಿಯೇ ವಿವಾದ ಶುರುವಾಗಿದೆ. ಸೈಯದ್ ಸುಲ್ತಾನ್ ಶಾ ಪಾಕಿಸ್ತಾನದವರಾಗಿದ್ದು, ತಮ್ಮ ದೇಶದ ತಂಡಕ್ಕೆ ಪ್ರಶಸ್ತಿ ನೀಡುವ ಮೂಲಕ ಟೂರ್ನಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಭಾರತ ಆರೋಪಿಸಿದೆ.
🚨 A FINAL THAT WAS NEVER PLAYED. A TROPHY THAT WAS STILL AWARDED.
The controversy deepens at the Men’s Asia Cup for the Blind.
The WBCC Technical Committee reportedly decided on joint winners, but President Sultan Shah allegedly overruled that decision, with Pakistan ultimately awarded the trophy.
Who had the authority to make that call? And why was the committee’s decision overturned?
Blind cricket deserves transparency and fair play.
#BlindCricket #AsiaCup #3rdManView https://t.co/bstqOqZ1Rz
— Third Man View (@3rdManView) November 20, 2026
ಗುಂಪು ಹಂತದಲ್ಲಿ ಪಾಕಿಸ್ತಾನಕ್ಕೆ ಅಗ್ರಸ್ಥಾನ
ಪಾಕಿಸ್ತಾನ ತಂಡ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಭಾರತ ವಿರುದ್ಧದ ಪಂದ್ಯದಲ್ಲೂ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಅಂತರದ ರೋಚಕ ಜಯ ದಾಖಲಿಸಿತ್ತು. ಇತ್ತ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತ್ತು. ಹೀಗಾಗಿ ಪ್ರಶಸ್ತಿಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ ನಡೆಯಲೇ ಇಲ್ಲ.
ಇದೀಗ ಗುಂಪು ಹಂತದ ಪ್ರದರ್ಶನದ ಆಧಾರದ ಮೇಲೆ ಪಾಕಿಸ್ತಾನಕ್ಕೆ ಪ್ರಶಸ್ತಿ ನೀಡಿರುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಾಂತ್ರಿಕ ಸಮಿತಿ ಆರಂಭದಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಬದಲಿಸಿರುವುದರ ಬಗ್ಗೆಯೂ ಪ್ರಶ್ನೆ ಎತ್ತಿದೆ. ಈ ಬೆಳವಣಿಗೆಯಿಂದ ಅಂಧರ ಕ್ರಿಕೆಟ್ ಏಷ್ಯಾಕಪ್ 2026ರ ಫೈನಲ್ ಪಂದ್ಯಕ್ಕಿಂತಲೂ ಪ್ರಶಸ್ತಿ ಹಂಚಿಕೆಯ ವಿವಾದವೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.




