ಯುಜಿಸಿ ನೆಟ್: ಅರ್ಜಿ ಸಲ್ಲಿಕೆ ಅವಧಿ ಅಕ್ಟೋಬರ್ 31 ರವರೆಗೆ ವಿಸ್ತರಣೆ!

2026 ರ ಡಿಸೆಂಬರ್​​​ನಲ್ಲಿ ನಡೆಯಲಿರುವ ಯುಜಿಸಿ ನೆಟ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು NTA ವಿಸ್ತರಿಸಿದೆ. ಡಿಜಿಲಾಕರ್ ತಾಂತ್ರಿಕ ಅಡಚಣೆಯಿಂದಾಗಿ ಹಲವು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ವಿಳಂಬ ಶುಲ್ಕವಿಲ್ಲದೆ ಅಕ್ಟೋಬರ್ 31 ರವರೆಗೆ ಅರ್ಜಿ ಸಲ್ಲಿಸಲು ಈಗ ಅವಕಾಶವಿದೆ. ಅಭ್ಯರ್ಥಿಗಳು ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಬೇಗನೆ ಅರ್ಜಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಯುಜಿಸಿ ನೆಟ್: ಅರ್ಜಿ ಸಲ್ಲಿಕೆ ಅವಧಿ ಅಕ್ಟೋಬರ್ 31 ರವರೆಗೆ ವಿಸ್ತರಣೆ!
ಯುಜಿಸಿ ನೆಟ್ ಡಿಸೆಂಬರ್

Updated on: Oct 28, 2026 | 3:09 PM

2026 ರ ಡಿಸೆಂಬರ್​​​ನಲ್ಲಿ ನಡೆಯಲಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (NET) ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪ್ರಸ್ತುತ ಚಾಲ್ತಿಯಲ್ಲಿದೆ. ಲಕ್ಷಾಂತರ ಅಭ್ಯರ್ಥಿಗಳು ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ತಾಂತ್ರಿಕ ತೊಡಕುಗಳಿಂದಾಗಿ ಅನೇಕರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) UGC NET ಡಿಸೆಂಬರ್​ನ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಶಿಸಿದೆ.

ಡಿಜಿಲಾಕರ್ ತಾಂತ್ರಿಕ ತೊಡಕಿನಿಂದ ಗಡುವು ವಿಸ್ತರಣೆ:

ಯುಜಿಸಿ ನೆಟ್ ಡಿಸೆಂಬರ್ ಅರ್ಜಿ ಪ್ರಕ್ರಿಯೆಯನ್ನು ಎನ್‌ಟಿಎ ಅಕ್ಟೋಬರ್ 8 ರಂದು ಪ್ರಾರಂಭಿಸಿದ್ದು, ಮುಂಚಿನ ವೇಳಾಪಟ್ಟಿಯಂತೆ ಅಕ್ಟೋಬರ್ 28 ಕೊನೆಯ ದಿನಾಂಕವಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ‘ಡಿಜಿಲಾಕರ್’ (DigiLocker) ಪರಿಶೀಲನೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಗುತ್ತಿದ್ದು, ಖಾತೆ ದೃಢೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಅಭ್ಯರ್ಥಿಗಳು ಎನ್‌ಟಿಎಗೆ ದೂರು ನೀಡಿದ್ದರು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಎನ್‌ಟಿಎ ಈ ಗಡುವನ್ನು ವಿಸ್ತರಿಸಿದೆ.

ಅಕ್ಟೋಬರ್ 31 ರವರೆಗೆ ವಿಳಂಬ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಿ:

ಎನ್‌ಟಿಎ ಬಿಡುಗಡೆ ಮಾಡಿರುವ ಹೊಸ ಪ್ರಕಟಣೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ವಿಳಂಬ ಶುಲ್ಕವಿಲ್ಲದೆ (Late Fee) ಅಕ್ಟೋಬರ್ 31, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಶುಲ್ಕ ಸಲ್ಲಿಕೆಗೂ ಅಕ್ಟೋಬರ್ 31 ರವರೆಗೇ ಕಾಲಾವಕಾಶ ನೀಡಲಾಗಿದ್ದು, ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ಅಕ್ಟೋಬರ್ 25 ರವರೆಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ?

ಎನ್‌ಟಿಎ ಹಂಚಿಕೊಂಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 25 ರ ಹೊತ್ತಿಗೆ ಒಟ್ಟು 5.5 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅರ್ಜಿಗಳ ಸಲ್ಲಿಕೆಯ ಪ್ರಸ್ತುತ ಸ್ಥಿತಿ ಹೀಗಿದೆ:

  • ಪೂರ್ಣಗೊಂಡ ಅರ್ಜಿಗಳು: 3,73,419 ಅಭ್ಯರ್ಥಿಗಳು ತಮ್ಮ ಅರ್ಜಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಶುಲ್ಕವನ್ನು ಪಾವತಿಸಿದ್ದಾರೆ.
  • ಅಪೂರ್ಣ ಅರ್ಜಿಗಳು: 1,36,993 ಅಭ್ಯರ್ಥಿಗಳು ಇನ್ನೂ ತಮ್ಮ ಛಾಯಾಚಿತ್ರ, ಸಹಿ ಅಪ್‌ಲೋಡ್ ಮಾಡುವುದು ಮತ್ತು ಶುಲ್ಕ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ.
  • ಶುಲ್ಕ ಪಾವತಿ ಬಾಕಿ: 31,580 ಅಭ್ಯರ್ಥಿಗಳು ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದರೂ ಇನ್ನೂ ಪರೀಕ್ಷಾ ಶುಲ್ಕ ಪಾವತಿಸಬೇಕಿದೆ.

ಯುಜಿಸಿ ನೆಟ್ ಮೇಲಿನ ಕ್ರೇಜ್ ಕಡಿಮೆಯಾಗುತ್ತಿದೆಯೇ?

ಅಕ್ಟೋಬರ್ 25 ರವರೆಗಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ಶಿಕ್ಷಣ ಕ್ಷೇತ್ರದಲ್ಲಿ ಈ ಕುರಿತು ಚರ್ಚೆಗಳು ಆರಂಭವಾಗಿವೆ. ಕಳೆದ ಯುಜಿಸಿ ನೆಟ್ ಡಿಸೆಂಬರ್ 2025 ರ ಪರೀಕ್ಷೆಗೆ ಒಟ್ಟು 9,93,702 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು ಮತ್ತು ಅವರಲ್ಲಿ 7,35,614 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಈ ಬಾರಿ ಅಕ್ಟೋಬರ್ 25 ರ ವೇಳೆಗೆ ಕೇವಲ 5.5 ಲಕ್ಷ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿರುವುದು, ಅಭ್ಯರ್ಥಿಗಳಲ್ಲಿ ನೆಟ್ ಪರೀಕ್ಷೆಯ ಮೇಲಿನ ಆಸಕ್ತಿ ಅಥವಾ ಕ್ರೇಜ್ ಕಡಿಮೆಯಾಗುತ್ತಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಆದಾಗ್ಯೂ, ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆಯಾಗಿರುವುದರಿಂದ ಅಂತಿಮ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Wed, 28 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us