ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​: SSLC, ದ್ವಿತೀಯ PUC ಪಾಸಿಂಗ್ ಮಾರ್ಕ್ಸ್ ಕಡಿತ

2025-26ನೇ ಸಾಲಿನ SSLC ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಗುಡ್​ ನ್ಯೂಸ್​ ಕೊಟ್ಟಿದೆ. ತೇರ್ಗಡೆ ಅಂಕದಲ್ಲಿ ಕಡಿತ ಮಾಡಲಾಗಿದ್ದು, ಪ್ರಸಕ್ತ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದೆ. ಪಾಸಿಂಗ್ ಮಾರ್ಕ್ಸ್ ಕಡಿತದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಯೇ ನಿರ್ಧಾರ ಮಾಡಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​: SSLC, ದ್ವಿತೀಯ PUC ಪಾಸಿಂಗ್ ಮಾರ್ಕ್ಸ್ ಕಡಿತ
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು. (ಸಾಂದರ್ಭಿಕ ಚಿತ್ರ)

Updated on: Oct 15, 2025 | 1:11 PM

ಬೆಂಗಳೂರು, ಅಕ್ಟೋಬರ್​ 15: 2025-26ನೇ ಸಾಲಿನ ಪಿಯುಸಿ ಹಾಗೂ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಗುಡ್​ ನ್ಯೂಸ್​ ಕೊಟ್ಟಿದೆ. ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 198 ಅಂಕ ಮತ್ತು SSLCಯಲ್ಲಿ 625ಕ್ಕೆ ಕನಿಷ್ಠ 206 ಅಂಕ ಗಳಿಸಿದರೆ ವಿದ್ಯಾರ್ಥಿಗಳು ಇನ್ನು ತೇರ್ಗಡೆ ಆಗಲಿದ್ದಾರೆ ಎಂದು ಬೆಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ. ಹೊಸ ನಿಯಮದ ಪ್ರಕಾರ ಲಿಖಿತ ಹಾಗೂ ಆಂತರಿಕ ಅಂಕ ಸೇರಿ ಪಿಯುಸಿಯಲ್ಲಿ ಪ್ರತಿ ವಿಷಯದಲ್ಲೂ ಕನಿಷ್ಠ 30 ಅಂಕ ಕಡ್ಡಾಯವಾಗಿರಲಿದೆ. SSLC ಪರೀಕ್ಷೆಯಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 30 ಅಂಕ ಪಡೆದರೆ ವಿದ್ಯಾರ್ಥಿಗಳು ತೇರ್ಗಡ ಆಗಲಿದ್ದಾರೆ.

ಪಾಸಿಂಗ್ ಮಾರ್ಕ್ಸ್ ಕಡಿತ ವಿಚಾರವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಪೈಕಿ ಶೇಕಡಾ 33ರಷ್ಟು ಪರವಾಗಿ 701 ಪತ್ರ ಮತ್ತು ಶೇ.35ರಷ್ಟು ಪರವಾಗಿ 8 ಪತ್ರಗಳು ಬಂದಿದ್ದವು. ಹೀಗಾಗಿ 2025-26ನೇ ಸಾಲಿನಿಂದ SSLCಯಲ್ಲಿ ಪ್ರಥಮ ಭಾಷೆ ಹೊರತುಪಡಿಸಿ ಶೇ. 33 ಫಲಿತಾಂಶ ಬಂದರೆ ವಿದ್ಯಾರ್ಥಿಗಳು ಪಾಸ್​ ಆಗಲಿದ್ದಾರೆ. ಪ್ರಥಮ ಭಾಷೆ ಗರಿಷ್ಠ ಅಂಕವನ್ನು 125ರಿಂದ 100ಕ್ಕೆ ಇಳಿಸುವ ವಿಚಾರದ ಬಗ್ಗೆಯೂ ಚರ್ಚೆಯಾಗಿದ್ದು, ಇದು ಇನ್ನೂ ಅಂತಿಮವಾಗಿಲ್ಲ. ಸಾರ್ವಜನಿಕರ ಅಭಿಪ್ರಾಯ ಪಡೆದೇ ಈ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು: 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ನೂತನ ನಿಯಮವು ಜಾರಿಗೆ ಬರಲಿದ್ದು, ಪರೀಕ್ಷೆಗೆ ಹಾಜರಾಗುವ ಹೊಸ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾಥಿಗಳಿಬ್ಬರಿಗೂ ಅನ್ವಯವಾಗಲಿದೆ. ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಮತ್ತು ಸಿಬಿಎಸ್​ ಸಿ ಹಾಗೂ ನೆರೆ ರಾಜ್ಯಗಳಲ್ಲಿರುವ ಮಾನದಂಡಗಳನ್ನು ನಮ್ಮಲ್ಲೂ ಜಾರಿಗೆ ತರುವ ಉದ್ದೇಶದ ಹಿನ್ನಲೆ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಹೊಸ ನಿಯಮದಿಂದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಮತ್ತು SSLC ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us