AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಸಂಪೂರ್ಣ ಹುಚ್ಚುತನ, ಇದೇ ಈಗಿನ ನ್ಯೂ ನಾರ್ಮಲ್: ಅಶ್ವಿನ್ ಆಕ್ರೋಶ

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಪ್ರಕಟವಾಗುತ್ತಿದ್ದಂತೆಯೇ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಯಾಗಿತ್ತು. ತಂಡದ ಪ್ರಮುಖ ಅಸ್ತ್ರಗಳಾದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರಂತಹ ಅನುಭವಿ ಮ್ಯಾಚ್-ವಿನ್ನರ್‌ಗಳನ್ನು ವೆಲ್ಲಿಂಗ್ಟನ್ ಟೆಸ್ಟ್‌ನಿಂದ ಹೊರಗಿಟ್ಟಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಅನಿರೀಕ್ಷಿತ ನಿರ್ಧಾರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರನ್ನು ಅಚ್ಚರಿಗೆ ದೂಡಿದೆ.

ಇದು ಸಂಪೂರ್ಣ ಹುಚ್ಚುತನ, ಇದೇ ಈಗಿನ ನ್ಯೂ ನಾರ್ಮಲ್: ಅಶ್ವಿನ್ ಆಕ್ರೋಶ
Siraj - Ashwin - JadejaImage Credit source: GettyImages
ಝಾಹಿರ್ ಯೂಸುಫ್
|

Updated on: Nov 20, 2026 | 11:12 AM

Share

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕ ಶುಭ್​ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಈ ಆಯ್ಕೆ ತಂತ್ರವನ್ನು ಅಶ್ವಿನ್ “ಸಂಪೂರ್ಣ ಹುಚ್ಚುತನ” ಎಂದು ಕರೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಅಶ್ವಿನ್, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಭಾರತದ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರವಾಗಿದೆ. ಇಂತಹ ಹಿರಿಯ ಮತ್ತು ಮ್ಯಾಚ್-ವಿನ್ನರ್ ಆಟಗಾರರನ್ನು ಮುಂಚಿತವಾಗಿಯೇ ಬೆಂಚ್ ಕಾಯಿಸುವ ಬದಲು, ಆಡಿ ತಮ್ಮದೇ ಹಾದಿಯಲ್ಲಿ ವಿಫಲವಾಗುವ ಅವಕಾಶವನ್ನು ಅವರಿಗೆ ನೀಡಬೇಕಿತ್ತು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಹಿಂದಿನ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ 516 ರನ್ ಗಳಿಸಿ ಭರ್ಜರಿ ಫಾರ್ಮ್‌ನಲ್ಲಿದ್ದರು. ಮತ್ತೊಂದೆಡೆ, ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಸಿರಾಜ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ವಿಶೇಷವಾಗಿ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಸಿರಾಜ್ ಪ್ರಮುಖ ಅಸ್ತ್ರವಾಗಿದ್ದಾರೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಅವರನ್ನು ಕೈಬಿಟ್ಟಿರುವುದು ಅನ್ಯಾಯ ಎಂದು ಅಶ್ವಿನ್ ಕಿಡಿಕಾರಿದ್ದಾರೆ.

“ಇದೇ ಈಗಿನ ನ್ಯೂ ನಾರ್ಮಲ್”:

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಭಿಮಾನಿಯೊಬ್ಬರು ಸಿರಾಜ್ ಮತ್ತು ಜಡೇಜಾ ಇಲ್ಲದ ತಂಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್, “ಇದು ತುಂಬಾ ಕಠಿಣ ನಿರ್ಧಾರ, ಅತ್ಯಂತ ಕಠಿಣ. ಆದರೆ ಭಾರತೀಯ ತಂಡದಲ್ಲಿ ಈಗ ಇದೇ ‘ನ್ಯೂ ನಾರ್ಮಲ್’ (ಹೊಸ ಸಾಮಾನ್ಯ ಸಂಗತಿ) ಆಗಿಬಿಟ್ಟಿದೆ” ಎಂದು ಮ್ಯಾನೇಜ್‌ಮೆಂಟ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ತಂಡದಿಂದ ಹೊರಗಿಡುವುದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ಇದು ತಂಡದ ವಾತಾವರಣಕ್ಕೆ ಒಳ್ಳೆಯದಲ್ಲ ಎಂದು ಅಶ್ವಿನ್ ಎಚ್ಚರಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯ:

ನವೆಂಬರ್ 19 ರಂದು ಆರಂಭವಾದ ಈ ಪಂದ್ಯದಲ್ಲಿ, ನ್ಯೂಝಿಲೆಂಡ್‌ನ ವೇಗದ ಪಿಚ್‌ಗೆ ತಕ್ಕಂತೆ ನಾಲ್ವರು ವೇಗಿಗಳು ಮತ್ತು ಒಬ್ಬ ಸ್ಪಿನ್ ಆಲ್‌ರೌಂಡರ್‌ನೊಂದಿಗೆ ಕಣಕ್ಕಿಳಿಯಲು ನಾಯಕ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ನಿರ್ಧರಿಸಿದ್ದರು.

