ನರ್ಸಿಂಗ್ ಹೋಂವೊಂದರಲ್ಲಿ ಕೆಲಸ ಸಿಕ್ಕು, ಮೊದಲ ದಿನ ಕೆಲಸಕ್ಕೆಂದು ಹೋದ ನರ್ಸ್ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಶುಕ್ರವಾದ ಈಕೆಯದ್ದು ಕೆಲಸದ ಮೊದಲ ದಿನ ಆಗಿತ್ತು. ಅಂದು ಆಸ್ಪತ್ರೆಗೆ ಹೋದವಳು ಶನಿವಾರ ಇವರ ದೇಹ ನರ್ಸಿಂಗ್ಹೋಂನ ಗೋಡೆಗೆ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಅಂದರೆ ಅದೇ ಗೋಡೆಯ ಮೇಲಿದ್ದ ಕಿಟಕಿಗೆ ಹಗ್ಗಕಟ್ಟಲಾಗಿದ್ದು, ನರ್ಸ್ ಶವ ಗೋಡೆಗೆ ಇಳಿಬಿಟ್ಟಂತೆ ನೇತಾಡುತ್ತಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಮೃತ ನರ್ಸ್ ಕುಟುಂಬದವರ ಆರೋಪ. ನಮ್ಮ ಮನೆ ಮಗಳನ್ನು ಅತ್ಯಾಚಾರ ಮಾಡಿ, ಬಳಿಕ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವ ಪಾಲಕರು, ನರ್ಸಿಂಗ್ ಹೋಂನ ಆಡಳಿತಾಧಿಕಾರಿ ಸೇರಿ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ. ಸದ್ಯ ಎಫ್ಐಆರ್ ದಾಖಲಾಗಿದೆ.
ಘಟನೆ ನಡೆದದ್ದು ಉತ್ತರ ಪ್ರದೇಶದ ಉನ್ನಾವೋದಲ್ಲಿರುವ ನ್ಯೂ ಜೀವನ್ ಹಾಸ್ಪಿಟಲ್ನಲ್ಲಿ. ಉನ್ನಾವೋ ಹೆಚ್ಚುವರಿ ಎಸ್ಪಿ ಶಶಿ ಶೇಖರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯ ಶವವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ. ಕುಟುಂಬದವರು ಇದು ರೇಪ್ ಆ್ಯಂಡ್ ಮರ್ಡರ್ ಎಂದೇ ದೂರು ನೀಡಿದ್ದಾರೆ. ಅವರು ಹೇಳಿದ ಹೆಸರಿನ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ಸಾಬೀತಾದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಉನ್ನಾವೋದಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ನಡೆದ ಅತ್ಯಾಚಾರ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. ಉನ್ನಾವೋದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಕೇಸ್ಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೇಂಗರ್ ತಲೆದಂಡವಾಗಿದ್ದು ನೆನಪಿರಬಹುದು. ಈಗ ಇದೂ ಕೂಡ ಅತ್ಯಾಚಾರವೆಂಬುದೇ ಪಾಲಕರ ಬಲವಾದ ಆರೋಪ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಆಕೆಯ ಶವ ಪತ್ತೆಯಾಗುತ್ತಿದ್ದಂತೆ ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದಾರೆ. ಅನೇಕರು ಫೋಟೋ, ವಿಡಿಯೋಗಳನ್ನೂ ತೆಗೆದುಕೊಂಡಿದ್ದಾರೆ.