ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ (Ambedkar Jayanti) ಆಚರಿಸಿದ್ದಕ್ಕೆ ಮಹಾರಾಷ್ಟ್ರದಲ್ಲಿ (Maharashtra) 24 ವರ್ಷದ ದಲಿತ ಯುವಕನೊಬ್ಬನನ್ನು ಕೊಲೆ (Murder) ಮಾಡಿದ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಂದೇಡ್ ಜಿಲ್ಲೆಯ ಬೋಂಧರ್ ಹವೇಲಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ ಎಂದು ನಾಂದೇಡ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ಯೆಯಾದ ಯುವಕನನ್ನು ಅಕ್ಷಯ್ ಭಲೇರಾವ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಆರೋಪಿಗಳು ಮೇಲ್ಜಾತಿ ಸಮುದಾಯದ ವ್ಯಕ್ತಿಯೊಬ್ಬರ ವಿವಾಹವನ್ನು ಆಚರಿಸುತ್ತಿದ್ದಾಗ ಅಕ್ಷಯ್ ಭಲೇರಾವ್ ಹೋಗುತ್ತಿದ್ದ. ಈ ವೇಳೆ, ಭಲೇರಾವ್ ಮತ್ತು ಈತನ ಸಹೋದರ ಆಕಾಶ್ ನೋಡಿದ ಆರೋಪಿಗಳು, ಅಂಬೇಡ್ಕರ್ ಜಯಂತಿ ಆಚರಿಸಿದ ಇಬ್ಬರಲ್ಲಿ ಒಬ್ಬನನ್ನು ಆಚರಿಸಿದ್ದಕ್ಕೆ ಕೊಲ್ಲಬೇಕು ಎಂಬ ನಿರ್ಧಾರ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿ: ಪ್ರೇಯಸಿ ಸಹೋದರರಿಂದ ಟಾರ್ಚರ್, ಅಣ್ಣನ ಲವ್ ಸ್ಟೋರಿಗೆ ಬಲಿಯಾದ ತಮ್ಮ
ಇದೇ ವಿಚಾರದಲ್ಲಿ ಆರೋಪಿಗಳು ಮತ್ತು ಅಕ್ಷಯ್, ಆಕಾಶ್ ನಡುವೆ ಮಾತಿನ ಚಕಮಕಿ ಆರಂಭಗೊಂಡು ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಅಕ್ಷಯ್ ಭಲೇರಾವ್ನಿಗೆ ಥಳಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆಕಾಶ್ ಮೇಲೂ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯಡಿ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರೈಂ ನ್ಯೂಸ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