ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ನಿಂದನೆ ಪ್ರಕರಣ: ಆರ್.ಆರ್. ನಗರ ಪೊಲೀಸರ ವಿಚಾರಣೆಗೆ ಹಾಜರಾದ ಧನ್ವೀರ್
ಈ ಮೊದಲು ದರ್ಶನ್ ಕುಟುಂಬದ ಜೊತೆ ನಟ ಧನ್ವೀರ್ ಅವರು ಆಪ್ತವಾಗಿದ್ದರು. ವಿಜಯಲಕ್ಷ್ಮಿ ದರ್ಶನ್ ಅವರ ಕಾನೂನು ಹೋರಾಟದಲ್ಲಿ ಧನ್ವೀರ್ ಅವರು ಜೊತೆಯಾಗಿ ನಿಂತಿದ್ದರು. ಆದರೆ ನಂತರದಲ್ಲಿ ಅವರ ನಡುವೆ ಮನಸ್ತಾಪ ಉಂಟಾಯಿತು. ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್ ಗೌಡ ನಿಂದಿಸಿದ್ದಾರೆ ಎಂಬ ಆರೋಪ ಎದುರಾಯಿತು. ಅದರ ವಿಚಾರಣೆ ನಡೆಯುತ್ತಿದೆ.

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಈ ಹಿಂದೆ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ಹಿನ್ನೆಲೆಯಲ್ಲಿ ಧನ್ವೀರ್ ಇಂದು (ನವೆಂಬರ್ 25) ಆರ್.ಆರ್. ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದು, ಠಾಣೆಯ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು 2 ಗಂಟೆಗೂ ಹೆಚ್ಚು ಕಾಲದಿಂದ ಧನ್ವೀರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ವಿಜಯಲಕ್ಷ್ಮೀ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ನಾಗರಾಜ್ ಅವರಿಗೆ ಧನ್ವೀರ್ ಫೋನ್ ಕರೆ ಹಾಗೂ ಮೆಸೇಜ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧವಾಗಿ ನಾಗರಾಜ್ ಅವರು ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರಂಭದಲ್ಲಿ ಈ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಗಂಭೀರವಲ್ಲದ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ನಂತರ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಧನ್ವೀರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಧನ್ವೀರ್ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮೊದಲು ತನಿಖೆಗೆ ಸಹಕರಿಸಿ ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಧನ್ವೀರ್ ಅವರಿಗೆ ಸೂಚನೆ ನೀಡಿತ್ತು. ಹೈಕೋರ್ಟ್ ನಿರ್ದೇಶನ ಹಾಗೂ ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಧನ್ವೀರ್ ಇಂದು (ನ.25) ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಎದುರು ಸುಳ್ಳು ಹೇಳಿ ಸಿಕ್ಕಿಬಿದ್ದ ನಟ ಧನ್ವೀರ್; ಸಿಸಿಬಿಯಿಂದ ಮತ್ತೊಂದು ಬಿಗ್ ಶಾಕ್
‘ನಾಗರಾಜ್ ನಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದ. ಅವನು ಗಲಾಟೆ ಮಾಡಿದ್ದಕ್ಕೆ ನಾನು ಬೈದೆ’ ಎಂದು ಧನ್ವೀರ್ ಅವರು ಹೇಳಿಕೆ ನೀಡಿದ್ದಾರೆ. ದರ್ಶನ್ ಕುಟುಂಬದ ಜೊತೆ ಧನ್ವೀರ್ ಆಪ್ತವಾಗಿದ್ದರು. ಆದರೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅವರ ನಡುವೆ ಬಿರುಕು ಮೂಡಿತು ಎನ್ನಲಾಗಿದೆ. ಆ ಕಾರಣದಿಂದ ಮನಸ್ತಾಪ ಹೆಚ್ಚಾಗಿ ಅಂತಿಮವಾಗಿ ಪೊಲೀಸ್ ಠಾಣೆ ಹಾಗೂ ಕೋರ್ಟ್ ಮೆಟ್ಟಿಲು ಏರುವಂತಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




