ತಿಪ್ಪೆಯಲ್ಲಿ ಕಸ ಹಾಕುವ ವಿಚಾರಕ್ಕೆ ಜಗಳ: ಮೊಬೈಲ್‌ನಲ್ಲಿ ಸೆರೆಯಾಯಿತು ಭೀಕರ ದೃಶ್ಯ
ವಿಜಯಪುರದ ಮುದ್ದೇಬಿಹಾಳದಲ್ಲಿ ಕಸ ವಿವಾದ ಮತ್ತು ಮುಳ್ಳುಕಂಟಿ ಕಡಿಯುವ ಕ್ಷುಲ್ಲಕ ವಿಚಾರಕ್ಕೆ ಎರಡು ಕುಟುಂಬಗಳ ನಡುವಿನ ಜಗಳ ಅಪ್ರಾಪ್ತ ಬಾಲಕನ ಹಲ್ಲೆಯಲ್ಲಿ ಕೊನೆಗೊಂಡಿದೆ. ನ.17ರಂದು ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಗಾಯಗೊಂಡ ಬಾಲಕ ಆಸ್ಪತ್ರೆ ಸೇರಿದ್ದು, ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೋಷಕರು ಆಗ್ರಹಿಸಿದ್ದಾರೆ.

ವಿಜಯಪುರ, ನ.25: ತಿಪ್ಪೆಯಲ್ಲಿ ಕಸ ಚೆಲ್ಲುವ ಹಾಗೂ ಮುಳ್ಳುಕಂಟಿ ಕಡಿಯುವ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ಅಪ್ರಾಪ್ತ ಬಾಲಕನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುದೂರ ತಾಂಡಾದಲ್ಲಿ ನಡೆದಿದೆ. ಕಳೆದ ನವೆಂಬರ್ 17ರಂದು ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕನ ಮೇಲೆ ನಡೆದ ಹಲ್ಲೆಯ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿ ಇದೀಗ ವೈರಲ್ ಆಗಿದೆ. ಮುದೂರ ತಾಂಡಾದ ಸರ್ಕಾರಿ ಹಳ್ಳದ ಜಾಗದಲ್ಲಿ ಸೋಮಸಿಂಗ್ ಲಮಾಣಿ ಹಾಗೂ ಬಾಬು ರಾಠೋಡ ಕುಟುಂಬದವರು ತಿಪ್ಪೆ ಹಾಕಿಕೊಂಡಿದ್ದರು. ಈ ತಿಪ್ಪೆಯಲ್ಲಿ ಕಸ ಚೆಲ್ಲುವ ವಿಚಾರವಾಗಿ ಕಳೆದ ಹಲವು ದಿನಗಳಿಂದ ಲಮಾಣಿ ಮತ್ತು ರಾಠೋಡ ಕುಟುಂಬಗಳ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದರ ನಡುವೆ ತಿಪ್ಪೆಯ ಪಕ್ಕದಲ್ಲಿ ಬೆಳೆದಿದ್ದ ಮುಳ್ಳುಕಂಟಿಯನ್ನು ಬಾಬು ರಾಠೋಡ ಕಡಿದಿದ್ದಾರೆ. ಈ ವಿಚಾರವನ್ನು ಪ್ರಶ್ನಿಸಿದ ಸೋಮಸಿಂಗ್ ಲಮಾಣಿ ಗಲಾಟೆ ಆರಂಭಿಸಿದ್ದು, ಮಾತಿಗೆ ಮಾತು ಬೆಳೆದು ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಶರ್ಟ್ ಕಳಚಿಕೊಂಡು ಬಂದ ಸೋಮಸಿಂಗ್ ಲಮಾಣಿ ಸೇರಿದಂತೆ ಕುಟುಂಬದ ಕೆಲವರು ಬಾಬು ರಾಠೋಡ ಅವರ ಅಪ್ರಾಪ್ತ ಪುತ್ರನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ರಾಠೋಡ ಕುಟುಂಬ ಗಂಭೀರ ಆರೋಪ ಮಾಡಿದೆ. ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ:
ಗಂಭೀರವಾಗಿ ಗಾಯಗೊಂಡ ಬಾಬು ರಾಠೋಡ ಅವರ ಅಪ್ರಾಪ್ತ ಪುತ್ರನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಬಾಲಕನ ಸಂಬಂಧಿ ಮುತ್ತಣ್ಣ ರಾಠೋಡ್ ಹಾಗೂ ಬಾಲಕನ ತಂದೆ ಬಾಬು ರಾಠೋಡ್ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸೋಮಸಿಂಗ್ ಲಮಾಣಿ, ಕುಮಾರ ಲಮಾಣಿ, ಸುರೇಶ ಚವಾಣ, ಚುಳಚಾಬಾಯಿ ಲಮಾಣಿ ಸೇರಿದಂತೆ ಒಟ್ಟು ಏಳು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಹಲ್ಲೆ ಮಾಡಿದ ಎಲ್ಲರನ್ನೂ ಕೂಡಲೇ ಬಂಧಿಸಬೇಕು ಎಂದು ಬಾಲಕನ ಪೋಷಕರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Wed, 25 November 26
