AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶಕ್ಕೆ ಮರಳಿದರೆ ಶೇಖ್ ಹಸೀನಾಗೆ ಮರಣದಂಡನೆ? ಪ್ರಾಸಿಕ್ಯೂಟರ್ ಹೇಳಿಕೆಯಿಂದ ಹೊಸ ವಿವಾದ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ಮರಳಿದರೆ ಮರಣದಂಡನೆ ಜಾರಿಯಾಗುವ ಸಾಧ್ಯತೆ ಇದೆ. ಪ್ರಾಸಿಕ್ಯೂಟರ್ ಪ್ರಕಾರ, ಮೇಲ್ಮನವಿ ಅವಧಿ ಮುಗಿದಿದ್ದು, ಪಾಸ್‌ಪೋರ್ಟ್ ಸಹ ನಿರಾಕರಿಸಲಾಗಿದೆ. ಭಾರತದಿಂದ ಹಸ್ತಾಂತರಿಸಲು ಬಾಂಗ್ಲಾದೇಶ ಒತ್ತಾಯಿಸುತ್ತಿದೆ. ಹಸೀನಾ ವಾಪಸಾತಿ ಬಾಂಗ್ಲಾದೇಶ ರಾಜಕೀಯ ಹಾಗೂ ಭಾರತ-ಬಾಂಗ್ಲಾ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ.

ಬಾಂಗ್ಲಾದೇಶಕ್ಕೆ ಮರಳಿದರೆ ಶೇಖ್ ಹಸೀನಾಗೆ ಮರಣದಂಡನೆ? ಪ್ರಾಸಿಕ್ಯೂಟರ್ ಹೇಳಿಕೆಯಿಂದ ಹೊಸ ವಿವಾದ
ಶೇಖ್ ಹಸೀನಾ Image Credit source: Getty Images
ನಯನಾ ರಾಜೀವ್
|

Updated on: Nov 10, 2026 | 6:14 PM

Share

ಢಾಕಾ, ನವೆಂಬರ್ 10: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ  ಮತ್ತೆ ದೇಶಕ್ಕೆ ಮರಳಿದರೆ ಅವರಿಗೆ ವಿಧಿಸಿರುವ ಮರಣದಂಡನೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ಅಮೀನುಲ್ ಇಸ್ಲಾಂ ಹೇಳಿದ್ದಾರೆ. ಈಗಾಗಲೇ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಹಸೀನಾ, ತೀರ್ಪಿನ ವಿರುದ್ಧ ನಿಗದಿತ 30 ದಿನಗಳೊಳಗೆ ಮೇಲ್ಮನವಿ ಸಲ್ಲಿಸಿಲ್ಲ. ಹೀಗಾಗಿ, ಅವರು ಮರಳಿದರೆ ಶಿಕ್ಷೆಯ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ನವೆಂಬರ್ 10ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸೀನಾ ವಿರುದ್ಧದ ಪ್ರಕರಣದಲ್ಲಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ನಂತರ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತು. ಆದರೆ ಅವರು ಆ ಅವಧಿಯಲ್ಲಿ ದೇಶಕ್ಕೆ ಮರಳಲಿಲ್ಲ. ನಿಜವಾಗಿಯೂ ಬಾಂಗ್ಲಾದೇಶಕ್ಕೆ ಬರಲು ಬಯಸಿದ್ದರೆ ವಿಚಾರಣೆ ನಡೆಯುವಾಗಲೇ ಬಂದು ಪ್ರಕರಣ ಎದುರಿಸಬಹುದಿತ್ತು ಎಂದು ಹೇಳಿದ್ದಾರೆ.

2024ರ ಪ್ರತಿಭಟನೆ, ಅಧಿಕಾರ ಕಳೆದುಕೊಂಡ ಹಸೀನಾ

ಶೇಖ್ ಹಸೀನಾ ಅವರು 2009ರಿಂದ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದರು. ಆದರೆ 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆಗಳು ದೇಶಾದ್ಯಂತ ದೊಡ್ಡ ಮಟ್ಟದ ಜನಾಂದೋಲನವಾಗಿ ಮಾರ್ಪಟ್ಟವು. ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಕೈಗೊಂಡ ಕಠಿಣ ಕ್ರಮದಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಆಗಸ್ಟ್ 5, 2024ರಂದು ಹಸೀನಾ ಅಧಿಕಾರ ಕಳೆದುಕೊಂಡು ಭಾರತಕ್ಕೆ ಪಲಾಯನ ಮಾಡಿದರು. ಈ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರದಲ್ಲಿ ಭಾರಿ ಪ್ರಮಾಣದ ಸಾವು-ನೋವು ಸಂಭವಿಸಿತ್ತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಸುಮಾರು 1,400 ಜನರು ಮೃತಪಟ್ಟಿರಬಹುದು.

ಪ್ರತಿಭಟನಾಕಾರರ ಮೇಲಿನ ದಮನಕ್ಕೆ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಡಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 2025ರ ನವೆಂಬರ್‌ನಲ್ಲಿ ಹಸೀನಾ ಅವರಿಗೆ ಅವರ ಅನುಪಸ್ಥಿತಿಯಲ್ಲೇ ಮರಣದಂಡನೆ ವಿಧಿಸಿತ್ತು. ಆದರೆ ಹಸೀನಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಶೇಖ್ ಹಸೀನಾ ಪಲಾಯನದ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿ ನಿಗೂಢ ಸಾವು

ಪಾಸ್‌ಪೋರ್ಟ್‌ಗಾಗಿ ವಕೀಲರಿಂದ ಅರ್ಜಿ

ಬಾಂಗ್ಲಾದೇಶಕ್ಕೆ ಮರಳುವ ಉದ್ದೇಶದಿಂದ ಹಸೀನಾ ಹೊಸ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ (NID) ಪಡೆಯಲು ಪ್ರಯತ್ನಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಲಂಡನ್‌ನ ಮ್ಯಾಟ್ರಿಕ್ಸ್ ಚೇಂಬರ್ಸ್ ಎಂಬ ಕಾನೂನು ಸಂಸ್ಥೆಯ ವಕೀಲರು ನವೆಂಬರ್ 9ರಂದು ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ಗೆ ಇಮೇಲ್ ಕಳುಹಿಸಿದ್ದಾರೆ. ಹಸೀನಾ ಅವರ ಹಳೆಯ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಹೊಸ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಆದರೆ ಈ ಅರ್ಜಿಯನ್ನು ಹಸೀನಾ ಅವರೇ ನೇರವಾಗಿ ಸಲ್ಲಿಸಿಲ್ಲ. ಅವರ ಪರವಾಗಿ ವಕೀಲರು ಮನವಿ ಮಾಡಿದ್ದಾರೆ. ಈ ಮನವಿಗೆ ಹಸೀನಾ ಅವರ ಅಧಿಕೃತ ಅನುಮತಿ ಇದೆಯೇ ಎಂಬ ಬಗ್ಗೆಯೂ ಬಾಂಗ್ಲಾದೇಶದ ಅಧಿಕಾರಿಗಳು ಪ್ರಶ್ನೆ ಎತ್ತಿದ್ದಾರೆ

ಪಾಸ್‌ಪೋರ್ಟ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದ ಪ್ರಾಸಿಕ್ಯೂಟರ್

ಬಾಂಗ್ಲಾದೇಶದ 1973ರ ಪಾಸ್‌ಪೋರ್ಟ್ ಆದೇಶದ 6 ಮತ್ತು 7ನೇ ವಿಧಿಗಳನ್ನು ಉಲ್ಲೇಖಿಸಿರುವ ಅಮೀನುಲ್ ಇಸ್ಲಾಂ, ಶಿಕ್ಷೆಗೆ ಒಳಗಾದ ವ್ಯಕ್ತಿಗಳಿಗೆ ಪಾಸ್‌ಪೋರ್ಟ್ ನೀಡುವುದಕ್ಕೆ ಕಾನೂನು ನಿರ್ಬಂಧಗಳಿವೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದವರು ಹಾಗೂ ನೈತಿಕ ಅಧಃಪತನಕ್ಕೆ ಸಂಬಂಧಿಸಿದ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರ ಪಾಸ್‌ಪೋರ್ಟ್‌ಗೆ ನಿರ್ಬಂಧ ವಿಧಿಸಬಹುದು ಎಂದು ವಿವರಿಸಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳು ಕೂಡ ಈ ವ್ಯಾಪ್ತಿಗೆ ಬರುತ್ತವೆ ಎಂಬುದು ಅವರ ವಾದ.

