AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ, ಪಾಕ್ ತಂಡಗಳಿಗೆ ಜಯ: WTC ನೂತನ ಅಂಕಪಟ್ಟಿ ಪ್ರಕಟ

2027ರ ಜೂನ್‌ನಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ WTC ಫೈನಲ್ ಟಿಕೆಟ್‌ಗಾಗಿ ಅಂಕಪಟ್ಟಿಯ ಅಗ್ರ ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ್ ತಂಡಗಳ ಭರ್ಜರಿ ಜಯದ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ನೂತನ ಅಂಕಪಟ್ಟಿ ಪ್ರಕಟಿಸಿದೆ.

ಸೌತ್ ಆಫ್ರಿಕಾ, ಪಾಕ್ ತಂಡಗಳಿಗೆ ಜಯ: WTC ನೂತನ ಅಂಕಪಟ್ಟಿ ಪ್ರಕಟ
Wtc 2027 Image Credit source: ICC
ಝಾಹಿರ್ ಯೂಸುಫ್
|

Updated on: Nov 20, 2026 | 2:12 PM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಫೈನಲ್ ರೇಸ್ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಜೊಹಾನ್ಸ್‌ಬರ್ಗ್‌ನಲ್ಲಿ ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ಹಾಗೂ ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ತಂಡಗಳು ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಐಸಿಸಿ ನೂತನ ಅಂಕಪಟ್ಟಿಯನ್ನು ಪ್ರಕಟಿಸಿದೆ. ಈ ಎರಡು ಪಂದ್ಯಗಳ ಫಲಿತಾಂಶವು ಅಂಕಪಟ್ಟಿಯ ಅಗ್ರಸ್ಥಾನ ಹಾಗೂ ಕೆಳಹಂತದ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆ ತಂದಿದೆ.

ಅಗ್ರಸ್ಥಾನಕ್ಕೇರಿದ ಸೌತ್ ಆಫ್ರಿಕಾ:

ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೌತ್ ಆಫ್ರಿಕಾ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸ್ಪಿನ್ನರ್ ಸೈಮನ್ ಹಾರ್ಮರ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಬಾಂಗ್ಲಾದೇಶವನ್ನು ಕಟ್ಟಿಹಾಕಿದ ಹರಿಣಗಳ ಪಡೆ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ಆಡಿದ 8 ಪಂದ್ಯಗಳಲ್ಲಿ 6 ಜಯ ಹಾಗೂ 2 ಸೋಲುಗಳೊಂದಿಗೆ ಒಟ್ಟು 72 ಅಂಕಗಳನ್ನು ಕಲೆಹಾಕಿದೆ. ಇದರೊಂದಿಗೆ ಸೌತ್ ಆಫ್ರಿಕಾ ತಂಡದ ಶೇಕಡಾವಾರು ಅಂಕ (PCT) 75.00% ಕ್ಕೆ ಏರಿಕೆಯಾಗಿದ್ದು, ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

 ಕೊನೆಯ ಸ್ಥಾನದಲ್ಲೇ ಉಳಿದ ಪಾಕಿಸ್ತಾನ್!

ಇತ್ತ ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿ, ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಗೆಲುವಿನಿಂದ ಪಾಕಿಸ್ತಾನಕ್ಕೆ 12 ಅಂಕಗಳು ಲಭಿಸಿದ್ದು, ಒಟ್ಟು ಅಂಕಗಳ ಸಂಖ್ಯೆ 16 ಕ್ಕೆ ಏರಿದೆ (PCT 13.33%).

ಆದರೆ, ಈ ಹಿಂದಿನ ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಕಾರಣದಿಂದಾಗಿ ಪಾಕಿಸ್ತಾನಕ್ಕೆ ಭಾರಿ ಅಂಕಗಳ ಕಡಿತವಾಗಿರುವುದು ತಂಡಕ್ಕೆ ಮುಳುವಾಗಿದೆ. ಪರಿಣಾಮ, ಸರಣಿ ಗೆದ್ದರೂ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಇನ್ನೊಂದೆಡೆ, ಸೋಲು ಕಂಡ ಶ್ರೀಲಂಕಾ 13 ಅಂಕಗಳೊಂದಿಗೆ (PCT 13.54%) 8ನೇ ಸ್ಥಾನಕ್ಕೆ ಕುಸಿದಿದೆ.

ಟೀಮ್ ಇಂಡಿಯಾ ಸ್ಥಿತಿ ಏನು?

ಶುಭ್​ಮನ್ ಗಿಲ್ ನಾಯಕತ್ವದ ಭಾರತ ತಂಡವು ಸದ್ಯ 11 ಪಂದ್ಯಗಳಲ್ಲಿ 5 ಗೆಲುವು, 4 ಸೋಲು ಹಾಗೂ 2 ಡ್ರಾಗಳೊಂದಿಗೆ 68 ಅಂಕಗಳನ್ನು (PCT 51.52%) ಹೊಂದಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಸ್ಥಿರವಾಗಿದೆ. ಸದ್ಯ ನ್ಯೂಝಿಲೆಂಡ್ ಪ್ರವಾಸದಲ್ಲಿರುವ ಭಾರತ, ಕಿವೀಸ್ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ (2-0) ಮಾಡಿದರೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯುವ ಉತ್ತಮ ಅವಕಾಶ ಹೊಂದಿದೆ.

WTC ನೂತನ ಅಂಕಪಟ್ಟಿ ಪ್ರಕಟ:

ಶ್ರೇಯಾಂಕ ತಂಡ ಪಂದ್ಯಗಳು ಗೆಲುವು ಸೋಲು ಡ್ರಾ ಅಂಕಗಳು ಶೇಕಡಾವಾರು (PCT)
1 ಸೌತ್ ಆಫ್ರಿಕಾ 8 6 2 0 72 75.00%
2 ನ್ಯೂಝಿಲೆಂಡ್ 6 4 1 1 52 72.22%
3 ಆಸ್ಟ್ರೇಲಿಯಾ 13 9 4 0 108 69.23%
4 ಭಾರತ 11 5 4 2 68 51.52%
5 ಬಾಂಗ್ಲಾದೇಶ್ 9 3 4 2 44 40.74%
6 ಇಂಗ್ಲೆಂಡ್ 16 7 8 1 74 38.54%
7 ವೆಸ್ಟ್ ಇಂಡೀಸ್ 14 3 8 3 46 27.38%
8 ಶ್ರೀಲಂಕಾ 8 1 3 4 13 13.54%
9 ಪಾಕಿಸ್ತಾನ್ 10 2 7 1 16 13.33%

ಇದನ್ನೂ ಓದಿ: ನೋ ಬಾಲ್​ನಲ್ಲೇ ‘ಶತಕ’ ಪೂರೈಸಿದ ಪಾಕಿಸ್ತಾನ್!

2027ರ ಜೂನ್‌ನಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ WTC ಫೈನಲ್ ಪಂದ್ಯಕ್ಕೆ ಅಂಕಪಟ್ಟಿಯ ಅಗ್ರ ಎರಡು ತಂಡಗಳು ಮಾತ್ರ ಅರ್ಹತೆ ಪಡೆಯಲಿವೆ. ಸದ್ಯ ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ನೇರ ಪೈಪೋಟಿ ಇದ್ದು, ಈ ಟೀಮ್​ಗಳಲ್ಲಿ ಯಾವ ತಂಡಗಳು ಫೈನಲ್​ಗೇರಲಿವೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More