  • ಮೊಹಮ್ಮದ್ ಸಿರಾಜ್ ಬದಲಿಗೆ: ಜಸ್​ಪ್ರೀತ್ ಬುಮ್ರಾ ಜೊತೆಗೆ ಆಕಾಶ್ ದೀಪ್, ಅನ್ಶುಲ್ ಕಂಬೋಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಸ್ಥಾನ ನೀಡಲಾಯಿತು.
  •  ರವೀಂದ್ರ ಜಡೇಜಾ ಬದಲಿಗೆ: ವಾಷಿಂಗ್ಟನ್ ಸುಂದರ್ ಅವರನ್ನು ಸ್ಪಿನ್ ಆಲ್‌ರೌಂಡರ್ ಆಗಿ ಆಯ್ಕೆ ಮಾಡಲಾಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆರಂಭದಲ್ಲಿ ಬುಮ್ರಾ ಉತ್ತಮ ಮುನ್ನಡೆ ತಂದುಕೊಟ್ಟರೂ, ನಂತರ ಕಿವೀಸ್ ಬ್ಯಾಟರ್‌ಗಳಾದ ಹೆನ್ರಿ ನಿಕೋಲ್ಸ್ (175) ಮತ್ತು ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಜೊತೆಯಾಟವನ್ನು ಮುರಿಯಲು ಭಾರತೀಯ ಬೌಲರ್‌ಗಳು ಪರದಾಡಿದರು. ಪರಿಣಾಮವಾಗಿ ನ್ಯೂಝಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 368 ರನ್ ಕಲೆಹಾಕಿತು.

ಸಿರಾಜ್ ಬದಲಿಗೆ ಅವಕಾಶ ಪಡೆದ ಪ್ರಸಿದ್ಧ್ ಕೃಷ್ಣ ಮೊದಲ ದಿನ ವಿಕೆಟ್ ಪಡೆಯಲು ವಿಫಲರಾದರೆ, ವಾಷಿಂಗ್ಟನ್ ಸುಂದರ್ ಕೂಡ ವಿಕೆಟ್ ಪಡೆಯುವಲ್ಲಿ ಎಡವಿದರು. ಈ ಹಿನ್ನಡೆಯ ಬೆನ್ನಲ್ಲೇ, ಅನುಭವಿಗಳಾದ ಸಿರಾಜ್ ಮತ್ತು ಜಡೇಜಾ ಅವರನ್ನು ಹೊರಗಿಟ್ಟ ನಿರ್ಧಾರದ ವಿರುದ್ಧ ಅಶ್ವಿನ್ ಸೇರಿದಂತೆ ರವಿಶಾಸ್ತ್ರಿ ಹಾಗೂ ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜರು ಕೂಡ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಣಕಲು ಹೋಗಿ ಕೆಟ್ಟ ಜೈಸ್ವಾಲ್: ನಿಕೋಲ್ಸ್ ತಿರುಗೇಟಿಗೆ ಫುಲ್ ಸೈಲೆಂಟ್!

ಒಟ್ಟಾರೆಯಾಗಿ, ವಿದೇಶಿ ಪಿಚ್‌ಗಳಲ್ಲಿ ಅನುಭವಿಗಳ ಬದಲಿಗೆ ಯುವ ಆಟಗಾರರಿಗೆ ಮಣೆ ಹಾಕುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಈ ದಿಟ್ಟ ಪ್ರಯೋಗ ಮೊದಲ ಟೆಸ್ಟ್‌ನಲ್ಲೇ ಹಿನ್ನಡೆ ಅನುಭವಿಸುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಆಟಗಾರರ ಅನುಭವ ಮತ್ತು ಫಾರ್ಮ್ ಅನ್ನು ಕಡೆಗಣಿಸಿ ತೆಗೆದುಕೊಂಡ ಈ ನಿರ್ಧಾರ ಸರಣಿಯ ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ, ಮತ್ತು ಸಿರಾಜ್ ಹಾಗೂ ಜಡೇಜಾ ಮುಂದಿನ ಪಂದ್ಯಕ್ಕೆ ತಂಡಕ್ಕೆ ಮರಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ
ಅಕ್ವಾನ್ ಚಂಡಮಾರುತ: ಒಡಿಶಾ, ಆಂಧ್ರದಲ್ಲಿ 3 ಲಕ್ಷ ಜನರ ಸ್ಥಳಾಂತರ
ಅಕ್ವಾನ್ ಚಂಡಮಾರುತ: ಒಡಿಶಾ, ಆಂಧ್ರದಲ್ಲಿ 3 ಲಕ್ಷ ಜನರ ಸ್ಥಳಾಂತರ
ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು