ಶೇಖ್ ಹಸೀನಾ ಪಲಾಯನದ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿ ನಿಗೂಢ ಸಾವು
ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿ ಕೆಎಂ ತಹ್ಸಿಫ್ ಸೌರಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಶೇಖ್ ಹಸೀನಾ ಪಲಾಯನದ ವಿಡಿಯೋವನ್ನು ಹಂಚಿಕೊಂಡಿದ್ದ ತಹ್ಸಿಫ್, ಅಕ್ಟೋಬರ್ 28ರಂದು ಢಾಕಾದ ತುರಾಗ್ ನದಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬವು ಕಿರುಕುಳ ಮತ್ತು ಪಿತೂರಿಯನ್ನು ಆರೋಪಿಸಿದೆ. ಸಾವಿನ ನಿಜವಾದ ಕಾರಣವನ್ನು ಪೊಲೀಸರ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಬೇಕಿದೆ.

ಢಾಕಾ, ಅಕ್ಟೋಬರ್ 30: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಾಯುಪಡೆ ಮಾಜಿ ಅಧಿಕಾರಿ ಕೆಎಂ ತಹ್ಸಿಪ್ ಸೌರಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಅಧಿಕಾರಿ ಮೃತದೇಹ ಅಕ್ಟೋಬರ್ 28ರಂದು ಢಾಕಾದ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಅವರ ಸಾವಿನ ಹಿಂದೆ ಸಂಚು ಇರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದು, ಪ್ರಕರಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ತಹ್ಸಿಫ್ ಬಾಂಗ್ಲಾದೇಶದ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದ್ದರು. 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ದೃಶ್ಯದ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು ಎನ್ನಲಾಗಿದೆ. ಈ ವಿಡಿಯೋ ಹಂಚಿಕೊಂಡಿದ್ದರಿಂದಲೇ ಅವರಿಗೆ ಕಿರುಕುಳ ನೀಡಲಾಗಿತ್ತು ಎಂಬುದು ಕುಟುಂಬದ ಆರೋಪ.
ಸಂಜೆ ಸ್ನೇಹಿತನ ಜೊತೆ ಹೊರಟವರು ಮನೆಗೆ ಬರಲೇ ಇಲ್ಲ
ಕುಟುಂಬದ ಮಾಹಿತಿ ಪ್ರಕಾರ, ಅಕ್ಟೋಬರ್ 27ರಂದು ತಹ್ಸಿಫ್ ತಮ್ಮ ತಾಯಿಯೊಂದಿಗೆ ಶಾಪಿಂಗ್ ಮಾಡಿದ್ದರು. ಸಂಜೆ ಆಪ್ತ ಸ್ನೇಹಿತನಿಂದ ಕರೆ ಬಂದ ಹಿನ್ನೆಲೆಯಲ್ಲಿ ಆತನೊಂದಿಗೆ ಹೊರಗೆ ಹೋಗಿದ್ದರು. ರಾತ್ರಿ ಸುಮಾರು 1.35ರ ವೇಳೆಗೆ ತಾಯಿಗೆ ಸಂದೇಶ ಕಳುಹಿಸಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ ಮನೆಗೆ ಹಿಂದಿರುಗಿರಲಿಲ್ಲ.
