ಬೆಂಗಳೂರು: ಮನೆಗಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡು ಕುಖ್ಯಾತಿಯಾಗಿದ್ದ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಮತ್ತೆ ಜೈಲು ಸೇರಿದ್ದಾನೆ. ವಯಸ್ಸಿಗೂ ಮೀರಿ ಮನೆಗಳ್ಳತನ ಮಾಡಿರುವ ಕಾರ್ತಿಕ್(31) ಇತ್ತೀಚೆಗೆ 4 ಮನೆಗಳ್ಳತನ ಮಾಡಿದ್ದ. ಈ ಸಂಬಂಧ ಬಾಗಲೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಎಸ್ಕೇಪ್ ಕಾರ್ತಿಕ್ನನ್ನು ಬಂಧಿಸಿದ್ದಾರೆ.
ಒಂಟಿಯಾಗಿ ಕಾಲೇಜು ವಿದ್ಯಾರ್ಥಿಯಂತೆ ಎಂಟ್ರಿ ಕೊಡ್ತಿದ್ದ:
ಒಂಟಿಯಾಗಿ ಕಾಲೇಜು ವಿದ್ಯಾರ್ಥಿಯಂತೆ ಎಂಟ್ರಿ ಕೊಡುವ ಕಾರ್ತಿಕ್, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಗೋವಾ, ಮುಂಬೈ ಸೇರಿದಂತೆ ಹಲವೆಡೆ ಮೋಜಿನ ಜೀವನ ನಡೆಸುತ್ತಿದ್ದ. ಕಳೆದ ಕೆಲತಿಂಗಳಿನಿಂದ ಈಶಾನ್ಯ ವಿಭಾಗದಲ್ಲಿ ಆಸಾಮಿ ಆ್ಯಕ್ಟೀವ್ ಆಗಿದ್ದ. ಬಾಗಲೂರು ಹಾಗೂ ಅಮೃತಹಳ್ಳಿಯಲ್ಲಿ ನಾಲ್ಕು ಮನೆಗಳ್ಳತನ ನಡೆಸಿದ್ದ. ಹಾಗಾಗಿ ಕೃತ್ಯ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಜೈಲಿನಿಂದ ಮೊದಲು ಎಸ್ಕೇಪ್ ಆದ ಕುಖ್ಯಾತಿ:
ಬಂಧಿತ ಆರೋಪಿಯಿಂದ 18 ಲಕ್ಷ ಮೌಲ್ಯದ 400 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಮೊದಲು ಎಸ್ಕೇಪ್ ಆದ ಕುಖ್ಯಾತಿ ಇದೇ ಎಸ್ಕೇಪ್ ಕಾರ್ತಿಕ್ಗಿದೆ. ಬರೋಬ್ಬರಿ 35ಕ್ಕೂ ಅಧಿಕ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ, 5ಕ್ಕೂ ಹೆಚ್ಚು ಬಾರಿ ಜೈಲು ಸೇರಿ ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಮತ್ತೆ ಮನೆಗಳ್ಳತನ ಮಾಡುತ್ತಿದ್ದ.