ಗದಗ, ಆಗಸ್ಟ್ 13: ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಗದಗ (Gadag) ಜಿಲ್ಲೆಯ ಸಾಯಿ ನಗರದಲ್ಲಿ ನಡೆದಿದೆ. ಸುದ್ದಿ ತಿಳಿದು ವಿದೇಶದಲ್ಲಿದ್ದ ಮೃತೆಯ ಪತಿ ಮನೆಗೆ ಆಗಮಿಸಿದ್ದಾರೆ. ಅದರಂತೆ ಅಂತ್ಯಸಂಸ್ಕಾರಕ್ಕೂ ಸಿದ್ಧತೆ ನಡೆಸಲಾಗುತ್ತಿತ್ತು. ಇದಕ್ಕೂ ಮುನ್ನ ಮೃತದೇಹದ ಸ್ನಾನ ಮಾಡಿಸುವ ಕಾರ್ಯದ ವೇಳೆ ಮಹಿಳೆಯ ಕುಟುಂಬಸ್ಥರು ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿದ್ದು, ಅಂತ್ಯಸಂಸ್ಕಾರ ಕೈಬಿಟ್ಟು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಸೀನಾ ಬೇಪಾರಿ ಅವರನ್ನು ಇಮ್ತಿಯಾಜ್ ಎಂಬಾತನೊಂದಿಗೆ 14 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಇಮ್ತಿಯಾಜ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಇಂದು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮನೆಯವರು ಇಮ್ತಿಯಾಜ್ಗೆ ತಿಳಿಸಿದ್ದಾರೆ. ಕೂಡಲೇ ಇಮ್ತಿಯಾಜ್ ವಿದೇಶದಿಂದ ಊರಿಗೆ ಆಗಮಿಸಿದ್ದಾರೆ.
ಮಹಿಳೆಯ ಕುಟುಂಬಸ್ಥರಿಗೂ ಕುಸಿದು ಬಿದ್ದು ಸಾವನ್ನಪ್ಪಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಮೃತೆಯ ಕುಟುಂಬಸ್ಥರು ಸೇರಿದಂತೆ ಎಲ್ಲರೂ ದುಃಖದ ನಡುವೆ ಹಸೀನಾಳಾ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ಈ ನಡುವೆ ಮೃತದೇಹವನ್ನು ಸ್ನಾನ ಮಾಡಿಸುವ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ.
ಮೃತದೇಹವನ್ನು ಸ್ನಾನ ಮಾಡಿಸುವಾಗ ಮಹಿಳೆ ಕತ್ತಿನ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಹೆಬ್ಬೆಟ್ಟು ಹಾಕಿಸಿದ ಗುರುತು ಕೂಡ ಕಾಣಿಸಿದೆ. ಇದರಿಂದ ಅನುಮಾನಗೊಂಡ ಮಹಿಳೆಯ ಕುಟುಂಬಸ್ಥರು, ಅತ್ತೆ, ನಾದನಿ, ಬಾವ ಮೈದುನ ಸೇರಿಕೊಂಡು ಹಸೀನಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಅಂತ್ಯಸಂಸ್ಕಾರ ಕೈಬಿಟ್ಟು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತನ್ನ ಮಗಳನ್ನು ಆಕೆಯ ಪತಿಯ ಮನೆಯವರು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗದಗ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