AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಕೃಷ್ಣಾ ನದಿಗೆ ಬಿದ್ದ ಕಾರು; ಟೋಲ್ ಗೇಟ್ ಬಳಿ ತಪ್ಪಿದ ಭಾರಿ ದುರಂತ

ಬಾಗಲಕೋಟೆ, ಬೀಳಗಿ ತಾಲೂಕಿನ ಗಲಗಲಿ-ರಬಕವಿ ಬಳಿ ಕೃಷ್ಣಾ ನದಿಗೆ ಕಾರು ಬಿದ್ದ ಘಟನೆ PWD ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನಡೆದಿದೆ. ರಸ್ತೆ ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸದೆ ಇರುವುದರಿಂದ ಒಂದೇ ವಾರದಲ್ಲಿ ಮೂರು ಕಾರುಗಳು, ಒಂದು ಬೈಕ್ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಕೃಷ್ಣಾ ನದಿಗೆ ಬಿದ್ದ ಕಾರು; ಟೋಲ್ ಗೇಟ್ ಬಳಿ ತಪ್ಪಿದ ಭಾರಿ ದುರಂತ
ನದಿಗೆ ಬಿದ್ದ ಕಾರು
TV9 Web
| Edited By: |

Updated on:Aug 11, 2026 | 9:59 PM

Share

ಬಾಗಲಕೋಟೆ, ಆ.11: ಬೀಳಗಿ ತಾಲೂಕಿನ ಗಲಗಲಿ-ರಬಕವಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಕಾರೊಂದು ಬಿದ್ದ ಭೀಕರ ಘಟನೆ ನಡೆದಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಸುನೀಲ್ ಅಂಬಿಗೇರ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ಸರಿಯಾಗಿ ಜಲ್ಲಿಯನ್ನು ಸಮತಟ್ಟು ಮಾಡದೆ ಬೇಕಾಬಿಟ್ಟಿ ಬಿಟ್ಟಿದ್ದರಿಂದ ನಿಯಂತ್ರಣ ತಪ್ಪಿ ಕಾರು ಕೃಷ್ಣಾ ನದಿಗೆ ಬಿದ್ದಿದೆ.

ಕಾರು ನದಿಗೆ ಬೀಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಮಾಲೀಕ ಸುನೀಲ್, ಕಾರಿನ ಡೋರ್ ಒದ್ದು ಹೊರಬಂದಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವ ಯುವಕನನ್ನು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ತಕ್ಷಣವೇ ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಯಂತ್ರವನ್ನು ಬಳಸಿ ನದಿಯಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕಳೆದ ಒಂದು ವಾರದಲ್ಲೇ ಇದೇ ಜಾಗದಲ್ಲಿ 3 ಕಾರುಗಳು ಕೃಷ್ಣಾ ನದಿಗೆ ಬಿದ್ದಿದ್ದು, ಓರ್ವ ಬೈಕ್ ಸವಾರ ಕೂಡ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.

ಕಾರು ಮಾಲೀಕ ಸುನೀಲ್ ಅಂಬಿಗೇರ ಅವರು ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ದೂರು ನೀಡಲು ಹೋದಾಗ, ಬೀಳಗಿ ಠಾಣೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಲಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜಹೀರಾಬಾದ್ ಬಳಿ ಸಂಭವಿಸಿದ ಭೀಕರ ಅಪಘಾತ: ಆಟೋಗೆ ಟ್ಯಾಂಕರ್ ಡಿಕ್ಕಿ ಸೇರಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ 9 ಬಲಿ

ದಾವಣಗೆರೆ: ಟೋಲ್ ಗೇಟ್ ಬಳಿ ಕಾರಿಗೆ ಲಾರಿ ಡಿಕ್ಕಿ; ಜಸ್ಟ್ ಮಿಸ್

ದಾವಣಗೆರೆ ತಾಲೂಕಿನ ಹೆಬ್ಬಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ (NH 48) ಟೋಲ್ ಪ್ಲಾಜಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಟೋಲ್ ದಾಟಿ ಮುಂಭಾಗಕ್ಕೆ ತೆರಳುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ವೇಗದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಜ್ಜುಬಿದ್ದಿದೆಯಾದರೂ, ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಟೋಲ್ ಬಳಿ ನಿಂತಿದ್ದ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Tue, 11 August 26

Follow Us