ಇಂಜಿನಿಯರಿಂಗ್ ಓದಿಲ್ಲ, 13 ವರ್ಷಗಳ ಪರಿಶ್ರಮ: ‘ಹಾರುವ ಕಾರು’ ನಿರ್ಮಿಸಿ ಅಚ್ಚರಿ ಮೂಡಿಸಿದ ಬಿ.ಎ ವಿದ್ಯಾರ್ಥಿ!

ಉತ್ತರಾಖಂಡದ ರವಿ ತಮ್ತಾ ಯಾವುದೇ ಇಂಜಿನಿಯರಿಂಗ್ ಪದವಿ ಇಲ್ಲದೆ, 13 ವರ್ಷಗಳ ಇಂಟರ್ನೆಟ್ ಸ್ವಯಂ ಕಲಿಕೆಯಿಂದ 'ಎಲೆಕ್ಟ್ರಿಕ್ ಹಾರುವ ಕಾರು' ನಿರ್ಮಿಸಿ ದೇಶದ ಗಮನ ಸೆಳೆದಿದ್ದಾರೆ. ಕಲಾ ವಿಭಾಗದ ಪದವೀಧರರಾದ ಇವರು, ತಮ್ಮ ಹಠ ಮತ್ತು ಕಲಿಯುವ ಹಂಬಲದಿಂದ 'ಹಪಿಡಾ ಸ್ಕೈನೆಕ್ಸ್' ಹಾರುವ ವಾಹನವನ್ನು ಸೃಷ್ಟಿಸಿದ್ದಾರೆ. ಇದು ಡಿಗ್ರಿ ಪ್ರಮಾಣಪತ್ರಕ್ಕಿಂತ ಜ್ಞಾನ ಮತ್ತು ಸಾಧಿಸುವ ಛಲವೇ ಮುಖ್ಯ ಎಂಬುದನ್ನು ಸಾಬೀತುಪಡಿಸುತ್ತದೆ.

ಇಂಜಿನಿಯರಿಂಗ್ ಓದಿಲ್ಲ, 13 ವರ್ಷಗಳ ಪರಿಶ್ರಮ: ಹಾರುವ ಕಾರು ನಿರ್ಮಿಸಿ ಅಚ್ಚರಿ ಮೂಡಿಸಿದ ಬಿ.ಎ ವಿದ್ಯಾರ್ಥಿ!
ರವಿ ತಮ್ತಾ
Image Credit source: Twitter

Updated on: Oct 24, 2026 | 3:55 PM

ಸಾಧನೆಗೆ ಡಿಗ್ರಿ ಪ್ರಮಾಣಪತ್ರಕ್ಕಿಂತ ಹಠ ಮತ್ತು ಕಲಿಯುವ ಹಂಬಲ ಮುಖ್ಯ ಎಂಬುದನ್ನು ಉತ್ತರಾಖಂಡದ ಯುವಕನೊಬ್ಬ ಸಾಬೀತುಪಡಿಸಿದ್ದಾರೆ. ಯಾವುದೇ ಇಂಜಿನಿಯರಿಂಗ್ ಅಥವಾ ಸೈನ್ಸ್ ಶಿಕ್ಷಣವಿಲ್ಲದಿದ್ದರೂ, ಸತತ 13 ವರ್ಷಗಳ ಕಾಲ ಇಂಟರ್ನೆಟ್ ಮೂಲಕ ಸ್ವಯಂ ಕಲಿಕೆ ನಡೆಸಿ ‘ಎಲೆಕ್ಟ್ರಿಕ್ ಹಾರುವ ಕಾರು’ (Electric Flying Car) ನಿರ್ಮಿಸುವ ಮೂಲಕ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರವಿ ತಮ್ತಾ ಎಂಬ ಯುವಕ ದೇಶದ ಗಮನ ಸೆಳೆದಿದ್ದಾರೆ.

