IND A vs PAK A: ತಿಲಕ್ ವರ್ಮಾ ‘ಸ್ಲೋ ಸೆಂಚುರಿ’ಯಿಂದ ಸೋತ ಭಾರತ?
ಬೃಹತ್ ಮೊತ್ತ ಬೆನ್ನಟ್ಟುವಾಗ ವಿಕೆಟ್ ಉಳಿಸಿಕೊಳ್ಳುವ ನೆಪದಲ್ಲಿ ಎಸೆತಗಳನ್ನು ವ್ಯರ್ಥ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಭಾರತ 'ಎ' ಮತ್ತು ಪಾಕಿಸ್ತಾನ್ 'ಎ' ನಡುವಿನ ಪಂದ್ಯವೇ ಸಾಕ್ಷಿ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆಲ್ಲುವ ಉತ್ತಮ ಅವಕಾಶವಿದ್ದರೂ, ನಾಯಕ ತಿಲಕ್ ವರ್ಮಾ ಅವರ ಆಮೆಗತಿಯ ಬ್ಯಾಟಿಂಗ್‌ನಿಂದಾಗಿ ಭಾರತ 48 ರನ್‌ಗಳ ಹೀನಾಯ ಸೋಲು ಕಂಡಿದೆ.

ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ವಿಕೆಟ್ ಉಳಿಸಿಕೊಳ್ಳುವುದು ಮುಖ್ಯವೇ ಅಥವಾ ರನ್ ಗತಿಗೆ ವೇಗ ನೀಡುವುದು ಮುಖ್ಯವೇ? ACC ಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಪಾಕಿಸ್ತಾನ್ ‘ಎ’ ವಿರುದ್ಧ ಭಾರತ ‘ಎ’ ತಂಡ ಅನುಭವಿಸಿದ 48 ರನ್‌ಗಳ ಸೋಲಿನ ಬಳಿಕ ಕ್ರಿಕೆಟ್ ವಲಯದಲ್ಲಿ ಈ ಚರ್ಚೆ ಜೋರಾಗಿದೆ. ನಾಯಕ ತಿಲಕ್ ವರ್ಮಾ ಶತಕ ಸಿಡಿಸಿ ಮಿಂಚಿದರೂ, ಅವರ ಅತಿಯಾದ ನಿಧಾನಗತಿಯ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ರನ್ ಚೇಸ್‌ಗೆ ಬ್ರೇಕ್ ಹಾಕಿದ ಸ್ಲೋ ಬ್ಯಾಟಿಂಗ್:
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ‘ಎ’ ತಂಡ 313 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಈ 314 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (42 ಎಸೆತಗಳಲ್ಲಿ 70 ರನ್) ಸ್ಫೋಟಕ ಆರಂಭ ಒದಗಿಸಿದ್ದರು. ಆದರೆ ಇನ್ನೊಂದು ತುದಿಯಲ್ಲಿ ಕ್ರೀಸ್‌ಗೆ ಬಂದ ನಾಯಕ ತಿಲಕ್ ವರ್ಮಾ ರನ್ ಗಳಿಸಲು ತೀವ್ರ ಪರದಾಡಿದರು.
ಪವರ್‌ಪ್ಲೇನಲ್ಲೇ ಪರದಾಡಿದ ತಿಲಕ್!
ತಿಲಕ್ ವರ್ಮಾ ತಮ್ಮ ಇನ್ನಿಂಗ್ಸ್‌ನ ಮೊದಲ 36 ಎಸೆತಗಳಲ್ಲಿ ಗಳಿಸಿದ್ದು ಕೇವಲ 8 ರನ್ ಮಾತ್ರ! ಇನ್ನು ಅರ್ಧಶತಕ ಪೂರೈಸಲು ಅವರು ತೆಗೆದುಕೊಂಡಿದ್ದು ಬರೋಬ್ಬರಿ 95 ಎಸೆತಗಳನ್ನು ಎಂದರೆ ನಂಬಲೇಬೇಕು.
300ಕ್ಕೂ ಅಧಿಕ ರನ್ ಬೆನ್ನಟ್ಟುವಾಗ ಪ್ರತಿ ಓವರ್‌ಗೆ 6ಕ್ಕಿಂತ ಹೆಚ್ಚು ರನ್‌ಗಳ ಅಗತ್ಯವಿರುತ್ತದೆ. ಆದರೆ ತಿಲಕ್ ವರ್ಮಾ ತುದಿಯಲ್ಲಿ ರನ್ ಬಾರದ ಕಾರಣ, ಅಗತ್ಯ ರನ್ ರೇಟ್ ಏರುತ್ತಲೇ ಹೋಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಇತರೆ ಬ್ಯಾಟರ್ಗಳು ದೊಡ್ಡ ಹೊಡೆತಗಳಿಗೆ ಕೈಹಾಕಿ ವಿಕೆಟ್ ಒಪ್ಪಿಸಿದರು.
ಸ್ಲೋ ಸೆಂಚುರಿಗೆ ಬೆಲೆತೆತ್ತ ಭಾರತ:
129 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶಹಬಾಝ್ ಅಹ್ಮದ್ (49 ಎಸೆತಗಳಲ್ಲಿ 56 ರನ್) ಜೊತೆಗೂಡಿದ ತಿಲಕ್ 102 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲೂ ತಿಲಕ್ ಆಟದಲ್ಲಿ ಆಕ್ರಮಣಕಾರಿ ಮನೋಭಾವ ಕಂಡುಬರಲಿಲ್ಲ. ಅಂತಿಮವಾಗಿ ತಿಲಕ್ 149 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 100 ರನ್ ಪೂರೈಸಿದರು.