ಮರುದಿನ ತುರಾಗ್ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆರಂಭದಲ್ಲಿ ಗುರುತು ಪತ್ತೆಯಾಗದಿದ್ದರೂ, ಅವರ ಜೇಬಿನಲ್ಲಿದ್ದ ಐಫೋನ್ ಮೂಲಕ ಗುರುತು ಖಚಿತಪಡಿಸಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಢಾಕಾದ ಶಹೀದ್ ಸುಹ್ರಾವರ್ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ತಹ್ಸಿಫ್ ಜೊತೆ ತೆರಳಿದ್ದ ಸ್ನೇಹಿತ, ಇಬ್ಬರೂ ಒಟ್ಟಿಗೆ ಊಟ ಮಾಡಿದ ಬಳಿಕ ಅವರನ್ನು ತನ್ನ ಮನೆಯ ಸಮೀಪ ಬಿಟ್ಟು ಹೋಗಿದ್ದಾಗಿ ಕುಟುಂಬಕ್ಕೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ:
ಬಾಂಗ್ಲಾ, ಫ್ರಾನ್ಸ್ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆಯ ಹುನ್ನಾರ: ಮೋಹನ್ ಭಾಗವತ್ ಕಳವಳ
ಹಸೀನಾ ವಿಡಿಯೋ ಹಂಚಿದ್ದಕ್ಕೆ ಕಿರುಕುಳ ಆರೋಪ
ತಹ್ಸಿಫ್ ಅವರನ್ನು ಕಳೆದ ವರ್ಷ ವಾಯುಪಡೆಯ ಸೇವೆಯಿಂದ ವಜಾಗೊಳಿಸಲಾಗಿತ್ತು. ಅವರು ಭಾರತದ ಗುಪ್ತಚರ ಸಂಸ್ಥೆಗಳಾದ ರಾ ಮತ್ತು ಆರ್‌ಎಡಬ್ಲ್ಯೂ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ನಂತರ ಅವರ ಪಾಸ್‌ಪೋರ್ಟ್ ಅನ್ನು ಎರಡು ವರ್ಷಗಳ ಕಾಲ ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ. ಈ ಘಟನೆಗಳ ಬಳಿಕವೂ ಅವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬ ಆರೋಪಿಸಿದೆ.
ತಹ್ಸಿಫ್ ಅವರ ಸೋದರಸಂಬಂಧಿ ಮೋಶ್ಫೆಕಾ ಜಹಾನ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಹಸೀನಾ ದೇಶ ತೊರೆದ ವಿಡಿಯೋವನ್ನು ಹಂಚಿಕೊಂಡಿದ್ದೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.
ಸಾವಿಗೂ ಮುನ್ನ ಪಾಡ್‌ಕಾಸ್ಟ್‌ನಲ್ಲಿ ಏನು ಹೇಳಿದ್ದರು?
ಜುಲೈ 21ರಂದು ‘ಸ್ಪೀಕ್ ವಿತ್ ರಶೀದ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ತಹ್ಸಿಫ್ ಕಾಣಿಸಿಕೊಂಡಿದ್ದರು. ಬಾಂಗ್ಲಾದೇಶ ವಾಯುಪಡೆಯ ಕುರಿತ ಪಾಡ್‌ಕಾಸ್ಟ್‌ನಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಹಸೀನಾ ದೇಶ ತೊರೆದ ವಿಡಿಯೋ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ಸಂದರ್ಭದಲ್ಲಿ ಅವರು ದೇಶಕ್ಕಾಗಿ ತ್ಯಾಗ ಮಾಡುವುದಕ್ಕಿಂತ ದೊಡ್ಡ ಉದ್ದೇಶ ಮತ್ತೊಂದಿಲ್ಲ ಎಂಬರ್ಥದ ಮಾತುಗಳನ್ನು ಹೇಳಿದ್ದರು. ಈ ಹೇಳಿಕೆ ಇದೀಗ ಅವರ ಸಾವಿನ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಗೆ ಬಂದಿದೆ.
ತನಿಖೆಯಿಂದಷ್ಟೇ ಸಾವಿನ ರಹಸ್ಯ ಬಯಲು
ತಹ್ಸಿಫ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದರೂ, ಅವರು ಹೇಗೆ ಮೃತಪಟ್ಟರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಕೊಲೆಯೇ ಅಥವಾ ಬೇರೆ ಕಾರಣದಿಂದ ಸಂಭವಿಸಿದ ಸಾವೇ ಎಂಬುದನ್ನು ಪೊಲೀಸರು ದೃಢಪಡಿಸಬೇಕಿದೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸ್ ತನಿಖೆ ಈ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಹಸೀನಾ ಅವರ ವಿಡಿಯೋ ಹಂಚಿದ್ದ ಕಾರಣಕ್ಕಾಗಿಯೇ ತಹ್ಸಿಫ್ ಅವರನ್ನು ಕೊಲ್ಲಲಾಗಿದೆ ಎಂಬುದು ಕುಟುಂಬದ ಆರೋಪ ಮಾತ್ರ. ಸಾವಿನ ನಿಜವಾದ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




