AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ; ಇದು 75 ವರ್ಷದ ಅಜ್ಜ, 63 ವರ್ಷದ ಅಜ್ಜಿ ಮದುವೆ ಕಹಾನಿ

ಇಳಿವಯಸ್ಸಿನಲ್ಲಿ ತಮ್ಮವರಿಂದಲೇ ದೂರವಾಗಿ ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ವೃದ್ಧ ಮತ್ತು 63 ವರ್ಷದ ವೃದ್ಧೆಯ ಬದುಕಿನಲ್ಲಿ ಈಗ ಹೊಸ ಭರವಸೆ ಮತ್ತು ಪ್ರೀತಿ ಚಿಗುರೊಡೆದಿದೆ. ಹಿಮಾಚಲ ಪ್ರದೇಶದ ವೃದ್ಧಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದ ಈ ಇಬ್ಬರು ವೃದ್ಧರು ಪರಸ್ಪರರ ನೋವಿಗೆ ಹೆಗಲಾಗಿ, ಬದುಕಿನ ಸಂಧ್ಯಾಕಾಲದಲ್ಲಿ ಒಂದಾಗುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಇಳಿವಯಸ್ಸಿನಲ್ಲಿ ಕುಟುಂಬದಿಂದ ದೂರವಾಗಿ ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಕನ್ಹಯ್ಯ ಲಾಲ್ ಮತ್ತು 63 ವರ್ಷದ ಸಬೀನಾ ಅವರ ಬದುಕಿನ ಹೊಸ ಪಯಣದ ಹಿಂದೆ ಮನಕಲಕುವ ಕಥೆಯಿದೆ. ಕಷ್ಟದ ದಿನಗಳನ್ನು ಮೆಟ್ಟಿನಿಂತು ವೃದ್ಧಾಶ್ರಮದಲ್ಲಿ ಒಂದಾದ ಈ ಜೋಡಿಯ ವಿವಾಹಕ್ಕೆ ಬಿಲಾಸ್‌ಪುರ ಜಿಲ್ಲಾಧಿಕಾರಿ ಕಿರಣ್ ಭಡಾನಾ ಖುದ್ದು ಹಾಜರಾಗಿ ಶುಭ ಹಾರೈಸಿದ್ದಾರೆ.

ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ; ಇದು 75 ವರ್ಷದ ಅಜ್ಜ, 63 ವರ್ಷದ ಅಜ್ಜಿ ಮದುವೆ ಕಹಾನಿ
ಕನ್ಹಯ್ಯ ಲಾಲ್ ಮತ್ತು ಸಬೀನಾ
ಸುಷ್ಮಾ ಚಕ್ರೆ
|

Updated on:Nov 25, 2026 | 11:12 PM

Share

ಶಿಮ್ಲಾ, ನವೆಂಬರ್ 25: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹಿಮಾಚಲ ಪ್ರದೇಶದ ಹಿರಿಯ ಜೋಡಿಯೊಂದು ಸಾಬೀತುಪಡಿಸಿದೆ. ಕುಟುಂಬಸ್ಥರು ಮನೆಯಿಂದ ಹೊರಹಾಕಿದ್ದರಿಂದ ವೃದ್ಧಾಶ್ರಮ ಸೇರಿಕೊಂಡಿದ್ದ 75 ವರ್ಷದ ಕನ್ನಯ್ಯ ಲಾಲ್ ಮತ್ತು 63 ವರ್ಷದ ಸಬೀನಾ ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದು, ಇದೀಗ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಮಕ್ಕಳು ಹಾಗೂ ಕುಟುಂಬ ಸದಸ್ಯರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮನೆಯಿಂದ ದೂರವಾಗಿದ್ದ 75 ವರ್ಷದ ಕನ್ನಯ್ಯ ಲಾಲ್ ಮತ್ತು 63 ವರ್ಷದ ಸಬೀನಾ, ಹಿಮಾಚಲ ಪ್ರದೇಶದ ವೃದ್ಧಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು. ಆರಂಭದಲ್ಲಿ ತಮ್ಮ ನೋವು ಮತ್ತು ಒಂಟಿತನದಿಂದ ಮಂಕಾಗಿದ್ದ ಇವರಿಬ್ಬರ ನಡುವೆ ಆಶ್ರಮದ ದೈನಂದಿನ ಒಡನಾಟದಿಂದ ಆತ್ಮೀಯ ಸ್ನೇಹ ಬೆಳೆಯಿತು. ದಿನಕಳೆದಂತೆ ಪರಸ್ಪರರ ಕಷ್ಟ-ಸುಖಗಳಿಗೆ ಹೆಗಲಾಗಿ ನಿಂತ ಇವರ ಸ್ನೇಹ ಗಾಢ ಪ್ರೀತಿಗೆ ತಿರುಗಿತು.

