ಮೈಸೂರು: ನನ್ನ ಉಸಿರು ಇರೋವರೆಗೂ ವರುಣ ಜನರನ್ನು ಕೈಬಿಡುವುದಿಲ್ಲ. ಪಕ್ಷಕ್ಕಾಗಿ ಹಗಲಿರುಳು ಎಲ್ಲರೂ ದುಡಿಯೋಣ. ಈ ಬಾರಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದರು. ಜಿಲ್ಲೆಯ ಟಿ.ನರಸೀಪುರದ ವಿಜಯ ಭಗವಾನ್ ಚಿತ್ರಮಂದಿರ ವೃತ್ತದಲ್ಲಿ ಆಯೋಜಸಿದ್ದ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಮೇ 13ರಂದು ಕಾಂಗ್ರೆಸ್, ಜೆಡಿಎಸ್ಗೆ ದೊಡ್ಡ ಆಘಾತ ಕಾದಿದೆ. ಯಾವ ದುಷ್ಟ ಶಕ್ತಿಯೂ ಇದನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕನಸು. ಟಿ.ನರಸೀಪುರ ಕ್ಷೇತ್ರದ ಅಭಿವೃದ್ಧಿಗೆ ಡಾ.ರೇವಣ್ಣರನ್ನು ಗೆಲ್ಲಿಸಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ದಿವಾಳಿಯಾಗಿದೆ. ಯಾರಿಗೂ ಬಹುಮತ ಬರಬಾರದೆಂದು ಜೆಡಿಎಸ್ ಕನಸು ಕಾಣುತ್ತಿದೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಯಡಿಯೂರಪ್ಪನವರು ಸಿಎಂ ಅಲ್ಲ, ಪಕ್ಷದ ರಾಜ್ಯಾಧ್ಯಕ್ಷರು ಅಲ್ಲ. 81 ವರ್ಷವಾದರೂ ಪಕ್ಷ ಅಧಿಕಾರಕ್ಕೆ ತರಲು ರಾಜ್ಯ ಸುತ್ತುತ್ತಿದ್ದಾರೆ ಎಂದರು.
ಇದನ್ನೂ ಓದಿ: Varuna Constituency: ವರುಣಾ ಕ್ಷೇತ್ರ ಚಿತ್ರಣ; ಸಿದ್ದರಾಮಯ್ಯ ಅದೃಷ್ಟದ ಕ್ಷೇತ್ರ, ಸೋಮಣ್ಣಗೆ ಲಿಂಗಾಯತರ ಬಲ
ಬಿ.ವೈ.ವಿಜಯೇಂದ್ರ ಅವರು ಟಿ.ನರಸೀಪುರ ಜೊತೆಗೆ ಹನೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ವಿಜಯೇಂದ್ರ ಅವರು ಹನೂರು ಬಿಜೆಪಿ ಅಭ್ಯರ್ಥಿ ಡಾ.ಪ್ರೀತಂ ನಾಗಪ್ಪ ಅವರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ನಾಗಪ್ಪ ಅವರು ಹನೂರು ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ ಶಾಸಕ ಆರ್.ನಾಗೇಂದ್ರ ಅವರನ್ನು ಎದುರಿಸುತ್ತಿದ್ದಾರೆ. ಬಳಿಕ ಮಾತನಾಡಿದ ಅವರು ವರುಣ ಕ್ಷೇತ್ರದಲ್ಲಿ ಸೋಮಣ್ಣರನ್ನು ಗೆಲ್ಲಿಸಲು ಪಕ್ಷ ನಿರ್ಧರಿಸಿದೆ. ದೇವರು ಮೆಚ್ಚುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಎಲ್ಲಾ ನಾಯಕರು ಶ್ರಮ ಹಾಕಿ ಸೋಮಣ್ಣರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಕಡೆಗಣನೆ ಆರೋಪ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಯಡಿಯೂರಪ್ಪ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಬಿಎಸ್ವೈ 81 ವರ್ಷದಲ್ಲೂ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿದ್ದಾರೆ. ಅವರು ಒಂದು ಹೆಜ್ಜೆ ಮುಂದೆ ಇಟ್ಟರೇ ಪರಿಣಾಮ ಏನಾಗುತ್ತೆ ಅನ್ನೋದು ವಿಪಕ್ಷಗಳ ನಾಯಕರಿಗೆ ಗೊತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಲಿಂಗಾಯತ ಡ್ಯಾಂ ಒಡೆಯುವ ನಿಮ್ಮ ಹಗಲುಗನಸು ನನಸಾಗದು; ಡಿಕೆ ಶಿವಕುಮಾರ್ಗೆ ಸಚಿವ ಸಿಸಿ ಪಾಟೀಲ ತಿರಗೇಟು
ಕಳೆದ ಬಾರಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅಥವಾ ಸೋಮಣ್ಣ ಇಬ್ಬರೂ ಸ್ಪರ್ಧಿಸಿರಲಿಲ್ಲ. ಈ ಕ್ಷೇತ್ರದಿಂದ 2008ರಲ್ಲಿ ಮತ್ತು 2013ರಲ್ಲಿ ಸಿದ್ದರಾಮಯ್ಯ ಗೆದ್ದಿದ್ದರು. ಆದರೆ 2018ರಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಬಾದಾಮಿಯಲ್ಲಿ ಮಾತ್ರ ಗೆದ್ದಿದ್ದರು. ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರದಿಂದ ಗೆದ್ದಿದ್ದರು.
ಸಿದ್ದರಾಮಯ್ಯ ಅವರು 2008ರಲ್ಲಿ ಬಿಜೆಪಿಯ ಎಲ್.ರೇವಣಸಿದ್ದಯ್ಯ ಅವರನ್ನು 18,827 ಮತಗಳಿಂದ ಮತ್ತು 2013ರಲ್ಲಿ ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 29,641 ಮತಗಳಿಂದ ಸೋಲಿಸಿದ್ದರು. 2018ರಲ್ಲಿ ತಮ್ಮ ಪುತ್ರ ಯತೀಂದ್ರ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಯತೀಂದ್ರ ಅವರು ಬಿಜೆಪಿಯ ಟಿ ಬಸವರಾಜು ವಿರುದ್ಧ 58,816 ಮತಗಳಿಂದ ಗೆದ್ದಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Fri, 21 April 23