ಪಟಾಕಿ ಸಿಡಿತದ ದುರಂತಕ್ಕೆ ಮತ್ತೊಂದು ಬಲಿ: ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಸಾವು
ಪಟಾಕಿ ಸಿಡಿತದಿಂದ ಗಂಭೀರ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಅಶ್ವಿನಿ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಟಾಕಿ ಸಿಡಿತದಿಂದ ಗಾಯಗೊಂಡು ಕಳೆದ ಒಂದು ವಾರದಿಂದ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸತತ ಹೋರಾಟದ ಬಳಿಕ ಸಾವನ್ನಪ್ಪಿದ್ದಾರೆ.

ಬೆಂಗಳೂರು, ನವೆಂಬರ್ 18: ನಗರದಲ್ಲಿ ಪಟಾಕಿ ಸಿಡಿತದ ದುರಂತಕ್ಕೆ ಮತ್ತೊಂದು ಬಲಿ ಆಗಿದೆ. ಪಟಾಕಿ ಸಿಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಅಶ್ವಿನಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಶೇ.40ರಷ್ಟು ದೇಹ ಸುಟ್ಟು, ಕಳೆದ ಎಂಟು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರ ಜೀವ ಕೊನೆಗೂ ಉಳಿಯಲಿಲ್ಲ.
ನಡೆದಿದ್ದೇನು?
ಕನಕಪುರದ ನಿವಾಸಿಯಾಗಿದ್ದ ಅಶ್ವಿನಿ, ನವೆಂಬರ್ 10 ಮನೆಯ ಮುಂದೆ ಪಟಾಕಿ ಬಾಕ್ಸ್ ಹಿಡಿದು ಕುಳಿತುಕೊಂಡಿದ್ದರು. ಇದೇ ವೇಳೆ ಮನೆಯ ಮುಂದೆ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸಿಡಿದ ಪಟಾಕಿ ಅಶ್ವಿನಿ ಬಳಿಯಿದ್ದ ಬಾಕ್ಸ್‌ಗೆ ಬಂದುಬಿದ್ದಿದೆ. ಪರಿಣಾಮ ಬಾಕ್ಸ್‌ನಲ್ಲಿದ್ದ ಪಟಾಕಿಗಳು ಒಟ್ಟಿಗೆ ಸ್ಪೋಟಗೊಂಡಿವೆ. ಈ ಭೀಕರ ಸ್ಫೋಟಕ್ಕೆ ಅಶ್ವಿನಿ ಮುಖ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಸುಟ್ಟಗಾಯಗಳಾಗಿದ್ದವು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ಗೆ ದಾಖಲಿಸಲಾಗಿತ್ತು.
ಎಂಟು ದಿನಗಳಿಂದ ನಿರಂತರ ಚಿಕಿತ್ಸೆ
ಆಸ್ಪತ್ರೆಗೆ ಕರೆತಂದಾಗಲೇ ಅಶ್ವಿನಿಯ ದೇಹದ ಶೇ.40ರಷ್ಟು ಭಾಗ ಸುಟ್ಟು ಹೋಗಿತ್ತು. ಏಳು ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆ ವೈದ್ಯರಿಗೆ ಮತ್ತಷ್ಟು ಸವಾಲಾಗಿತ್ತು. ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಆರಂಭಿಸಿದ್ದ ವೈದ್ಯರು ಕಳೆದ ಎಂಟು ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಿದ್ದರು. ಆದರೂ ಸುಟ್ಟಗಾಯಗಳ ತೀವ್ರತೆ ಮತ್ತು ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅಶ್ವಿನಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ತಾಯಿ ಮತ್ತು ಮಗುವಿನ ಬದುಕಿಗಾಗಿ ನಡೆದ ಹೋರಾಟ ದುರಂತ ಅಂತ್ಯ ಕಂಡಿದೆ.
ಇದನ್ನೂ ಓದಿ: ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡು ಕುಳಿತಿದ್ದ ಗರ್ಭಿಣಿ: ಬೆಂಕಿ ಕಿಡಿ ತಗುಲಿ ಪಟಾಕಿಗಳು ಸಿಡಿದು ಗಂಭೀರ ಗಾಯ
ಪಟಾಕಿ ಸಿಡಿಸುವಾಗ ವಹಿಸಬೇಕಾದ ನಿರ್ಲಕ್ಷ್ಯ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಅಶ್ವಿನಿ ಸಾವು ಸಾಕ್ಷಿಯಾಗಿದೆ. ಕ್ಷಣಿಕ ಸಂಭ್ರಮಕ್ಕಾಗಿ ನಡೆಯುವ ಅಜಾಗರೂಕತೆ ಒಂದು ಕುಟುಂಬದ ಬದುಕನ್ನೇ ಕತ್ತಲೆಯಾಗಿಸಿದೆ. ಏಳು ತಿಂಗಳ ಗರ್ಭಿಣಿಯ ಸಾವು ಇಡೀ ಕುಟುಂಬವನ್ನ ಶೋಕಸಾಗರದಲ್ಲಿ ಮುಳುಗಿಸಿದೆ. ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಎಷ್ಟು ಅನಿವಾರ್ಯ ಅನ್ನೋದನ್ನ ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




