AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಶೇಖ್ ಹಸೀನಾ ಕೈಕೋಳ ತೊಟ್ಟು ಕೈದಿಯಾಗೇ ಬರಬೇಕು”; ತಾಯ್ನಾಡಿಗೆ ಮರಳುವ ಮಾಜಿ ಪ್ರಧಾನಿಗೆ ಬಾಂಗ್ಲಾದೇಶದ ಷರತ್ತು

ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಡಿಸೆಂಬರ್ 16ರಂದು ತಾಯ್ನಾಡಿಗೆ ಮರಳಲು ಯೋಜಿಸುತ್ತಿರುವ ಬೆನ್ನಲ್ಲೇ, ಭಾರತದಿಂದ ಹಸ್ತಾಂತರ ಪ್ರಕ್ರಿಯೆಯ ಮೂಲಕ ಮಾತ್ರ ಅವಾಮಿ ಲೀಗ್ ಮುಖ್ಯಸ್ಥೆಗೆ ದೇಶಕ್ಕೆ ಮರಳಲು ಅವಕಾಶ ನೀಡಲಾಗುವುದು ಎಂದು ಬಾಂಗ್ಲಾದೇಶ ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದೆ. ಪದಚ್ಯುತ ನಾಯಕಿಯನ್ನು ಬಾಂಗ್ಲಾದೇಶಕ್ಕೆ ಕರೆತರುವ ಕುರಿತು ಶೇಖ್ ಹಸೀನಾ ಅವರೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಮಾಹಿತಿ ಮತ್ತು ಪ್ರಸಾರ ಸಲಹೆಗಾರ ಜಾಹೆದ್ ಉರ್ ರೆಹಮಾನ್ ಕೂಡ ತಿಳಿಸಿದ್ದಾರೆ.

“ಶೇಖ್ ಹಸೀನಾ ಕೈಕೋಳ ತೊಟ್ಟು ಕೈದಿಯಾಗೇ ಬರಬೇಕು”; ತಾಯ್ನಾಡಿಗೆ ಮರಳುವ ಮಾಜಿ ಪ್ರಧಾನಿಗೆ ಬಾಂಗ್ಲಾದೇಶದ ಷರತ್ತು
ಶೇಖ್ ಹಸೀನಾImage Credit source: AP
ಸುಷ್ಮಾ ಚಕ್ರೆ
|

Updated on: Nov 24, 2026 | 6:50 PM

Share

ಢಾಕಾ, ನವೆಂಬರ್ 24: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮುಂಬರುವ ಡಿಸೆಂಬರ್ 16ರಂದು ಭಾರತದಿಂದ ತಾಯ್ನಾಡಿಗೆ ಮರಳುವುದಾಗಿ ಘೋಷಿಸಿರುವ ಬೆನ್ನಲ್ಲೇ, ಬಾಂಗ್ಲಾದೇಶ ಸರ್ಕಾರ ತೀವ್ರ ವಾಗ್ದಾಳಿ ನಡೆಸಿದೆ. “ಶೇಖ್ ಹಸೀನಾ ಸಾಮಾನ್ಯ ಪ್ರಯಾಣಿಕರಂತೆ ವಿಮಾನದಲ್ಲಿ ಬರಲು ಸಾಧ್ಯವಿಲ್ಲ; ಅವರು ಕೈಕೋಳ ತೊಟ್ಟು ಕೈದಿಯಾಗಿಯೇ ಬಾಂಗ್ಲಾದೇಶಕ್ಕೆ ಮರಳಬೇಕಾಗುತ್ತದೆ” ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಎಚ್ಚರಿಕೆ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ ವಿದೇಶಿ ರಾಜತಾಂತ್ರಿಕರಿಗೆ ವಿವರಣೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹುಮಾಯೂನ್ ಕಬೀರ್, “ಆಸೆ ಮತ್ತು ವಾಸ್ತವ ಎರಡೂ ಬೇರೆ ಬೇರೆ. ಶೇಖ್ ಹಸೀನಾ ಸಾಮಾನ್ಯ ವಾಣಿಜ್ಯ ವಿಮಾನದ ಪ್ರಯಾಣಿಕರಲ್ಲ. ಅವರು ಶಿಕ್ಷೆಗೊಳಗಾದ ಅಪರಾಧಿ ಹಾಗೂ ಪರಾರಿಯಾಗಿರುವ ಭಯೋತ್ಪಾದಕಿ. ಭಾರತದೊಂದಿಗಿನ ಹಸ್ತಾಂತರ ಒಪ್ಪಂದದ ಮೂಲಕ, ಕೈಕೋಳ ತೊಟ್ಟು ಕಟ್ಟುನಿಟ್ಟಿನ ಭದ್ರತೆಯಲ್ಲಿಯೇ ಅವರನ್ನು ದೇಶಕ್ಕೆ ಕರೆತರಲಾಗುವುದು” ಎಂದು ಹೇಳಿದ್ದಾರೆ.

