SSLC Exams 2023: ಪರೀಕ್ಷೆ ಬರೆದು ಹೋರಬಂದು ವಿಡಿಯೋ ಕಾಲ್ ಮೂಲಕ ತಂದೆ ಅಂತ್ಯಸಂಸ್ಕಾರ ವೀಕ್ಷಿಸಿದ ವಿದ್ಯಾರ್ಥಿನಿ

|

Updated on: Apr 06, 2023 | 9:11 PM

ಪ್ರತಿಯೊಬ್ಬರ ಮನ ಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಹೊರಬಂದು ವಿಡಿಯೋ ಕಾಲ್ ಮೂಲಕ ತನ್ನ ತಂದೆಯ ಅಂತ್ಯಸಂಸ್ಕಾರ ವೀಕ್ಷಿಸಿ ಕಣ್ಣೀರಿಟ್ಟಿದ್ದಾಳೆ.

SSLC Exams 2023: ಪರೀಕ್ಷೆ ಬರೆದು ಹೋರಬಂದು ವಿಡಿಯೋ ಕಾಲ್ ಮೂಲಕ ತಂದೆ ಅಂತ್ಯಸಂಸ್ಕಾರ ವೀಕ್ಷಿಸಿದ ವಿದ್ಯಾರ್ಥಿನಿ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exams 2023) ಬರೆಯುತ್ತಿರುವ ವಿದ್ಯಾರ್ಥಿನಿಯ ಕರುಣಾಜನಕ ಕಥೆ ಇದು. ಇಂದು ಇಂಗ್ಲಿಷ್ ಪರೀಕ್ಷೆ ಬರೆದ ನಂತರ ಪರೀಕ್ಷಾ ಕೊಠಡಿಯಿಂದ ಹೊರಬಂದು ತನ್ನ ತಂದೆಯ ಅಂತ್ಯಸಂಸ್ಕಾರವನ್ನು (Funeral ) ವಿಡಿಯೋ ಕಾಲ್ ಮೂಲಕ ವೀಕ್ಷಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ (Indira Gandhi Residential School for Backward Classes) ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ತಂದೆ ಕಳೆದುಕೊಂಡ ದುರ್ದೈವಿಯಾಗಿದ್ದಾಳೆ.

ಕೊಪ್ಪಳ ಮೂಲದ ಅರ್ಶಿಯಾಳ ತಂದೆ ಅಬಿದ್ ಪಾಷಾ ಅವರಿಗೆ ಕಳೆದ ರಾತ್ರಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದ ಶಿಕ್ಷಕರು ತಕ್ಷಣ ಅರ್ಶಿಯಾಳನ್ನು ಕೊಪ್ಪಳಕ್ಕೆ ಕರೆದೊಯ್ದಿದ್ದಾರೆ. ಸುಮಾರು 700 ಕಿಮೀ ದೂರ ಪ್ರಯಾಣಿಸಿ ಅರ್ಶಿಯಾಳಿಗೆ ತನ್ನ ತಂದೆಯ ಮೃತದೇಹದ ದರ್ಶನ ಮಾಡಿಸಿ ಮತ್ತೆ ಪರೀಕ್ಷೆ ಬರೆಯಲು ಶಿಕ್ಷಕರು ಸಹಕರಿಸಿದ್ದಾರೆ.

ಇದನ್ನೂ ಓದಿ: SSLC Exams 2023: ಎಸ್​ಎಸ್​ಎಲ್​ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್

ತನ್ನ ತಂದೆಯ ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಅರ್ಶಿಯಾ ಇಂಗ್ಲಿಷ್ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿನಿಗೆ ಶಿಕ್ಷಕರು ವಿಡಿಯೋ ಕಾಲ್ ಮೂಲಕ ಶವ ಸಂಸ್ಕಾರ ವೀಕ್ಷಣೆಗೆ ಅನುವುಮಾಡಿಕೊಟ್ಟಿದ್ದಾರೆ. ಮೊಬೈಲ್​ನಲ್ಲಿ ತಂದೆಯ ಶವ ಸಂಸ್ಕಾರ ವೀಕ್ಷಿಸಿದ ವಿದ್ಯಾರ್ಥಿನಿ ಕಣ್ಣೀರಿಟ್ಟಿದ್ದಾಳೆ.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Thu, 6 April 23