AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವಿಕೆಟ್ ಜಯದ ರೋಚಕತೆ; ಏಷ್ಯಾಕಪ್ ಗೆದ್ದ ಭಾರತಕ್ಕೆ ಮೋದಿ ಅಭಿನಂದನೆ

ಅಲ್ ಅಮೆರಾತ್‌ನಲ್ಲಿ ನಡೆದ U-19 ಏಷ್ಯಾಕಪ್ 2026 ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು 1 ವಿಕೆಟ್‌ನಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 338 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಮೋಹಿತ್ ಉಲ್ವಾ (49*) ನಿರ್ಣಾಯಕ ಆಟವಾಡಿದರು. ಈ ಐತಿಹಾಸಿಕ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ, ಯುವ ಆಟಗಾರರ ಸಾಧನೆ ದೇಶದ ಅನೇಕ ಯುವಕರಿಗೆ ಸ್ಪೂರ್ತಿಯಾಗಿದೆ ಎಂದಿದ್ದಾರೆ.

ಒಂದು ವಿಕೆಟ್ ಜಯದ ರೋಚಕತೆ; ಏಷ್ಯಾಕಪ್ ಗೆದ್ದ ಭಾರತಕ್ಕೆ ಮೋದಿ ಅಭಿನಂದನೆ
ಭಾರತ ತಂಡ, ಪ್ರಧಾನಿ ಮೋದಿ
ಪೃಥ್ವಿಶಂಕರ
|

Updated on: Nov 14, 2026 | 8:41 PM

Share

ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ರೋಚಕ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ ಒಂದು ವಿಕೆಟ್‌ನಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಾಕಿಸ್ತಾನ ನೀಡಿದ್ದ 338 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ, ಕೊನೆಯ ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಯುವಪಡೆಯ ಮಾಡು ಇಲ್ಲವೇ ಮಡಿ ಹೋರಾಟವನ್ನು ಮೆಚ್ಚಿಕೊಂಡಿರುವ ಪ್ರಧಾನಿ ಮೋದಿ, ಯುವ ಆಟಗಾರರ ಅದ್ಭುತ ಪ್ರದರ್ಶನವನ್ನು ಕೊಂಡಾಡಿದ್ದು, ತಂಡದ ಈ ಸಾಧನೆ ದೇಶದ ಹಲವು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೊಂದು ಅದ್ಭುತ ದಿನ

ತಮ್ಮ ಎಕ್ಸ್ ಖಾತೆಯಲ್ಲಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಮೋದಿ, ‘ಭಾರತೀಯ ಕ್ರಿಕೆಟ್‌ಗೆ ಇದೊಂದು ಅದ್ಭುತ ದಿನ! ಇಂದಿನ ಅತ್ಯುತ್ತಮ ಪ್ರದರ್ಶನ ಹಾಗೂ ಪುರುಷರ ಅಂಡರ್-19 ಏಷ್ಯಾಕಪ್ 2026ರ ಪ್ರಶಸ್ತಿ ಗೆದ್ದಿರುವ ನಮ್ಮ ಯುವ ಕ್ರಿಕೆಟಿಗರ ಬಗ್ಗೆ ಅಪಾರ ಹೆಮ್ಮೆ ಇದೆ. ಅವರ ಈ ಸಾಧನೆ ಹಲವು ಯುವಕರಿಗೆ ಸ್ಫೂರ್ತಿಯಾಗಲಿದೆ. ಮುಂದಿನ ಪಂದ್ಯಗಳು ಹಾಗೂ ಭವಿಷ್ಯದ ಪ್ರಯತ್ನಗಳಿಗೆ ತಂಡಕ್ಕೆ ಶುಭಾಶಯಗಳು’ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

ಮೋಹಿತ್, ಮನಾಲ್ ಜೊತೆಯಾಟ

338 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಕೊನೆಯ ಹಂತದಲ್ಲಿ ಮೋಹಿತ್ ಉಲ್ವಾ ಆಸರೆಯಾದರು. ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿದ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ 252 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮೋಹಿತ್, ಮನಾಲ್ ಚೌಹಾಣ್ ಜೊತೆಗೂಡಿ 57 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ಮನಾಲ್ 32 ಎಸೆತಗಳಲ್ಲಿ 47 ರನ್ ಗಳಿಸಿದರು. ಬಳಿಕ ಚಿಗುರುಪತಿ ವೆಂಕಟ ಅವರೊಂದಿಗೆ ಮುರಿಯದ 30 ರನ್‌ಗಳ ಜೊತೆಯಾಟವಾಡಿದ ಮೋಹಿತ್ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

337 ರನ್ ಕಲೆಹಾಕಿದ ಪಾಕ್

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು. ಉಸ್ಮಾನ್ ಖಾನ್ 111 ಎಸೆತಗಳಲ್ಲಿ 107 ರನ್ ಸಿಡಿಸಿ ಶತಕ ಬಾರಿಸಿದರೆ, ಅಬ್ದುಲ್ ಖಾದಿರ್ 54 ಎಸೆತಗಳಲ್ಲಿ 80 ರನ್ ಗಳಿಸಿದರು. ನಾಯಕ ಫರ್ಹಾನ್ ಯೂಸುಫ್ 60 ಎಸೆತಗಳಲ್ಲಿ 63 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಭಾರತದ ಪರ ಕಾವ್ಯ ಪಟೇಲ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಚಿಗುರುಪತಿ ವೆಂಕಟ 3 ವಿಕೆಟ್ ಪಡೆದು ಗಮನ ಸೆಳೆದರು.

ರಣರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತ ಯುವ ಪಡೆ

ಆರ್ಯವೀರ್​ಗೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ

ಇನ್ನು ಫೈನಲ್ ಪಂದ್ಯದಲ್ಲಿ 58 ರನ್ ಗಳಿಸಿದ್ದ ಆರ್ಯವೀರ್ ಸೆಹ್ವಾಗ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಐದು ಪಂದ್ಯಗಳಲ್ಲಿ ಒಟ್ಟು 361 ರನ್ ಗಳಿಸಿದ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಮೂಲಕ ಭಾರತ ತಂಡದ ಏಷ್ಯಾಕಪ್ ಗೆಲುವಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದರು.

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More