AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿ ಮಗಳನ್ನೇ ಕೊಂದ ಪೋಷಕರು, ಇರಾನ್‌ನಲ್ಲಿ ಮರ್ಯಾದಾ ಹತ್ಯೆ

ಇರಾನ್‌ನಲ್ಲಿ 19 ವರ್ಷದ ಗರ್ಭಿಣಿ ಮಗಳನ್ನು ಪೋಷಕರೇ ಮರ್ಯಾದಾ ಹತ್ಯೆ ಮಾಡಿದ್ದಾರೆ. ಸಂಬಂಧದ ವಿಚಾರಕ್ಕೆ ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ, ಉಸಿರುಗಟ್ಟಿಸಿ ಕೊಂದಿದ್ದಾರೆ. ಈ ಭೀಕರ ಘಟನೆ ಇರಾನ್‌ನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕೌಟುಂಬಿಕ ಹಿಂಸೆಯ ಬಗ್ಗೆ ತೀವ್ರ ಆತಂಕ ಹುಟ್ಟುಹಾಕಿದೆ. ಮರ್ಯಾದಾ ಹತ್ಯೆಗಳಿಗೆ ದಾರಿ ಮಾಡಿಕೊಡುವ ಕಾನೂನು ಲೋಪಗಳ ಬಗ್ಗೆಯೂ ಚರ್ಚೆಗಳು ನಡೆದಿವೆ.

ಗರ್ಭಿಣಿ ಮಗಳನ್ನೇ ಕೊಂದ ಪೋಷಕರು, ಇರಾನ್‌ನಲ್ಲಿ ಮರ್ಯಾದಾ ಹತ್ಯೆ
ಯುವತಿ Image Credit source: x Post Babak Taghvaee
ನಯನಾ ರಾಜೀವ್
|

Updated on: Nov 25, 2026 | 8:34 AM

Share

ಇರಾನ್, ನವೆಂಬರ್ 25: ಇರಾನ್‌ನಲ್ಲಿ 19 ವರ್ಷದ ಗರ್ಭಿಣಿ ಮಗಳನ್ನು ಆಕೆಯ ಪೋಷಕರೇ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವಕನೊಂದಿಗಿನ ಸಂಬಂಧದ ಬಗ್ಗೆ ತಿಳಿದ ನಂತರ ಕುಟುಂಬದವರು ಆಕೆಯ ಮೇಲೆ ಹಲ್ಲೆ ನಡೆಸಿ, ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ, ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ. ಈ ಘಟನೆಯನ್ನು ‘ಮರ್ಯಾದಾ ಹತ್ಯೆ’ ಎಂದು ಕರೆಯಲಾಗಿದೆ.

ಏನಿದು ಘಟನೆ?

ಹೆಲಿಯಾ ಫತ್ತಾಹಿ ಎಂಬ 19 ವರ್ಷದ ಯುವತಿ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಯುವಕನೊಂದಿಗಿನ ತನ್ನ ಸಂಬಂಧದ ಬಗ್ಗೆ ಆಕೆ ಕಳೆದ ವಾರ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಪೋಷಕರು ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ನವೆಂಬರ್ 21ರಂದು ಪೋಷಕರು ನ್ಯಾಯಾಲಯಕ್ಕೆ ತೆರಳಿ ಮಗಳ ವಿರುದ್ಧ ದೂರು ದಾಖಲಿಸಲು ಪ್ರಯತ್ನಿಸಿದ್ದರು. ಮನೆಗೆ ಹಿಂದಿರುಗಿದ ಬಳಿಕ ಆಕೆಗೆ ಸುಮಾರು 30 ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿದ್ದಾರೆ. ಇದರಿಂದಲೂ ಆಕೆ ಮೃತಪಟ್ಟಿಲ್ಲ ಎಂದು ತಿಳಿದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಹೆಂಗಾವ್ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.

ಹತ್ಯೆ ಆರೋಪದ ಮೇಲೆ ತಂದೆ ವೊರಿಯಾ ಫತ್ತಾಹಿ ಮತ್ತು ತಾಯಿ ಲೀಲಾ ವೀಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಿಚಾರಣೆ ವೇಳೆ ಇಬ್ಬರೂ ತಮ್ಮ ಮಗಳ ಸಾವಿಗೆ ತಾವೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪಟಾಕಿ ಸಿಡಿತದ ದುರಂತಕ್ಕೆ ಮತ್ತೊಂದು ಬಲಿ: ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಸಾವು

ಪೋಷಕರೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ

ಇರಾನ್‌ನ ಪೊಲೀಸ್ ಅಧಿಕಾರಿಗಳ ಪ್ರಕಾರ, ಮನೆಯೊಂದರಲ್ಲಿ ಅನುಮಾನಾಸ್ಪದ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಹತ್ಯೆ ನಡೆದಿರುವುದು ತಿಳಿದುಬಂದಿದೆ. ಬಳಿಕ ಯುವತಿಯ ಪೋಷಕರನ್ನು ಬಂಧಿಸಿ, ಪ್ರಕರಣವನ್ನು ನ್ಯಾಯಾಂಗ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಇರಾನ್‌ವೈರ್ ವರದಿ ಮಾಡಿದೆ. ಆದರೆ, ಹತ್ಯೆ ನಡೆದ ರೀತಿ ಮತ್ತು ಗರ್ಭಿಣಿಯಾಗಿದ್ದ ವಿಚಾರವನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.

