ಕೊಡಗಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ನಾಲ್ವರ ಬಂಧನ!
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಾಳೆಲೆಯಲ್ಲಿ ನಾಲ್ವರು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ. ಸ್ಥಳೀಯ ತೋಟದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಇವರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ 'ಆಪರೇಷನ್ ಮುಕ್ತ' ಮೂಲಕ 160ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲಾಗಿತ್ತು. ಇದೀಗ ಮಲೆನಾಡು ಭಾಗದಲ್ಲೂ ಅಕ್ರಮ ವಲಸಿಗರ ಜಾಲ ಪತ್ತೆಯಾಗುತ್ತಿದ್ದು, ತೀವ್ರ ತನಿಖೆಗೆ ಒತ್ತಾಯಿಸಲಾಗಿದೆ.

ಮುಖ್ಯಾಂಶಗಳು
- ಕೊಡಗಿನಲ್ಲಿ ನಾಲ್ವರು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಕಾರ್ಯಕರ್ತರು.
- ಬ್ರೋಕರ್ ನೆರವಿನಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತೋಟದ ಮನೆಯಲ್ಲಿದ್ದ ಬಾಂಗ್ಲಾದೇಶಿಗಳು.
- ಜಿಲ್ಲೆಯಲ್ಲಿ ಅಕ್ರಮ ವಲಸಿಗರ ಪತ್ತೆಗೆ ಪೋಲಿಸ್ ಇಲಾಖೆ ಎಚ್ಚೆತ್ತುಕೊಳ್ಳಲು ಸಾರ್ವಜನಿಕರ ಆಗ್ರಹ.
ಮಡಿಕೇರಿ, ಅಕ್ಟೋಬರ್ 14: ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಹಾವಳಿ ತೀವ್ರಗೊಳ್ಳುತ್ತಿದ್ದು, ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಭಾಗಗಳಲ್ಲಿ ಇತ್ತೀಚೆಗಷ್ಟೇ ನಡೆಸಲಾದ ಬೃಹತ್ ಕಾರ್ಯಾಚರಣೆಯಲ್ಲಿ (ಆಪರೇಷನ್ ಮುಕ್ತ) 160ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲಾಗಿತ್ತು. ಈ ರೀತಿಯ ತೀವ್ರ ನಿಗಾದ ನಡುವೆಯೂ, ಅಕ್ರಮ ವಲಸಿಗರು ಇದೀಗ ಮಲೆನಾಡು ಭಾಗಗಳತ್ತ ಮುಖ ಮಾಡುತ್ತಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಾಳೆಲೆಯಲ್ಲಿ ನಾಲ್ವರು ಬಾಂಗ್ಲಾ ಪ್ರಜೆಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.
ತೋಟದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಬಾಂಗ್ಲಾದೇಶಿ ಪ್ರಜೆಗಳು
ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮದ ಕೊಟ್ಟಿಗೇರಿ ಎಂಬಲ್ಲಿರುವ ತೋಟದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಹಿಂದೂ ಜಾಗರಣ ವೇದಿಕೆ ಹಾಗೂ ಆಟೋ ಚಾಲಕರ ಸಂಘದ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ, ತಾವು ಬಾಂಗ್ಲಾದೇಶದ ನಿಯಾಸ್ಪುರ್ ಗ್ರಾಮದವರಾಗಿದ್ದು, ಬ್ರೋಕರ್ ಒಬ್ಬನ ನೆರವಿನಿಂದ ಗಡಿ ದಾಟಿ ಭಾರತ ಪ್ರವೇಶಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಳಿಕ ಕಾರ್ಯಕರ್ತರು ಈ ನಾಲ್ವರನ್ನು ಪೊನ್ನಂಪೇಟೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಸಾವಿರಾರು ಅಕ್ರಮ ಬಾಂಗ್ಲಾ ವಲಸಿಗರು ತೋಟದ ಕಾರ್ಮಿಕರಾಗಿ ಹಾಗೂ ಇತರೆ ಕೆಲಸಗಳಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಜಿಲ್ಲೆಯಾದ್ಯಂತ ಸಮಗ್ರ ತನಿಖೆ ನಡೆಸಿ ಎಲ್ಲರನ್ನೂ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
ಬೆಂಗಳೂರಿನಲ್ಲಿ 160ಕ್ಕೂ ಹೆಚ್ಚು ವಲಸಿಗರು ಪತ್ತೆ
ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರ ಪತ್ತೆ ಹಾಗೂ ಗಡಿಪಾರು ಕಾರ್ಯಾಚರಣೆ ತೀವ್ರಗೊಂಡಿದೆ. ಇತ್ತೀಚೆಗಷ್ಟೇ ಬೆಂಗಳೂರು ನಗರ ಪೊಲೀಸರು ಹಾಗೂ ಅಂತರರಾಷ್ಟ್ರೀಯ ನೋಂದಣಿ ಕಚೇರಿ (FRRO) ಜಂಟಿಯಾಗಿ ‘ಆಪರೇಷನ್ ಮುಕ್ತ’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಬೆಂಗಳೂರಿನ ಬೆಳ್ಳಂದೂರು, ವರ್ತೂರು, ಮಾರತಹಳ್ಳಿ ಸೇರಿದಂತೆ ವಿವಿಧೆಡೆ ನೆಲೆಸಿದ್ದ 160ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿಶೇಷ ವಿಮಾನ ಹಾಗೂ ರೈಲಿನ ಮೂಲಕ ಸ್ವದೇಶಕ್ಕೆ ಗಡಿಪಾರು ಮಾಡಲಾಗಿತ್ತು. ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ನೆಲೆಸುತ್ತಿರುವವರ ವಿರುದ್ಧ ಗೃಹ ಇಲಾಖೆ ಹಾಗೂ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