ಸರ್ಕಾರಿ ವಿಮಾನದ ಬೇಡಿಕೆಗೆ ಆಕ್ಷೇಪ:

2024ರ ಆಗಸ್ಟ್ 5ರಂದು ಬಾಂಗ್ಲಾದೇಶದ ಸರ್ಕಾರಿ ವಿಮಾನದಲ್ಲೇ ಭಾರತಕ್ಕೆ ತೆರಳಿದ್ದರಿಂದ, ಇದೀಗ ಡಿಸೆಂಬರ್ 16ರಂದು (ಬಾಂಗ್ಲಾದೇಶದ ವಿಜಯ ದಿವಸ) ದೆಹಲಿಯಿಂದ ಢಾಕಾಕ್ಕೆ ಮರಳಲು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ‘ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್’ ವಿಮಾನದ ವ್ಯವಸ್ಥೆ ಮಾಡುವಂತೆ ಶೇಖ್ ಹಸೀನಾ ಅವರ ವಕ್ತಾರ ಸೈಯದ್ ಮೊಜಮ್ಮೆಲ್ ಅಲಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬೇಡಿಕೆಯನ್ನು “ಭ್ರಮೆಯ ಮನವಿ” ಎಂದು ತಳ್ಳಿಹಾಕಿರುವ ಸಚಿವ ಕಬೀರ್, ಬಾಂಗ್ಲಾದೇಶ ಸರ್ಕಾರ ಇಂತಹ ಯಾವುದೇ ಬೇಡಿಕೆಗೆ ಮನ್ನಣೆ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ (ಐಸಿಟಿ) ಮುಖ್ಯ ಪ್ರಾಸಿಕ್ಯೂಟರ್ ಕೂಡ ಶೇಖ್ ಹಸೀನಾ ಅವರ ವಿಮಾನದ ಬೇಡಿಕೆಯನ್ನು “ಹುಚ್ಚುತನ” ಎಂದು ಕರೆದಿದ್ದಾರೆ.

ಇದನ್ನೂ ಓದಿ: ಸೇನಾ ವಿಮಾನ, ಹೊಸ ವಿಚಾರಣೆ; ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶಕ್ಕೆ ಭಾರತ ವಿಧಿಸಿದ ಷರತ್ತುಗಳಿವು!

ಹಸ್ತಾಂತರಕ್ಕೆ ಭಾರತದ ಮೇಲೆ ಒತ್ತಡ:

2024ರ ಜುಲೈ ದಂಗೆಯ ವೇಳೆ ಪ್ರತಿಭಟನಾಕಾರರ ಮೇಲೆ ನಡೆದ ದಮನಕಾರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಡಿ, ಕಳೆದ ವರ್ಷ ಬಾಂಗ್ಲಾದೇಶದ ನ್ಯಾಯಮಂಡಳಿಯು ಶೇಖ್ ಹಸೀನಾ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ಈಗಾಗಲೇ ಭಾರತಕ್ಕೆ ಅಧಿಕೃತ ಮನವಿ ಸಲ್ಲಿಸಿದೆ.

