ಮಕ್ಕಳ ಕೈಬರಹ ಸುಂದರವಾಗಬೇಕೇ? ಬರೆಯಲು ಒತ್ತಾಯಿಸುವ ಬದಲು ಈ 5 ಮೋಜಿನ ಆಟ ಆಡಿಸಿ!

ಪ್ರತಿಯೊಬ್ಬ ಪೋಷಕರಿಗೂ ಮಕ್ಕಳ ಕೈಬರಹ ಸುಂದರವಾಗಿರಬೇಕು ಎಂಬ ಆಸೆಯಿರುತ್ತದೆ. ಬಲವಂತವಾಗಿ ಬರೆಸುವ ಬದಲು, ಮಕ್ಕಳ ಕೈ ಸ್ನಾಯುಗಳನ್ನು ಬಲಪಡಿಸುವುದು ಮುಖ್ಯ. ಮಕ್ಕಳ ತಜ್ಞರ ಪ್ರಕಾರ, ಸೂಕ್ಷ್ಮ ಸ್ನಾಯುಗಳನ್ನು (Fine Motor Skills) ಅಭಿವೃದ್ಧಿಪಡಿಸುವ 5 ಮೋಜಿನ ಚಟುವಟಿಕೆಗಳು ಕೈಬರಹವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಪ್ಲೇಡೋ ಆಟ, ಸಣ್ಣ ವಸ್ತುಗಳನ್ನು ಬೇರ್ಪಡಿಸುವುದು, ಕಪ್ಪು ಹಲಗೆ ಮೇಲೆ ಬರೆಯುವುದು, ಮರಳಿನಲ್ಲಿ ಅಕ್ಷರಾಭ್ಯಾಸ ಮತ್ತು ಸರಿಯಾದ ಕುಳಿತುಕೊಳ್ಳುವ ಭಂಗಿ ಇದಕ್ಕೆ ಅತ್ಯುತ್ತಮ ಮಾರ್ಗಗಳು.

ಮಕ್ಕಳ ಕೈಬರಹ ಸುಂದರವಾಗಬೇಕೇ? ಬರೆಯಲು ಒತ್ತಾಯಿಸುವ ಬದಲು ಈ 5 ಮೋಜಿನ ಆಟ ಆಡಿಸಿ!
ಮಕ್ಕಳ ಕೈಬರಹ ಸುಂದರವಾಗಬೇಕೇ?
Image Credit source: Getty Images

Updated on: Nov 13, 2026 | 2:56 PM

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಕೈಬರಹ ಸುಂದರವಾಗಿ, ಸ್ಪಷ್ಟವಾಗಿ ಮತ್ತು ಮುತ್ತು ಪೋಣಿಸಿದಂತಿರಬೇಕು ಎಂಬ ಆಸೆಯಿರುತ್ತದೆ. ಇದಕ್ಕಾಗಿ ಮಕ್ಕಳ ಕೈಗೆ ಪೆನ್ಸಿಲ್, ಪುಸ್ತಕ ಕೊಟ್ಟು ಗಂಟೆಗಟ್ಟಲೆ ಬರೆಯುವಂತೆ ಒತ್ತಾಯಿಸುವುದು ಸಾಮಾನ್ಯ. ಆದರೆ, ಎಷ್ಟೇ ಬರೆಸಿದರೂ ಕೆಲವು ಮಕ್ಕಳ ಅಕ್ಷರಗಳಲ್ಲಿ ಯಾವುದೇ ಸುಧಾರಣೆ ಕಂಡುಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣವೇನು ಗೊತ್ತೇ? ಮಕ್ಕಳ ಕೈಬರಹ ಸುಧಾರಿಸಲು ಮೊದಲು ಅವರ ಬೆರಳುಗಳು ಮತ್ತು ಹಸ್ತದ ಸೂಕ್ಷ್ಮ ಸ್ನಾಯುಗಳು (Fine Motor Skills) ಬಲಗೊಳ್ಳಬೇಕು. ಬಲವಂತವಾಗಿ ಬರೆಸುವುದರಿಂದ ಮಕ್ಕಳಿಗೆ ಬರವಣಿಗೆಯ ಮೇಲೆ ಆಸಕ್ತಿ ಕಡಿಮೆಯಾಗುತ್ತದೆಯೇ ಹೊರತು ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ ತಜ್ಞರು.