ಒಂದು ವಾರದಲ್ಲಿ ಮೂವರು ಯುವತಿಯರ ಸಾವು

ಇರಾನ್‌ನಲ್ಲಿ ಇತ್ತೀಚೆಗೆ ಯುವತಿಯರ ಸಾವಿನ ಮೂರು ಘಟನೆಗಳು ವರದಿಯಾಗಿವೆ. ನವೆಂಬರ್ 18ರಂದು ಗಿಲಾನ್ ಪ್ರಾಂತ್ಯದಲ್ಲಿ 23 ವರ್ಷದ ಸದಾಫ್ ಹಗ್ಬಿನ್ ಎಂಬ ಯುವತಿಯನ್ನು ಆಕೆಯ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾಜಿ ಪ್ರಿಯಕರ ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದಕ್ಕೂ ಮೊದಲು, ಕೆರ್ಮಾನ್‌ಶಾ ಪ್ರಾಂತ್ಯದಲ್ಲಿ 16 ವರ್ಷದ ಸೊಗಂಡ್ ಸಯಾದಿ ಎಂಬ ವಿದ್ಯಾರ್ಥಿನಿಯ ಸಾವಿನ ಪ್ರಕರಣವೂ ಸುದ್ದಿಯಾಗಿತ್ತು. ಆಕೆಯ ಸಾವಿನ ಬಗ್ಗೆ ಕುಟುಂಬದವರ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಶಾಲೆಯ ಸಿಬ್ಬಂದಿಗೆ ಆಕೆ ತನ್ನ ತಂದೆಯೊಂದಿಗೆ ಮನೆಗೆ ಕಳುಹಿಸಬಾರದು ಎಂದು ಎಚ್ಚರಿಸಿದ್ದಳು ಎಂಬ ವರದಿಗಳಿವೆ.

ಇರಾನ್‌ನಲ್ಲಿ ಮಹಿಳೆಯರ ಸುರಕ್ಷತೆ ಮತ್ತೆ ಚರ್ಚೆಗೆ

ಈ ಘಟನೆ ಇರಾನ್‌ನಲ್ಲಿ ಮಹಿಳೆಯರು ಎದುರಿಸುತ್ತಿರುವ ಕೌಟುಂಬಿಕ ಹಿಂಸೆ ಮತ್ತು ಹಕ್ಕುಗಳ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಕುಟುಂಬದ ಗೌರವಕ್ಕೆ ಧಕ್ಕೆ ಬಂದಿದೆ ಎಂಬ ನೆಪದಲ್ಲಿ ಮಹಿಳೆಯರ ಮೇಲೆ ಹಿಂಸೆ ನಡೆಸುವುದು ಅಥವಾ ಅವರ ಜೀವ ತೆಗೆದುಕೊಳ್ಳುವುದನ್ನು ‘ಮರ್ಯಾದಾ ಹತ್ಯೆ’ ಎಂದು ಕರೆಯಲಾಗುತ್ತದೆ.

ಬ್ರಿಟನ್ ಸರ್ಕಾರದ 2025ರ ವರದಿಯ ಪ್ರಕಾರ, ಇರಾನ್‌ನ ಕಾನೂನಿನಲ್ಲಿ ‘ಮರ್ಯಾದಾ ಹತ್ಯೆ’ ಎಂಬುದನ್ನು ಪ್ರತ್ಯೇಕ ಅಪರಾಧವಾಗಿ ಗುರುತಿಸಲಾಗಿಲ್ಲ. ಕೆಲವು ಸಂದರ್ಭಗಳಲ್ಲಿ ತಂದೆ ಅಥವಾ ತಾತ ತಮ್ಮ ಮಕ್ಕಳನ್ನು ಕೊಂದರೆ ಅವರಿಗೆ ವಿಧಿಸಬಹುದಾದ ಶಿಕ್ಷೆಯಲ್ಲಿ ವಿನಾಯಿತಿ ಅಥವಾ ಕಡಿತಕ್ಕೆ ಅವಕಾಶವಿದೆ. ಇಂತಹ ಕಾನೂನು ಲೋಪಗಳು ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ.

ಹೆಂಗಾವ್ ಮಾನವ ಹಕ್ಕುಗಳ ಸಂಘಟನೆಯ ಇತ್ತೀಚಿನ ವರದಿ ಪ್ರಕಾರ, 2025ರ ನವೆಂಬರ್ 25ರಿಂದ 2026ರ ನವೆಂಬರ್ 24ರವರೆಗೆ ಇರಾನ್‌ನಲ್ಲಿ ಕನಿಷ್ಠ 159 ಮಹಿಳೆಯರು ಹತ್ಯೆಯಾಗಿದ್ದಾರೆ. ಈ ಪೈಕಿ 23 ಪ್ರಕರಣಗಳನ್ನು ‘ಮರ್ಯಾದಾ ಹತ್ಯೆ’ ಎಂದು ಸಂಘಟನೆ ಗುರುತಿಸಿದೆ. ಈ ಅಂಕಿಅಂಶಗಳು ಸಂಘಟನೆಯು ಸಂಗ್ರಹಿಸಿದ ಮತ್ತು ಪರಿಶೀಲಿಸಿದ ಪ್ರಕರಣಗಳನ್ನು ಆಧರಿಸಿವೆ.

ಅಂತಾರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More