ಕಲಾ ವಿಭಾಗದಲ್ಲಿ ಪದವಿ:

ರವಿ ತಮ್ತಾ ಅವರು ಕಲಾ ವಿಭಾಗದಲ್ಲಿ (Bachelor of Arts) ಪದವಿ ಪಡೆದವರಾಗಿದ್ದು, ಯಾವುದೇ ಬೃಹತ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಬೆಂಬಲವಿಲ್ಲದೆ ತಮ್ಮ ಸತತ ಪ್ರಯತ್ನ ಮತ್ತು ಪ್ರಯೋಗಗಳಿಂದ ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ರೂಪಿಸಿದ ‘ಹಪಿಡಾ ಸ್ಕೈನೆಕ್ಸ್’ (HAPIDA SKYNeX) ಎಂಬ ಏಕ ಆಸನದ (Single-seater) ಎಲೆಕ್ಟ್ರಿಕ್ ಹಾರುವ ವಾಹನದ ಪ್ರಾಯೋಗಿಕ ಹಾರಾಟವು ಕಳೆದ ಆಗಸ್ಟ್‌ನಲ್ಲಿ ನಡೆದಿದ್ದರು, ಔಪಚಾರಿಕ ಶಿಕ್ಷಣಕ್ಕಿಂತ ಆಸಕ್ತಿ ಮತ್ತು ಸ್ವಯಂ ಕಲಿಕೆ ಎಷ್ಟು ಶಕ್ತಿಶಾಲಿ ಎಂಬುದಕ್ಕೆ ಉದಾಹರಣೆಯಾಗಿದೆ.

ಹಳ್ಳಿಯ ಕನಸಿನಿಂದ ಹಾರುವ ಪ್ರೋಟೋಸೈಪ್‌ವರೆಗೆ:

ರವಿ ಅವರು ಜಾಗೇಶ್ವರ ಧಾಮದ ಬಳಿಯ ಕಫ್ಲಿಖಾನ್ ಎಂಬ ಸಣ್ಣ ಹಳ್ಳಿಯಲ್ಲಿ ಬೆಳೆದವರು. ಬೆಟ್ಟಗುಡ್ಡಗಳ ದುರ್ಗಮ ಹಾದಿಯಲ್ಲಿ ಪ್ರಾಣಾಪಾಯದಲ್ಲಿದ್ದವರನ್ನು ಆಸ್ಪತ್ರೆಗೆ ತಲುಪಿಸಲು ಗಂಟೆಗಟ್ಟಲೆ ಕಾಯಬೇಕಾದ ಕಷ್ಟಗಳನ್ನು ಕಣ್ಣಾರೆ ಕಂಡ ಇವರು, ಪ್ರತ್ಯೇಕ ಏರ್ ಮೋಬಿಲಿಟಿ (Personal Air Mobility) ಕುರಿತು ಆಲೋಚಿಸಲು ಪ್ರಾರಂಭಿಸಿದರು. 2015 ರಲ್ಲಿ ಹಾರುವ ಕಾರಿನ ಕನಸು ಕಂಡ ರವಿ, ತಮ್ಮ ‘ಹಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೂಲಕ ಈ ಕಲ್ಪನೆಗೆ ಜೀವ ನೀಡಿದರು.

ಈ ವಾಹನವು ಯಾವುದೇ ರನ್‌ವೇ ಇಲ್ಲದೆ ಲಂಬವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (VTOL) ಮಾಡುವ ಸಾಮರ್ಥ್ಯ ಹೊಂದಿದೆ. ಬಹು-ರೋಟರ್ ಡ್ರೋನ್‌ಗಳಿಗೆ ಬಳಸುವ ತಂತ್ರಜ್ಞಾನದಂತೆಯೇ, ಇದು ಹಲವು ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು ಪ್ರೊಪೆಲ್ಲರ್‌ಗಳನ್ನು ಬಳಸಿ ಚಲಿಸುತ್ತದೆ. ಲಘುವಾದ ಫ್ರೇಮ್, ಕಾಕ್‌ಪಿಟ್ ಮತ್ತು ಪಾರದರ್ಶಕ ಕ್ಯಾನ್‌ಪಿಯನ್ನು ಹೊಂದಿರುವ ಈ ವಾಹನ ಸಂಪೂರ್ಣವಾಗಿ ಬ್ಯಾಟರಿಯಿಂದ ಚಲಿಸುತ್ತದೆ. ಆದರೆ ಇದು ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿದ್ದು, ವಾಣಿಜ್ಯ ಬಳಕೆಗೆ ಇನ್ನು ಸಮಯ ಬೇಕಿದೆ.