ಮಕ್ಕಳ ತಜ್ಞೆ ಡಾ. ಸುಮಿತ್ರಾ ಮೀನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳ ಕೈ ಸ್ನಾಯುಗಳನ್ನು ಬಲಪಡಿಸಿ, ಕೈಬರಹವನ್ನು ಸುಧಾರಿಸುವ 5 ಸರಳ ಹಾಗೂ ಮೋಜಿನ ಚಟುವಟಿಕೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ವಿವರ ಇಲ್ಲಿದೆ:

Loading...

ಪ್ಲೇಡೋ (Play-Doh) ಅಥವಾ ಜೇಡಿಮಣ್ಣಿನ ಆಟ:

ಮಕ್ಕಳಿಗೆ ಆಟದ ಹಿಟ್ಟು (Play-Doh) ಅಥವಾ ಜೇಡಿಮಣ್ಣಿನೊಂದಿಗೆ ಆಟವಾಡಲು ಬಿಡಿ. ಮಣ್ಣನ್ನು ಹಿಸುಕುವುದು ಹಿಗ್ಗಿಸುವುದು ಮತ್ತು ವಿವಿಧ ಸಣ್ಣ ಆಕಾರಗಳನ್ನು ಮಾಡುವುದರಿಂದ ಅವರ ಬೆರಳುಗಳು ಹಾಗೂ ಹಸ್ತದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಇದು ಮುಂದೆ ಪೆನ್ಸಿಲ್ ಅನ್ನು ಸರಿಯಾಗಿ ಮತ್ತು ದೃಢವಾಗಿ ಹಿಡಿಯಲು ಸಹಾಯ ಮಾಡುತ್ತದೆ.

ಸಣ್ಣ ವಸ್ತುಗಳನ್ನು ಬೇರ್ಪಡಿಸುವ ಆಟ:

ಒಂದು ಬಟ್ಟಲಿನಲ್ಲಿ ಬೀಜಗಳು, ಬಟಾಣಿ, ಬೀನ್ಸ್ ಅಥವಾ ಮಣಿಗಳನ್ನು ಹಾಕಿ, ಪಕ್ಕದಲ್ಲಿ ಇನ್ನೊಂದು ಖಾಲಿ ಬಟ್ಟಲನ್ನು ಇಡಿ. ಮೊದಲ ಬಟ್ಟಲಿನಿಂದ ವಸ್ತುಗಳನ್ನು ಒಂದೊಂದಾಗಿ ಹೆಕ್ಕಿ ಖಾಲಿ ಬಟ್ಟಲಿಗೆ ಹಾಕಲು ಮಕ್ಕಳಿಗೆ ತಿಳಿಸಿ. ಇದಕ್ಕಾಗಿ ಸಣ್ಣ ಚಿಮುಟವನ್ನೂ (Tweezers) ನೀಡಬಹುದು. ಈ ಚಟುವಟಿಕೆಯು ಹೆಬ್ಬೆರಳು ಮತ್ತು ತೋರುಬೆರಳಿನ ನಡುವಿನ ಹಿಡಿತವನ್ನು (Pincer Grasp) ಬಲಪಡಿಸುತ್ತದೆ.

ಕಪ್ಪು ಹಲಗೆಯ (Blackboard) ಮೇಲೆ ಬರೆಯುವುದು:

ಕಾಗದ ಮತ್ತು ಪೆನ್ಸಿಲ್ ನೀಡುವ ಮೊದಲು, ಗೋಡೆಗೆ ತೂಗುಹಾಕಿದ ಕಪ್ಪು ಹಲಗೆ ಅಥವಾ ಸ್ಲೇಟ್ ಮೇಲೆ ಸೀಮೆಸುಣ್ಣದಿಂದ (Chalk) ಅಕ್ಷರ, ಸಂಖ್ಯೆಗಳನ್ನು ಬರೆಯಲು ಪ್ರೋತ್ಸಾಹಿಸಿ. ಹಲಗೆಯ ಮೇಲೆ ಬರೆಯುವಾಗ ಮಕ್ಕಳು ತಮ್ಮ ಕೈ ಮತ್ತು ತೋಳುಗಳನ್ನು ಮೇಲಕ್ಕೆತ್ತಬೇಕಾಗುತ್ತದೆ. ಇದರಿಂದ ಭುಜ ಮತ್ತು ತೋಳಿನ ಸ್ನಾಯುಗಳು ಬಲಗೊಂಡು, ಕೈ ಚಲನೆಯ ಮೇಲೆ ಉತ್ತಮ ನಿಯಂತ್ರಣ ಸಿಗುತ್ತದೆ.