ಸಾಂಪ್ರದಾಯಿಕವಾಗಿ ನಡೆದ ವಿವಾಹ:

ಬದುಕಿನ ಉಳಿದ ದಿನಗಳನ್ನು ಸಂಗಾತಿಗಳಾಗಿ ಕಳೆಯಲು ನಿರ್ಧರಿಸಿದ ಈ ಜೋಡಿಯ ಆಸೆಗೆ ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಂಪೂರ್ಣ ಬೆಂಬಲ ನೀಡಿದರು. ಆಶ್ರಮದ ಆವರಣದಲ್ಲೇ ಹೂವುಗಳಿಂದ ಅಲಂಕರಿಸಲ್ಪಟ್ಟ ಮಂಟಪದಲ್ಲಿ, ಸ್ಥಳೀಯ ಸಂಪ್ರದಾಯದಂತೆ ವಧು-ವರರು ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಅಪರೂಪದ ವಿವಾಹಕ್ಕೆ ವೃದ್ಧಾಶ್ರಮದ ಇತರ ಹಿರಿಯ ನಿವಾಸಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಸಾಕ್ಷಿಯಾದರು. ಆಶ್ರಮದ ಸದಸ್ಯರೇ ಮನೆಯವರಂತೆ ನಿಂತು ವಿವಾಹದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ, ನವದಂಪತಿಗೆ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು.

ಇದನ್ನೂ ಓದಿ: ಬೇಡವಾಯ್ತು ಹೆತ್ತ ಕರುಳು: 5 ಮಕ್ಕಳಿದ್ರೂ ತಾಯಿಗೆ ಸಿಗದ ಆಸರೆ; ವೃದ್ಧಾಶ್ರಮಕ್ಕೆ ದಾಖಲು

ಕನ್ಹಯ್ಯ ಲಾಲ್ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜಂಜೇಲಿ ಪ್ರದೇಶದ ಥುನಾಗ್ ಗ್ರಾಮದವರು. ಅವರಿಗೆ ಮಕ್ಕಳಿರಲಿಲ್ಲ. ಕೆಲ ವರ್ಷಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು. ಪತ್ನಿಯ ಮರಣದ ನಂತರ ಒಂಟಿಯಾದ ಕನ್ಹಯ್ಯ ಲಾಲ್, ತಮ್ಮಲ್ಲಿದ್ದ ಆಸ್ತಿಯನ್ನೆಲ್ಲಾ ತಮ್ಮ ಸಹೋದರರ ಹೆಸರಿಗೆ ಬರೆದುಕೊಟ್ಟಿದ್ದರು. ಆದರೆ, ಆಸ್ತಿ ಪಡೆದ ಬಳಿಕ ಸಹೋದರರು ಅವರನ್ನು ಮನೆಯಿಂದ ಹೊರಹಾಕಿದರು. ಇರಲು ಸೂರು ಇಲ್ಲದೆ ಅನಾಥರಾದ ಕನ್ಹಯ್ಯ ಲಾಲ್, ಕೊನೆಗೆ ಗುಹೆಯೊಂದರಲ್ಲಿ ವಾಸಿಸಲು ಆರಂಭಿಸಿದರು. 2022ರಲ್ಲಿ ‘ಅಪ್ನಾ ಘರ್’ ವೃದ್ಧಾಶ್ರಮದ ತಂಡವು ಅವರನ್ನು ರಕ್ಷಿಸಿ ಆಶ್ರಮಕ್ಕೆ ಕರೆತಂದಿತು.

