AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳ ಮಿಲನ್ ಸಭೆಯಲ್ಲಿ ತ್ರಿವರ್ಣ ಧ್ವಜ ಬೀಸುತ್ತಾ, ವಂದೇ ಮಾತರಂ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ

ಮಂಗಳ ಮಿಲನ್ ಸಭೆಯಲ್ಲಿ ತ್ರಿವರ್ಣ ಧ್ವಜ ಬೀಸುತ್ತಾ, ವಂದೇ ಮಾತರಂ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ

ಸುಷ್ಮಾ ಚಕ್ರೆ
|

Updated on: Aug 11, 2026 | 4:37 PM

Share

ಜುಲೈ 20ರಂದು ಪ್ರಾರಂಭವಾದ ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 13ರಂದು ಮುಕ್ತಾಯಗೊಳ್ಳಲಿದೆ. ಜುಲೈ 20ರಂದು ಆರಂಭಗೊಂಡ ಈ ಅಧಿವೇಶನವು ಸತತ ಕಲಾಪ ಮುಂದೂಡಿಕೆಗಳನ್ನು ಕಂಡಿದ್ದು, ಪ್ರಮುಖವಾಗಿ 'ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ತಿದ್ದುಪಡಿ ಮಸೂದೆ, 2026' ಸೇರಿದಂತೆ ಕೇವಲ ಎರಡು ಮಸೂದೆಗಳ ಮೇಲಿನ ಚರ್ಚೆಯನ್ನು ಹೊರತುಪಡಿಸಿ ಇತರ ಯಾವುದೇ ಹೆಚ್ಚಿನ ಕೆಲಸ ಕಾರ್ಯಗಳು ನಡೆದಿಲ್ಲ. ವಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ 4 ಮಸೂದೆಗಳನ್ನು ಅಲ್ಪ ಅಥವಾ ಯಾವುದೇ ಚರ್ಚೆಯಿಲ್ಲದೆ ಎರಡೂ ಸದನಗಳಲ್ಲಿ ಅಂಗೀಕರಿಸಲಾಯಿತು ಹಾಗೂ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ನವದೆಹಲಿ, ಆಗಸ್ಟ್ 11: ಸಂಸತ್ ಭವನದ ಸಂಕೀರ್ಣದಲ್ಲಿ ಇಂದು ನಡೆದ ಆಡಳಿತಾರೂಢ ಮೈತ್ರಿಕೂಟದ ಸಾಪ್ತಾಹಿಕ ಸಂಸದೀಯ ಪಕ್ಷದ ಸಭೆಯ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಆಗಮಿಸುತ್ತಿದ್ದಂತೆ, ಎನ್‌ಡಿಎ ಸಂಸದರು ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ‘ಮಂಗಳ ಮಿಲನ್’ ಎಂಬ ಈ ಸಭೆಯಲ್ಲಿ ಕೇಂದ್ರ ಸಚಿವರು, ಎನ್‌ಡಿಎ ನಾಯಕರು ಹಾಗೂ ಮೈತ್ರಿಕೂಟದ ಘಟಕ ಪಕ್ಷಗಳ ಸಂಸದರು ಭಾಗವಹಿಸಿದ್ದರು.

ಸಂಸತ್ತಿನ ಗ್ರಂಥಾಲಯದಲ್ಲಿರುವ ಜಿ. ಎಂ. ಸಿ. ಬಾಲಯೋಗಿ ಸಭಾಂಗಣಕ್ಕೆ ಪ್ರಧಾನಿ ಮೋದಿ ಪ್ರವೇಶಿಸುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸಚಿವರು ಮತ್ತು ಸಂಸದರು ರಾಷ್ಟ್ರಧ್ವಜವನ್ನು ಬೀಸುತ್ತಾ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಅವರನ್ನು ಅಭಿನಂದಿಸಿದರು. ಈ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಎಸ್. ಜೈಶಂಕರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (ಜೆಡಿಎಸ್), ಕಿಂಜರಾಪು ರಾಮ್ ಮೋಹನ್ ನಾಯ್ಡು (ಟಿಡಿಪಿ), ರಾಮದಾಸ್ ಬಂಡು ಅಠಾವಳೆ (ಆರ್‌ಪಿಐ-ಎ), ಪ್ರಫುಲ್ ಪಟೇಲ್ (ಎನ್‌ಸಿಪಿ), ಉಪೇಂದ್ರ ಕುಶ್ವಾಹಾ (ಆರ್‌ಎಲ್‌ಎಂ), ಶತಾಬ್ದಿ ರಾಯ್ (ಎನ್‌ಸಿಪಿಐ) ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಎನ್‌ಡಿಎ ಸಂಸದೀಯ ಪಕ್ಷದ ಈ ಸಭೆಯನ್ನು ಆಯೋಜಿಸಲಾಗುತ್ತಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us