ಮರಳು ಅಥವಾ ರವೆಯಲ್ಲಿ ಅಕ್ಷರಾಭ್ಯಾಸ:

ಒಂದು ಅಗಲವಾದ ತಟ್ಟೆಯಲ್ಲಿ ಮರಳು, ಬಾಂಬೆ ರವೆ ಅಥವಾ ಉಪ್ಪನ್ನು ತೆಳುವಾಗಿ ಹರಡಿ. ಅದರ ಮೇಲೆ ಮಕ್ಕಳ ತೋರುಬೆರಳಿನಿಂದ ಅಕ್ಷರಗಳು, ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಿಡಿಸಲು ಹೇಳಿ. ಮಕ್ಕಳಿಗೆ ಇದೊಂದು ಆಟದಂತೆ ಭಾಸವಾಗುವುದಲ್ಲದೆ, ಬೆರಳುಗಳ ಚಲನೆಯ ಮೇಲೆ ಹಿಡಿತ ಸಾಧಿಸಲು ಇದು ಅತ್ಯುತ್ತಮ ವಿಧಾನವಾಗಿದೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ಕುಳಿತುಕೊಳ್ಳುವ ಭಂಗಿಯ ಬಗ್ಗೆ ಗಮನವಿರಲಿ:

ಸುಂದರ ಕೈಬರಹಕ್ಕೆ ದೇಹದ ಭಂಗಿಯೂ ಅಷ್ಟೇ ಮುಖ್ಯ. ಬರೆಯುವಾಗ ಮಕ್ಕಳು ನೇರವಾಗಿ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ. ಬೆನ್ನಿಗೆ ಸರಿಯಾದ ಆಧಾರವಿರಬೇಕು ಮತ್ತು ಎರಡೂ ಪಾದಗಳು ನೆಲದ ಮೇಲೆ ಸಮತಟ್ಟಾಗಿ ಊರಿರಬೇಕು. ಮಗುವಿನ ಎತ್ತರಕ್ಕೆ ತಕ್ಕಂತೆ ಮೇಜು ಮತ್ತು ಕುರ್ಚಿ ಇದ್ದರೆ, ಮಕ್ಕಳು ಆಯಾಸವಿಲ್ಲದೆ ಆರಾಮವಾಗಿ ಕುಳಿತು ಬರೆಯಲು ಸಾಧ್ಯವಾಗುತ್ತದೆ.

ಪೋಷಕರಿಗೆ ಕಿವಿಮಾತು ಒತ್ತಡ ಹೇರಬೇಡಿ:

ಈ ಐದು ಚಟುವಟಿಕೆಗಳನ್ನು ಪ್ರತಿದಿನ ಕೇವಲ 15-20 ನಿಮಿಷಗಳ ಕಾಲ ಆಟದ ರೂಪದಲ್ಲಿ ಮಾಡಿಸಿದರೆ ಸಾಕು, ಮಕ್ಕಳ ಕೈ ಸ್ನಾಯುಗಳು ಕ್ರಮೇಣ ಬಲಗೊಳ್ಳುತ್ತವೆ. ಅಕ್ಷರ ಚೆನ್ನಾಗಿಲ್ಲ ಎಂದು ಮಕ್ಕಳನ್ನು ಗದರಿಸುವುದು ಅಥವಾ ಗಂಟೆಗಟ್ಟಲೆ ಬರೆಯಲು ಒತ್ತಾಯಿಸುವುದು ತಪ್ಪು. ಬದಲಾಗಿ, ಅವರ ಪ್ರತಿಯೊಂದು ಸಣ್ಣ ಪ್ರಯತ್ನವನ್ನೂ ಮೆಚ್ಚಿ ಪ್ರೋತ್ಸಾಹಿಸಿ. ತಾಳ್ಮೆಯಿಂದ ಕಲಿಸಿದರೆ ಮಕ್ಕಳಲ್ಲಿ ಬರವಣಿಗೆಯ ಆಸಕ್ತಿ ಚಿಗುರಿ, ಕೈಬರಹ ತಾನಾಗಿಯೇ ಸುಧಾರಿಸುತ್ತದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us