ಅಂದರೆ 314 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ಕೇವಲ 100 ರನ್ ಕಲೆಹಾಕಲು ತಿಲಕ್ ವರ್ಮಾ ಬರೋಬ್ಬರಿ 25 ಓವರ್‌ಗಳನ್ನು ನುಂಗಿಹಾಕಿದರು. ಅದೂ ಸಹ ಕೇವಲ 67.11ರ ಅತ್ಯಂತ ಕಳಪೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ. ಈ ನಿಧಾನಗತಿಯ ಬ್ಯಾಟಿಂಗ್ ಮೂಲಕ ಅವರು ಭಾರತ ತಂಡದ ಸೋಲಿಗೆ ತಾವೇ ಮುನ್ನುಡಿ ಬರೆದರು.
ಕೊನೆಯಲ್ಲಿ ಕೈಕೊಟ್ಟ ಅದೃಷ್ಟ:
ತಿಲಕ್ ವರ್ಮಾ ಅವರ ನಿಧಾನಗತಿಯ ಆಟದಿಂದಾಗಿ ಕೊನೆಯ ಓವರ್‌ಗಳಲ್ಲಿ ಅಸಾಧ್ಯವಾದ ರನ್ ರೇಟ್ ಗುರಿ ಉಳಿದುಕೊಂಡಿತು. ಈ ಹಂತದಲ್ಲಿ ಶಹಬಾಝ್ ಅಹ್ಮದ್ ಅಬ್ಬರಿಸಿದರೂ (56) ತಿಲಕ್ ವರ್ಮಾ ಕಡೆಯಿಂದ ಬಿರುಸಿನ ಬ್ಯಾಟಿಂಗ್ ಮೂಡಿ ಬರಲೇ ಇಲ್ಲ. ಪರಿಣಾಮ ಭಾರತ ‘ಎ’ ತಂಡ 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಒಟ್ಟಾರೆಯಾಗಿ, ಒಂದೆಡೆ ಸತತ ವಿಕೆಟ್‌ಗಳು ಬೀಳುತ್ತಿದ್ದ ಕಾರಣ ತಿಲಕ್ ವರ್ಮಾ ಎಚ್ಚರಿಕೆಯ ಆಟವಾಡಿದರು ಎಂದು ಸಮರ್ಥಿಸಿಕೊಳ್ಳಬಹುದು. ಆದರೆ, ಆಧುನಿಕ ಏಕದಿನ ಕ್ರಿಕೆಟ್‌ನಲ್ಲಿ ಬೃಹತ್ ಮೊತ್ತ ಬೆನ್ನಟ್ಟುವಾಗ ಎಸೆತಗಳನ್ನು ವ್ಯರ್ಥ ಮಾಡುವುದು ಸೋಲಿಗೆ ಆಹ್ವಾನ ನೀಡಿದಂತೆ. ತಿಲಕ್ ವರ್ಮಾ ಅವರ ವೈಯಕ್ತಿಕ ಶತಕ ದಾಖಲೆಯ ಪುಸ್ತಕ ಸೇರಿದರೂ, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲವಾಯಿತು ಎಂಬುದು ಕಟು ಸತ್ಯ.
ಭಾರತ ಎ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ , ಅಭಿಷೇಕ್ ಶರ್ಮಾ , ಆಯುಷ್ ಬದೋನಿ , ತಿಲಕ್ ವರ್ಮಾ (ನಾಯಕ) , ಕುಮಾರ್ ಕುಶಾಗ್ರ (ವಿಕೆಟ್ ಕೀಪರ್) , ರಿಂಕು ಸಿಂಗ್ , ಸೂರ್ಯಾಂಶ್ ಶೆಡ್ಗೆ , ಶಹಬಾಝ್ ಅಹ್ಮದ್ , ವಿಪ್ರಾಜ್ ನಿಗಮ್ , ಹರ್ಷಿತ್ ರಾಣಾ , ಪ್ರಿನ್ಸ್ ಯಾದವ್.
ಇದನ್ನೂ ಓದಿ: ಟೀಮ್ ಇಂಡಿಯಾ ಗೆಲ್ಲುತ್ತಾ? ಮ್ಯಾಚ್ ಡ್ರಾ ಆಗುತ್ತಾ? ಹೀಗಿರಲಿದೆ ರಣತಂತ್ರ
ಪಾಕಿಸ್ತಾನ್ ಎ ಪ್ಲೇಯಿಂಗ್ 11: ಶಾಮಿಲ್ ಹುಸೇನ್ , ಮಾಝ್ ಸದಾಕತ್ , ರೋಹೈಲ್ ನಝೀರ್ (ವಿಕೆಟ್ ಕೀಪರ್ ), ಹಸನ್ ನವಾಝ್ , ಅಬ್ದುಲ್ ಸಮದ್ (ನಾಯಕ) , ಫರ್ಹಾನ್ ಯೂಸುಫ್ , ಸಾದ್ ಮಸೂದ್ , ಮೊಹಮ್ಮದ್ ಇಮ್ರಾನ್ ರಾಂಧವ , ಅಹ್ಮದ್ ದಾನಿಯಲ್ , ಸುಫ್ಯಾನ್ ಮೋಕಿಮ್ , ಅಲಿ ರಾಝ.