ಇಂಟರ್ನೆಟ್ ಅನ್ನೇ ತರಬೇತಿ ಕೇಂದ್ರವಾಗಿಸಿಕೊಂಡ ರವಿ:

ಗ್ರಾಮೀಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ನೈನಿತಾಲ್ ಕ್ಯಾಂಪಸ್‌ನಲ್ಲಿ ಬಿ.ಎ ಪದವಿ ಪಡೆದ ರವಿಯವರ ತಂದೆ ಹರೀಶ್ ರಾಮ್ ಒಬ್ಬ ಸಾಮಾನ್ಯ ಮೆಕ್ಯಾನಿಕ್. ಯಾವುದೇ ಪ್ರಸಿದ್ಧ ಲ್ಯಾಬ್ ಅಥವಾ ಉನ್ನತ ತಂತ್ರಜ್ಞಾನ ಲಭ್ಯವಿಲ್ಲದಿದ್ದಾಗ, ರವಿ ಇಂಟರ್ನೆಟ್ ಅನ್ನೇ ತಮ್ಮ ಕಲಿಕೆಯ ವೇದಿಕೆಯನ್ನಾಗಿ ಮಾಡಿಕೊಂಡರು. ಸತತ ಸೋಲುಗಳು ಮತ್ತು ಮರುಪ್ರಯೋಗಗಳ ಮೂಲಕ ಹಾರುವ ಕಾರಿನ ವಿನ್ಯಾಸ, ಬ್ಯಾಟರಿ ಸಾಮರ್ಥ್ಯ ಮತ್ತು ಸ್ಥಿರತೆಯ ಸವಾಲುಗಳನ್ನು ಎದುರಿಸಿದರು.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ಹಾರುವ ಕಾರಿಗೂ ಮುನ್ನ ಹತ್ತಾರು ಉಪಯುಕ್ತ ಸಂಶೋಧನೆಗಳು:

ಹಾರುವ ಕಾರು ರವಿ ತಮ್ತಾ ಅವರ ಮೊದಲ ಆವಿಷ್ಕಾರವೇನೂ ಅಲ್ಲ. ಇವರು ಈ ಹಿಂದೆ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವು ವಸ್ತುಗಳನ್ನು ಕಂಡುಹಿಡಿದಿದ್ದಾರೆ. ಚಲಿಸುವಾಗ ಮೊಬೈಲ್ ಚಾರ್ಜ್ ಮಾಡುವ ಶೂಗಳು, ದೃಷ್ಟಿಹೀನರಿಗಾಗಿ ಸ್ಮಾರ್ಟ್ ಕೋಲು, ಬಿದಿರು ಸೀಳುವ ಯಂತ್ರ, ಅರಣ್ಯ ಇಲಾಖೆಗೆ ಉಪಯುಕ್ತವಾದ ಅಗ್ನಿಶಾಮಕ ಉಪಕರಣಗಳು ಮತ್ತು ಕಡ್ಡಿ ಆಧಾರಿತ ಮೊಬೈಲ್ ಚಾರ್ಜರ್‌ಗಳನ್ನು ಇವರು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ.

ಈ ಹಾರುವ ವಾಹನವು ದುರ್ಗಮ ಬೆಟ್ಟದ ಪ್ರದೇಶಗಳಲ್ಲಿ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮತ್ತು ಸಾರಿಗೆಗೆ ದೊಡ್ಡ ಮಟ್ಟದ ಕ್ರಾಂತಿ ತರುವ ನಿರೀಕ್ಷೆಯಿದೆ. ಆದರೆ, ಇದು ಸಾರ್ವಜನಿಕ ಬಳಕೆಗೆ ಬರಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕೃತ ಅನುಮತಿ ಮತ್ತು ಹೆಚ್ಚಿನ ಭದ್ರತಾ ಪರೀಕ್ಷೆಗಳ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ರವಿ ಅವರ ಈ ಸಾಧನೆ ಕೇವಲ ಒಂದು ಸ್ಪೂರ್ತಿಯಷ್ಟೇ ಅಲ್ಲ, ಜ್ಞಾನಕ್ಕೆ ಪದವಿಗಿಂತ ಕಲಿಯುವ ಮನಸ್ಸು ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Sat, 24 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us