ಹೀಗಾಗಿ, ಹಸೀನಾ ಅವರಿಗೆ ಹೊಸ ಪಾಸ್‌ಪೋರ್ಟ್ ಅಥವಾ ಪ್ರಯಾಣದ ದಾಖಲೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಿಂದ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಒತ್ತಾಯ

ಹಸೀನಾ ಭಾರತದಲ್ಲಿ ನೆಲೆಸಿರುವುದರಿಂದ ಅವರನ್ನು ಮರಳಿ ಕರೆತರಲು ಬಾಂಗ್ಲಾದೇಶ ಸರ್ಕಾರ ಭಾರತವನ್ನು ಸಂಪರ್ಕಿಸುತ್ತಿದೆ. ಉಭಯ ದೇಶಗಳ ನಡುವೆ ಹಸ್ತಾಂತರ ಒಪ್ಪಂದವಿದ್ದು, ಅದರ ಅಡಿಯಲ್ಲಿ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಢಾಕಾ ಒತ್ತಾಯಿಸಿದೆ.

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮೈಯುನ್ ಕೋಬಿರ್ ಕೂಡ ಹಸೀನಾ ಮರಳಲು ಬಯಸಿದರೆ ಭಾರತ ಸರ್ಕಾರಕ್ಕೆ ಹಸ್ತಾಂತರದ ಕುರಿತು ಅಧಿಕೃತ ಮನವಿ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಇತ್ತ, ಭಾರತ ಸರ್ಕಾರ ಹಸೀನಾ ಅವರನ್ನು ಹಸ್ತಾಂತರಿಸುವ ಬಗ್ಗೆ ಈವರೆಗಿನ ವಿನಂತಿಗಳನ್ನು ಪರಿಶೀಲಿಸುತ್ತಿರುವುದಾಗಿ ಈ ಹಿಂದೆ ತಿಳಿಸಿತ್ತು.

ಡಿಸೆಂಬರ್‌ನಲ್ಲಿ ಮರಳುವ ಘೋಷಣೆ ಮಾಡಿದ್ದ ಹಸೀನಾ

ಹಸೀನಾ ಅವರು ಈ ಹಿಂದೆ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ಉದ್ದೇಶವಿದೆ ಎಂದು ಹೇಳಿದ್ದರು. ತಮ್ಮನ್ನು ಬಂಧಿಸಬಹುದು ಅಥವಾ ಮರಣದಂಡನೆ ವಿಧಿಸಬಹುದು ಎಂಬ ಅಪಾಯ ಗೊತ್ತಿದ್ದರೂ ದೇಶಕ್ಕೆ ಮರಳುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.

ತಾವು ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯದ ಮುಂದೆ ಶರಣಾಗಲು ಬಯಸಿರುವುದಾಗಿ ಕೂಡ ತಿಳಿಸಿದ್ದಾರೆ. ಆದರೆ ಅವರ ವಿರುದ್ಧದ ತೀರ್ಪು, ಪಾಸ್‌ಪೋರ್ಟ್ ಸಮಸ್ಯೆ ಮತ್ತು ಭಾರತ-ಬಾಂಗ್ಲಾದೇಶ ನಡುವಿನ ಹಸ್ತಾಂತರ ಪ್ರಕ್ರಿಯೆ ಅವರ ವಾಪಸಾತಿಯನ್ನು ಸಂಕೀರ್ಣಗೊಳಿಸಿವೆ. ಹಸೀನಾ ಅವರ ವಾಪಸಾತಿ ವಿಚಾರ ಈಗ ಕೇವಲ ಕಾನೂನು ಸಮಸ್ಯೆಯಾಗಿ ಉಳಿದಿಲ್ಲ. ಇದು ಭಾರತ-ಬಾಂಗ್ಲಾದೇಶ ಸಂಬಂಧ ಹಾಗೂ ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲೂ ಮಹತ್ವದ ಬೆಳವಣಿಗೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