4 ಜಿಲ್ಲೆಗಳ ರೈತರ ಗಮನಕ್ಕೆ: ತುಂಗಭದ್ರಾದಿಂದ ನ. 28ರವರೆಗೂ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ನೀರು ಕಾಲುವೆಗೆ ಹರಿಸುವ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ನವೆಂಬರ್ 28ರವರೆಗೂ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇದರಿಂದಿಗೆ ಆತಂಕಗೊಂಡಿದ್ದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರು, ನವೆಂಬರ್ 18: ಕರ್ನಾಟಕದಲ್ಲಿ ಜಲಸಂಘರ್ಷ ತಾಂಡವವಾಡುತ್ತಿದೆ. ಶಿವಮೊಗ್ಗದ ಭದ್ರಾ ಡ್ಯಾಂನಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಪ್ರತಿಭಟಿಸಿದ್ದರು. ಹೀಗಾಗಿ ಇಂದು ವಿಕಾಸಸೌಧದಲ್ಲಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ಮಹತ್ವದ ಸಭೆ ಮಾಡಲಾಗಿದ್ದು, ನವೆಂಬರ್ 28ರವರೆಗೆ ಕಾಲುವೆಗಳಿಗೆ 3,000 ಕ್ಯೂಸೆಕ್ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಸರ್ಕಾರದ ಆದ್ಯತೆ: ಶಿವರಾಜ ತಂಗಡಗಿ
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ‘ನೀರಿನ ಕೊರತೆಯಿಂದಾಗಿ ಈ ಬಾರಿ ಮೂರನೇ ಬಾರಿಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ರೈತರ ಬೆಳೆಗಳಿಗೆ ನೀರು ಒದಗಿಸುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಸರ್ಕಾರದ ಆದ್ಯತೆಯಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ ನವೆಂಬರ್ 20ರವರೆಗೆ ಪ್ರತಿ ಸೆಕೆಂಡ್‌ಗೆ 3,500 ಕ್ಯೂಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ. ಬಳಿಕ ನವೆಂಬರ್ 28ರವರೆಗೆ 3,000 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ತುಂಗಭದ್ರಾ ಮುಖ್ಯ ಕಾಲುವೆಗೆ ನವೆಂಬರ್ 28ರವರೆಗೆ 550 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಬಲದಂಡೆ ಮುಖ್ಯ ಕಾಲುವೆಗೆ 948 ಕ್ಯೂಸೆಕ್ ನೀರು
‘ತುಂಗಭದ್ರಾ ಬಲದಂಡೆ ಮುಖ್ಯ ಕಾಲುವೆಗೆ ಸದ್ಯ 948 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬುದನ್ನು ರೈತರ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆ ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುವುದು’ ಎಂದರು.
ಬಲದಂಡೆ ಮುಖ್ಯ ಕಾಲುವೆಗೆ 948 ಕ್ಯೂಸೆಕ್ ನೀರು
‘ತುಂಗಭದ್ರಾ ಬಲದಂಡೆ ಮುಖ್ಯ ಕಾಲುವೆಗೆ ಸದ್ಯ 948 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬುದನ್ನು ರೈತರ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆ ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುವುದು. ರಾಯಬಸವಣ್ಣ ಕಾಲುವೆಗೆ ಹಂಚಿಕೆ ಮಾಡಲಾಗಿರುವ 150 ಕ್ಯೂಸೆಕ್ ನೀರಿನ ಬಳಕೆಯಲ್ಲಿ ಬದಲಾವಣೆ ಮಾಡಲಾಗಿದೆ. 10 ದಿನಗಳ ಕಾಲ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ನಂತರ ಮತ್ತೆ 10 ದಿನಗಳ ಕಾಲ ನೀರು ಹರಿಸಲು ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು ವಿಜಯನಗರ ಕಾಲುವೆಗೆ ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ 60 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಐದು ಜಿಲ್ಲೆಗಳ ರೈತರಿಂದ ನವೆಂಬರ್ 30ರವರೆಗೆ ನೀರಿಗೆ ಒತ್ತಡ
‘ಬಳ್ಳಾರಿ, ವಿಜಯನಗರ ಸೇರಿದಂತೆ ತುಂಗಭದ್ರಾ ಕೊಳ್ಳದ ಐದು ಜಿಲ್ಲೆಗಳ ರೈತರು ನವೆಂಬರ್ 30ರವರೆಗೆ ನೀರು ಹರಿಸುವಂತೆ ಒತ್ತಡ ಹೇರುತ್ತಿದ್ದಾರೆ. ರೈತರ ಬೇಡಿಕೆಯೂ ನ್ಯಾಯಯುತವಾಗಿದೆ. ಆದರೆ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಶಾಸಕರು, ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.
ಪರ್ಯಾಯ ವ್ಯವಸ್ಥೆಗಳ ಬಗ್ಗೆಯೂ ಚಿಂತನೆ
‘ನೀರಿನ ಕೊರತೆ ಮುಂದುವರಿದರೆ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಜಲಾಶಯಗಳಲ್ಲಿ ನೀರಿನ ಲಭ್ಯತೆ ಹಾಗೂ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ತಂಡ ಜಲಾಶಯಗಳ ನೀರಿನ ಲಭ್ಯತೆ ಮತ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ’ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




