ತಮ್ಮ ವಿರುದ್ಧ ಸ್ಪರ್ಧೆಗೆ ಡಿಕೆಶಿಗೆ ವಿಜಯೇಂದ್ರ ಆಹ್ವಾನ: ಹರಿಪ್ರಸಾದ್ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲಿ ಎಂದು ವ್ಯಂಗ್ಯ
ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕೆಪಿಸಿಸಿ ಆಯೋಜಿಸಿರುವ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಇಂದು (ಸೆ.30) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಚಾಲನೆ ನೀಡಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಪಾದಯಾತ್ರೆ ಶುರುವಾಗಿದೆ. ಇನ್ನು ತಮ್ಮ ಕ್ಷೇತ್ರದಿಂದ ಪಾದಯಾತ್ರೆ ಶುರು ಮಾಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.

ತುಮಕೂರು, (ಸೆಪ್ಟೆಂಬರ್ 30): ಕೆಪಿಸಿಸಿ ಆಯೋಜಿಸಿರುವ ‘ಭಾರತ್ ಜೋಡೋ 2.0’ ಪಾದಯಾತ್ರೆ ಇಂದು (ಸೆಪ್ಟೆಂಬರ್ 30) ಬಿವೈ ವಿಜಯೇಂದ್ರ ಅವರ ಕ್ಷೇತ್ರ ಶಿಕಾರಿಪುರದಿಂದ ಪಾದಯಾತ್ರೆ ಶುರುವಾಗಿದ್ದು, ಇದಕ್ಕೆ ಸ್ವತಃ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ನನ್ನ ವಿರುದ್ಧ ಸ್ಪರ್ಧೆ ಮಾಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಲೇವಡಿ ಮಾಡಿದ್ದಾರೆ.
ತುಮಕೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ನನ್ನ ವಿರುದ್ಧ ಸ್ಪರ್ಧಿಸುವಂತೆ ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದೇನೆ. ಪುಕ್ಕಟ್ಟೆ ಮಾತಾಡೋದು ಬೇಡ, ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ. ಬನ್ನಿ ನೀವೇ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಹೇಳಿದ್ದೇನೆ ಎಂದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮತ್ತೊಮ್ಮೆ ಡಿಕೆ ಶಿವಕುಮಾರ್ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಉರ್ದು ದಿನಾಚರಣೆಗೆ ಬಿಜೆಪಿ ವಿರೋಧ: ಕನ್ನಡ ಭಾಷೆಗೆ ಇಂತಹ ವೈಭವದ ವೇದಿಕೆ ಎಷ್ಟು ಬಾರಿ ಲಭಿಸಿದೆ ಎಂದ ಸುರೇಶ್ ಕುಮಾರ್
ಬಿ.ಕೆ ಹರಿಪ್ರಸಾದ್ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ
ಬಿ.ಕೆ ಹರಿಪ್ರಸಾದ್ ನಾಲ್ಕು ಬಾರಿ ರಾಜ್ಯಸಭಾ ಎಂಪಿ ಆಗಿರಬಹುದು. ಆದ್.ರೆ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ. ಎಂಎಲ್ಎ ,ಎಂಪಿ ಬಿಡಿ ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿವೆ ಅಲ್ಲಾದರೂ ಸ್ಪರ್ಧೆ ಮಾಡಲಿ. ಅವರೇ ಹೇಳೊಕೊಂಡಿದ್ದಾರೆ ವಿಜಯೇಂದ್ರ ಇನ್ನು ಎಲ್ ಕೆಜಿ ನಾನು ಪಿಎಚ್ಡಿ ಮಾಡಿದ್ದೇನೆ ಅಂತ ಹೇಳಿದ್ದಾರೆ. ನಾನು ಎಲ್ ಕೆಜಿ ಮಾಡಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ನಮ್ಮ ತಾಲ್ಲೂಕಿನ ಜನ. ಬಿಕೆ ಹರಿಪ್ರಸಾದ್ ಪಿಎಚ್ಡಿ ಮಾಡಿದ್ರು ಒಂದು ಚುನಾವಣೆ ಗೆಲ್ಲೊದಕ್ಕೆ ಸಾಧ್ಯವಾಗಿಲ್ಲ. ಮುಂದೆ ತಾಲೂಕು, ಜಿಲ್ಲಾ ಪಂಚಾಯಿತಿಗೆ ಸ್ಪರ್ಧೆ ಮಾಡಲಿ ಅಂತ ಕಿವಿ ಮಾತು ಹೇಳುತ್ತೇನೆಂದು ಲೇವಡಿ ಮಾಡಿದರು.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಅಂತ ಹೇಳಬೇಡಿ, ಪ್ರಜಾ ಸೇವಕರು ಅಂತ ಹೇಳಿದ್ದಾರೆ. ರಾಜ್ಯದ ಗೌರವಾನ್ವಿತ ಪ್ರಜಾ ಸೇವಕರಿಗೆ ಪ್ರಜಾ ಸೇವೆ ಮಾಡಲು ಪುರಸೊತ್ತು ಇಲ್ಲ. ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡಿದ್ದಾರೆ ಎಂದು ಟಾಂಗ್ ಕೊಟ್ಟರು.