ಕೊಲ್ಕತ್ತಾದವರಾದ 63 ವರ್ಷದ ಸಬೀನಾ ಕೂಡ ಜೀವನದಲ್ಲಿ ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಮನೆಯಿಂದ ದಾರಿ ತಪ್ಪಿ ಅಲೆಯುತ್ತಾ ಹಿಮಾಚಲ ಪ್ರದೇಶಕ್ಕೆ ಬಂದು ತಲುಪಿದ್ದರು. ಆರಂಭದಲ್ಲಿ ಅವರನ್ನು ಶಿಮ್ಲಾದ ಮಶೋಬ್ರಾದಲ್ಲಿರುವ ಆಶ್ರಮವೊಂದರಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ಬಿಲಾಸ್‌ಪುರದ ‘ಅಪ್ನಾ ಘರ್’ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿಯೇ ಅವರಿಗೆ ಕನ್ಹಯ್ಯ ಲಾಲ್ ಅವರ ಪರಿಚಯವಾಯಿತು. ಇಬ್ಬರ ನಡುವಿನ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ, ಜೀವನದ ಉಳಿದ ದಿನಗಳನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು.

ಇದನ್ನೂ ಓದಿ: ಅಮರಕಂಟಕ್ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯಡಿ ಸಿಲುಕಿದ ಭಕ್ತ, ರಕ್ಷಣೆಯ ವಿಡಿಯೋ ವೈರಲ್

ಬಿಲಾಸ್‌ಪುರ ಜಿಲ್ಲಾಧಿಕಾರಿ ಕಿರಣ್ ಭಡಾನಾ ಅವರು ವರನ ದಿಬ್ಬಣದ ಸದಸ್ಯರಾಗಿ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ನವದಂಪತಿಗೆ ಸಾಂಪ್ರದಾಯಿಕ ಉಡುಗೊರೆ ನೀಡಿ ಅಭಿನಂದಿಸಿದ ಅವರು, “ಈ ವಿವಾಹವು ಸಮಾಜಕ್ಕೆ ಅತ್ಯಂತ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಪ್ರತಿಯೊಬ್ಬರಿಗೂ ಸಂತೋಷದಿಂದ ಬದುಕುವ ಹಕ್ಕಿದೆ; ವಯಸ್ಸಾಯಿತು ಎಂದ ಮಾತ್ರಕ್ಕೆ ಜೀವನವನ್ನು ಆನಂದಿಸುವ ಆಸೆಯನ್ನು ಕಳೆದುಕೊಳ್ಳಬೇಕಿಲ್ಲ” ಎಂದು ಹೇಳಿದರು.

ವಿವಾಹದ ಬಳಿಕ ಕನ್ಹಯ್ಯ ಲಾಲ್ ಮತ್ತು ಸಬೀನಾ ಅವರು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಾಲಾಗಢದಲ್ಲಿರುವ ಹೊಸ ವೃದ್ಧಾಶ್ರಮಕ್ಕೆ ತೆರಳಲಿದ್ದು, ಅಲ್ಲಿ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸಲಿದ್ದಾರೆ.

ಇಳಿವಯಸ್ಸಿನಲ್ಲಿಯೂ ಪರಸ್ಪರ ಆಸರೆಯಾಗಿ ಬದುಕಲು ನಿರ್ಧರಿಸಿದ ಈ ಹಿರಿಯ ದಂಪತಿಯ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 pm, Wed, 25 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ವಿನೋದ್ ರಾಜ್ ಬೆಂಬಲ; ದಿನಸಿ ವಿತರಣೆ
ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ವಿನೋದ್ ರಾಜ್ ಬೆಂಬಲ; ದಿನಸಿ ವಿತರಣೆ
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