ಇದೀಗ ತನ್ನ ತಾಯ್ನಾಡಿಗೆ ತೆರಳಲು ನಿರ್ಧರಿಸಿರುವ ಶೇಖ್ ಹಸೀನಾ ಅವರ ಮರಳುವಿಕೆಯ ಕುರಿತು ಅವರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ, ಬದಲಾಗಿ ಅವರ ಹಸ್ತಾಂತರದ ಕುರಿತು ಭಾರತ ಸರ್ಕಾರದೊಂದಿಗೆ ಮಾತ್ರ ಕಾನೂನುಬದ್ಧವಾಗಿ ಚರ್ಚಿಸಲಾಗುವುದು ಎಂದು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ವಿದೇಶದಲ್ಲಿರುವ ಬಾಂಗ್ಲಾದೇಶದ ಯಾವುದೇ ರಾಜತಾಂತ್ರಿಕ ಕಚೇರಿಗಳನ್ನು ಪ್ರವೇಶಿಸಿದರೂ ಶೇಖ್ ಹಸೀನಾ ಅವರನ್ನು ತಕ್ಷಣವೇ ಬಂಧಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.

ಇದನ್ನೂ ಓದಿ: ದೇಶಕ್ಕೆ ಮರಳಲು ಶೇಖ್ ಹಸೀನಾ ಸಿದ್ಧತೆ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ; ಹಸ್ತಾಂತರಕ್ಕೆ ಪಟ್ಟು ಹಿಡಿದ ಬಾಂಗ್ಲಾದೇಶ

ಈ ನಡುವೆ, ದೇಶಭ್ರಷ್ಟರಾಗಿರುವ ಹಲವಾರು ಅವಾಮಿ ಲೀಗ್ ನಾಯಕರು ಮತ್ತು ಆಪ್ತರು ಹಸೀನಾ ಅವರ ಮರಳುವಿಕೆಗೆ ಬೆಂಬಲವಾಗಿ ನಿಂತಿದ್ದು, ಭಾರತದಿಂದ ಗಡಿ ಪ್ರವೇಶ ಮಾರ್ಗಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ನವೆಂಬರ್ 22ರ ಡೈಲಿ ಸ್ಟಾರ್ ವರದಿಯ ಪ್ರಕಾರ, ಭಾರತದಲ್ಲಿ ನೆಲೆಸಿರುವ ಅವಾಮಿ ಲೀಗ್‌ನ ನಾಲ್ವರು ಹಿರಿಯ ನಾಯಕರು ಪಶ್ಚಿಮ ಬಂಗಾಳದ ಪೆಟ್ರಾಪೋಲ್ ಗಡಿ ದಾಟುವ ಪ್ರದೇಶಕ್ಕೆ ಭೇಟಿ ನೀಡಿದ್ದು, ಶೇಖ್ ಹಸೀನಾ ಅವರ ಮರಳುವಿಕೆಗೆ ಸಂಭಾವ್ಯ ಮಾರ್ಗಗಳನ್ನು ಅನ್ವೇಷಿಸಿದ್ದಾರೆ ಎನ್ನಲಾಗಿದೆ. ಪೆಟ್ರಾಪೋಲ್ ಗಡಿಯು ನವದೆಹಲಿ ಮತ್ತು ಢಾಕಾ ನಡುವಿನ ಬೆನಾಪೋಲ್-ಪೆಟ್ರಾಪೋಲ್ ಗಡಿ ದಾಟುವಿಕೆಯ ಭಾರತದ ಭಾಗವಾಗಿದೆ.

2 ವರ್ಷಗಳ ಗಡಿಪಾರು ಜೀವನದ ನಂತರ ತಾವು ಢಾಕಾಕ್ಕೆ ಮರಳಲು ಬಯಸುವುದಾಗಿ ಶೇಖ್ ಹಸೀನಾ ಹೇಳಿಕೆ ನೀಡಿದ ಬೆನ್ನಲ್ಲೇ ಬಾಂಗ್ಲಾದೇಶದ ಅಧಿಕಾರಿಗಳು ಮತ್ತು ನಾಯಕರಿಂದ ಈ ಪ್ರತಿಕ್ರಿಯೆಗಳು ಹೊರಬಿದ್ದಿವೆ. 2024ರಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಸರಣಿ ಪ್ರತಿಭಟನೆಗಳ ನಂತರ ಪದಚ್ಯುತಗೊಂಡಿದ್ದ ಹಸೀನಾ, ಅಂದಿನಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಶೇಖ್ ಹಸೀನಾ ಡಿಸೆಂಬರ್ 16ರಂದು (ಬಾಂಗ್ಲಾದೇಶದ ವಿಜಯ ದಿವಸ) ಮರಳಲು ಬಯಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