ನನಗೆ ಬಹಳ ಸಂತೋಷ ಹಾಗೂ ಹೆಮ್ಮೆ ಎಂದರೆ ಇತ್ತೀಚೆಗೆ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದ್ವಿ. ಪಾದಯಾತ್ರೆ ಮುಖೇನಾ ರಾಜ್ಯ ಸರ್ಕಾರವನ್ನು ಅಲ್ಲಾಡಿಸುವ, ಎಚ್ಚರಿಸುವ ಕೆಲಸ ಮಾಡಿದ್ದೇವೆ. ಇದರಿಂದ ಎಚ್ಚೆತ್ತಿಕೊಂಡಿರುವ ಕೆಪಿಸಿಸಿ ಅಧ್ಯಕ್ಷರು, ಯಡಿಯೂರಪ್ಪಗೆ ಶಕ್ತಿ ಕೊಟ್ಟಿರುವ ಶಿಕಾರಿಪುರದಲ್ಲಿ ಭಾರತ ಜೋಡೋ ಕಾರ್ಯಕ್ರಮ ಮಾಡಲು ಹೊರಟ್ಟಿದ್ದಾರೆ. ಅವರಿಗೆ ಒಳ್ಳೆದಾಗ್ಲಿ ಅಂತ ಶುಭ ಹಾರೈಸುತ್ತೇನೆ ಎಂದರು.
ಕೀಳು ಮಟ್ಟದ ರಾಜಕಾರಣ ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ
ಕಾರ್ಯಕ್ರಮದ ಬಾವುಟ, ಬಂಟಿಂಗ್ ಹರಿದು ಹಾಕಿದ್ರು ಅಂತ ಹೇಳಿದ್ದಾರೆ. ಇಂತಹ ಕೀಳು ಮಟ್ಟದ ರಾಜಕಾರಣ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ. ಈ ರೀತಿ ಹೇಳಿಕೆ ಕೊಟ್ಟು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಬಹಳ ಹಿರಿಯರಿದ್ದಾರೆ, ಅದರ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಗ್ಯಾರಂಟಿಗಳಿಂದ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಭ್ರಮೆಯಲ್ಲಿ ಇದ್ದರು. ವಾಸ್ತಿವಿಕ ಸತ್ಯ ಏನೆಂದು ಅವರಿಗೆ ಅರ್ಥ ಆಗಿದೆ ಎಂದು ಹೇಳಿದರು.
ಶಿಕಾರಿಪುರ ಬಿಜೆಪಿ ಭದ್ರಕೋಟೆ, ಯಾರ ಕೈಯಲ್ಲೂ ಅಲ್ಲಾಡಿಸಲು ಆಗಲ್ಲ
ಸಿಎಂ ಡಿಕೆಶಿಯವರು ನೂರು ದಿನ ಪೂರೈಸಿದ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನ ವೇದಿಕೆಗೂ ಹತ್ತಿಸಲಿಲ್ಲ. ಬಿ.ಕೆ ಹರಿಪ್ರಸಾದ್ ಅವರದ್ದೇ ದಾರಿಯಲ್ಲಿ ಹೊರಟ್ಟಿದ್ದಾರೆ. ಬಿಜೆಪಿ ಬೀದಿಗಿಳಿದು ಹೋರಾಟ ಮಾಡ್ತಿದೆ. ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷರು ನಿದ್ದೆಗೆಟ್ಟಂತೆ ಕಾಣ್ತಿದೆ. ಯಡಿಯೂರಪ್ಪ ಒಂದು ಜಾತಿಗೆ ಸೀಮಿತವಾದವರಲ್ಲ. ರೈತ ನಾಯಕ ಅಂತ ಹೇಳ್ತಾರೆ. ಅವರ ಜೀವನ ಪೂರ್ತಿ ಬಡವ, ರೈತ, ಕಾರ್ಮಿಕರ ಪರವಾಗಿ ಧ್ವನಿ ಎತ್ತಿದವರು. ಶಿಕಾರಿಪುರ ಕೇವಲ ವೀರಶೈವ ಲಿಂಗಾಯತ ಇರುವ ಕ್ಷೇತ್ರವಲ್ಲ. ಅತಿ ಹೆಚ್ಚು ಹಿಂದೂಳಿದ ದಲಿತರು ಇರುವ ಕ್ಷೇತ್ರ. ನನಗೆ ಆಶೀರ್ವಾದ ಮಾಡಿದ್ದಾರೆ ಅಂದ್ರೆ ನಾನು ಹೆಮ್ಮೆ ಪಡುವ ವಿಚಾರ. ಶಿಕಾರಿಪುರ ಬಿಜೆಪಿ ಭದ್ರಕೋಟೆ, ಯಾರ ಕೈಯಲ್ಲೂ ಅಲ್ಲಾಡಿಸಲು ಸಾಧ್ಯವಿಲ್ಲ. ಯಾವುದೋ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.




