ಶಂಕಿತ ಬಾಂಗ್ಲಾ ಶೆಡ್ಗಳ ಮೇಲೆ ದಾಳಿ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಿಕಾರಿಪಾಳ್ಯದಲ್ಲಿ ಬಾಂಗ್ಲಾ ವಲಸಿಗರಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಕಾರ್ಯಕರ್ತರು ಶೆಡ್‌ಗಳಿಗೆ ಭೇಟಿ ವೇಳೆ ಘರ್ಷಣೆ ನಡೆದಿದೆ. ನೂರಕ್ಕೂ ಹೆಚ್ಚು ಜನರಿಂದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸದ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಮುಖ್ಯಾಂಶಗಳು
- ಹುಳಿಮಂಗಲ ಬಳಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
- ಬಾಂಗ್ಲಾ ವಲಸಿಗರು ನೆಲೆಸಿರುವ ಶಂಕೆ ಹಿನ್ನೆಲೆ ದಾಳಿ
- ನೂರಕ್ಕೂ ಹೆಚ್ಚು ಜನರಿಂದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
ಆನೇಕಲ್, ಅಕ್ಟೋಬರ್ 29: ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಸುಮಾರು ನೂರಕ್ಕೂ ಹೆಚ್ಚು ಅಪರಿಚಿತ ಜನರಿಂದ ಹಲ್ಲೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೆಬ್ಬಗೊಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪಾಳ್ಯದಲ್ಲಿ ನಡೆದಿದೆ. ಹಿಂದೂ ಕಾರ್ಯಕರ್ತರಾದ ಡಾ.ನಾಗೇಂದ್ರಪ್ಪ, ಸಂತೋಷ್ ಕರ್ತಾಲ್, ಅಮಿತ್, ಪವನ್ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ನಾಗೇಂದ್ರಪ್ಪ ದೂರಿನ ಆಧಾರದ ಮೇಲೆ ಇದೀಗ ಎಫ್ಐಆರ್ ದಾಖಲಾಗಿದೆ.
ನಡೆದಿದ್ದೇನು?
ಶಿಕಾರಿಪಾಳ್ಯದಲ್ಲಿನ ಶೆಡ್ಗಳಲ್ಲಿ ಬಾಂಗ್ಲಾ ವಲಸಿಗರು ನೆಲೆಸಿರುವ ಶಂಕೆ ಹಿನ್ನೆಲೆ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಹೋಗಿದ್ದಾರೆ. ಈ ವೇಳೆ ಇವರ ಹಾಗೂ ಶೆಡ್ನಲ್ಲಿದ್ದವರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಸುಮಾರು ನೂರಕ್ಕೂ ಹೆಚ್ಚು ಜನರಿಂದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.
ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲು
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ಕೂಡ ದಾಖಲಾಗಿದೆ. ಶೆಡ್‌ಗಳಿಗೆ ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ ಮಾಡಿದ್ದರೆಂದು ಆರೋಪಿಸಿ ಪಶ್ಚಿಮ ಬಂಗಾಲದ ಹಜಿಫುಲ್ ಶೇಖ್ ಎಂಬುವವರಿಂದ ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ನಾಗೇಂದ್ರಪ್ಪ, ಸಂತೋಷ್ ಕಾರ್ತಾಳ್, ಅಮಿತ್, ಪವನ್, ರಂಜಿತ್, ಸನ್ನಿಧಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದ್ದು, ಹೆಬ್ಬಗೋಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ದೂರಿನಲ್ಲಿ ಏನಿದೆ?
ಹುಲಿಮಂಗಲದ ಎಲ್ಎಫ್ಎಂಬಿ ಹಾಸ್ಟೆಲ್ ಸಮೀಪದಲ್ಲಿ ಇಮ್ತಿಯಾಜ್ ಎಂಬುವವರಿಗೆ ಸೇರಿದ ಶೆಡ್ನಲ್ಲಿ ವಾಸಿಸುತ್ತಿದ್ದೇವೆ. ಪ್ಲಾಸ್ಟಿಕ್ ರಿಸೈಕ್ಲಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಎರಡು ಕಾರಿನಲ್ಲಿ ಎಂಟು ಜನರ ತಂಡ ಆಗಮಿಸಿದೆ. ನಾವು ಪೊಲೀಸರು ಎಂದು ಹೇಳಿ, ನೀವೆಲ್ಲಾ ಬಾಂಗ್ಲಾ ದೇಶದವರು, ನಿಮ್ಮ ದಾಖಲೆ ತೋರಿಸಿ ಎಂದಿದ್ದಾರೆ. ಆದರೆ ದಾಖಲೆ ತೋರಿಸಲು ನಿರಾಕರಿಸಲಾಗಿದೆ. ಈ ವೇಳೆ ಹಿಂದೆ ಭಾಷೆಯಲ್ಲಿ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಕೋಲಿನಿಂದ, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು, ಬಾಂಗ್ಲಾದೇಶದವರು ಎಂದು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.
ಕರ್ನಾಟಕ ಅಕ್ರಮ ವಲಸಿಗರನ್ನು ಸಾಕುವ ಧರ್ಮ ಛತ್ರವಲ್ಲ: ಸಿಟಿ ರವಿ ಕಿಡಿ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಪೋಸ್ಟ್ ಮಾಡಿವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸರ್ಕಾರದ ಕೃಪಾಕಟಾಕ್ಷದಿಂದ ಕರ್ನಾಟಕ ಅಕ್ರಮ ವಲಸಿಗರ ತಾಣವಾಗಿದೆ. ಹುಳಿಮಂಗಲ ಬಳಿ ಅಕ್ರಮ ವಲಸಿಗರು ವಾಸವಿದ್ದರು. ಅವರನ್ನ ಪ್ರಶ್ನಿಸಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಈ ದುಸ್ಸಾಹಸ ಅತ್ಯಂತ ಖಂಡನೀಯ’ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
‘ನಮ್ಮದೇ ನೆಲದಲ್ಲಿ ನಿಂತು ನಮ್ಮವರ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ಇವರಿಗೆ ರಕ್ಷಣೆ ನೀಡುತ್ತಿರುವ ಆ ಕಾಣದ ಕೈಗಳು ಯಾವುವು? ಪ್ರಿಯಾಂಕ್ ಖರ್ಗೆ ಅವರೇ ಕರ್ನಾಟಕ ಅಕ್ರಮ ವಲಸಿಗರನ್ನು ಸಾಕುವ ಧರ್ಮ ಛತ್ರವಲ್ಲ. ವೋಟ್ ಬ್ಯಾಂಕ್‌ಗಾಗಿ ದೇಶದ ಸುರಕ್ಷತೆಯನ್ನು ಬಲಿ ಕೊಡಬೇಡಿ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಸಿಟಿ ರವಿ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:26 pm, Thu, 29 October 26




