ಬೆಂಗಳೂರು: ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ ಮಕ್ಕಳು ಶಾಲೆಗಳಿಗೆ ಸಲ್ಲಿಸಿರುವ ಆಧಾರ್ ಕಾರ್ಡ್ (Aadhaar Card) ಪರಿಶೀಲನೆ ವೇಳೆ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿರುವ ಹೆಸರುಗಳು ಶಾಲಾ ದಾಖಲಾತಿ ವೇಳೆ ನಮೂದಿಸಿರುವ ಹೆಸರುಗಳಿಗೆ ಹೊಂದಿಕೆಯಾಗದಿರುವುದು ತಿಳಿದುಬಂದಿದೆ. ಹೀಗಾಗಿ ಪೋಷಕರು ಆಧಾರ್ ಕಾರ್ಡ್‌ಗಳಲ್ಲಿ ಹೆಸರುಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಕೇಂದ್ರ ಸರ್ಕಾರವು ಫೆಬ್ರವರಿ 17 ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ವಿವಿಧ ವಿದ್ಯಾರ್ಥಿವೇತನಗಳಿಗೆ ಮತ್ತು ವಿವಿಧ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ದಾಖಲಾತಿಗೆ ಆಧಾರ್ ಸಂಖ್ಯೆಯನ್ನು ನವೀಕರಿಸುವಂತೆ ಸೂಚಿಸಿದೆ. ಅದರಂತೆ ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕು. ಅದರಂತೆ ವಿದ್ಯಾರ್ಥಿಗಳು ಶಾಲೆಗಳಿಗೆ ಆಧಾರ್ ಕಾರ್ಡ್ ಸಲ್ಲಿಕೆ ಮಾಡಿದ್ದರು.
ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ದಾಖಲಾತಿಗೆ ಹೆಸರುಗಳು ಹೊಂದಿಕೆಯಾಗದಿರುವುದನ್ನು ಕಂಡುಕೊಂಡಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 1 ಕೋಟಿಗೂ ಅಧಿಕ ವಿದ್ಯಾರ್ಥಿಗಳ ಪೈಕಿ 78 ಲಕ್ಷ ಮಂದಿಯ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲಾಗಿದೆ.
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿದೆ. ಹೆಚ್ಚಿನ ಮಕ್ಕಳು ಮೂರು ಪದಗಳನ್ನು ಒಳಗೊಂಡಿರುವ ಹೆಸರನ್ನು ಹೊಂದಿದ್ದಾರೆ. ಶಾಲಾ ದಾಖಲಾತಿಯಲ್ಲಿರುವ ಹೆಸರುಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಪೋಷಕರು ಆಧಾರ್ ಕಾರ್ಡ್‌ಗಳಲ್ಲಿ ಬದಲಾಯಿಸಿ ಅವುಗಳನ್ನು ನಮಗೆ ಮತ್ತೆ ಸಲ್ಲಿಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿವಿಧ ಶಾಲೆಗಳಲ್ಲಿ ಸುಮಾರು 30,000 ಹೆಸರುಗಳನ್ನು ನಕಲು ಮಾಡಲಾಗಿರುವುದು ದಾಖಲಾಗಿದೆ. ಫೆಬ್ರವರಿಯಿಂದ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 14 ಲಕ್ಷ ಮಕ್ಕಳು ಶಾಲೆಗಳಿಗೆ ಆಧಾರ್ ಕಾರ್ಡ್ ಸಲ್ಲಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಜನ್ಮ ಪ್ರಮಾಣಪತ್ರಗಳನ್ನು ಸಲ್ಲಿಸುತ್ತಾರೆ ಎಂದು ಶಾಲೆಗಳು ಹೇಳುತ್ತವೆ.
“ಪೋಷಕರು ತಮ್ಮ ಮಕ್ಕಳ ಹೆಸರುಗಳನ್ನು ಶಾಲೆಗಳಿಗೆ ನೀಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಜನನ ಪ್ರಮಾಣಪತ್ರಗಳಲ್ಲಿನ ಹೆಸರುಗಳು ಮತ್ತು ಆಧಾರ್ನಲ್ಲಿರುವ ಹೆಸರುಗಳು ಹೊಂದಿಕೆಯಾಗುವುದಿಲ್ಲ. ಪ್ರವೇಶ ದಾಖಲೆಗಳಿಗಾಗಿ ಶಾಲೆಗಳು ಜನನ ಪ್ರಮಾಣಪತ್ರಗಳನ್ನು ಬಳಸಬಾರದು. ಹೆಸರುಗಳನ್ನು ಅರ್ಜಿ ನಮೂನೆಯಿಂದ ತೆಗೆದುಕೊಳ್ಳಬೇಕು ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾಗಿ ವರದಿ ಮಾಡಿದೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