ಧಾರವಾಡ: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಗೆದ್ದು ಅಧಿಕಾರ ಹಿಡಿಯಲು ಕಾಂಗ್ರೆಸ್ ಉಚಿತ ಘೋಷಣೆಗಳನ್ನು ಮಾಡಿ ಗ್ಯಾರಂಟಿ ಕಾರ್ಡ್ಗಳನ್ನು (Congress’ Guarantee Card) ವಿತರಿಸುತ್ತಿದೆ. ಕಾಂಗ್ರೆಸ್ನ ಈ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಿದ್ದರಾಮಯ್ಯ ಅವಧಿಯ ಹಲವು ಭಾಗ್ಯಗಳು ಜನರಿಗೆ ತಲುಪಲಿಲ್ಲ. ಈಗ ಹಲವು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಆ ಬಳಿಕ ಗಳಗಂಟಿ ಎಂದರು.
ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ಜಯವಾಹಿನಿ ಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ಕಾವು ಏರುತ್ತಿದೆ. ಧಾರವಾಡ ಗ್ರಾಮಾಂತರ ಜನತೆ ರಾಜಕೀಯವಾಗಿ ಬಹಳ ಬುದ್ಧಿವಂತರು. ಅಧಿಕಾರದಲ್ಲಿ ಯಾರನ್ನು ಕೂರಿಸಬೇಕು, ಇಳಿಸಬೇಕೆಂಬುದು ಜನರಿಗೆ ಗೊತ್ತಿದೆ. ಪ್ರವಾಹ ಬಂದಾಗ ಬೆಳೆ ನಾಶ, ಮನೆ ಹಾನಿ ಆಗಿತ್ತು. ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಧಾವಿಸಿ ಬಂದಿದ್ದು ಬಿಜೆಪಿ ಸರ್ಕಾರ. ಹಿಂದಿನ ಸರ್ಕಾರಗಳು ಮನೆ ಬಿದ್ದಾಗ ಸಂತ್ರಸ್ತರಿಗೆ ಯಾವತ್ತಾದರೂ 5 ಲಕ್ಷ ಪರಿಹಾರ ನೀಡಿತ್ತಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಮನೆ ಬಿದ್ದ ಬಹಳ ದಿನಗಳ ಬಳಿಕ 2 ಸಾವಿರ ರೂ. ಕೊಡುತ್ತಿದ್ದರು. ಆದರೆ ಇಡೀ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಲ್ಲದ ಪರಿಹಾರ ನಾವು ಕೊಟ್ಟಿದ್ದೇವೆ. ಆ ಕಾರ್ಯವನ್ನು ಯಡಿಯೂರಪ್ಪ ಮಾಡಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಪ್ರವಾಹ ಬಂದಿತ್ತು. ಆಗ ಸಿದ್ದರಾಮಯ್ಯ ಏನು ಕೊಡುತ್ತೀರಿ ಪರಿಹಾರ ಅಂತಾ ಜಿಗಜಿಗಿದು ಕೇಳಿದ್ದರು. ಆಗ ಕೇಂದ್ರ ಕೊಡುವ ಪರಿಹಾರಕ್ಕೆ ಎರಡು ಪಟ್ಟು ಸೇರಿಸಿ ಕೊಡುತ್ತೇವೆ ಎಂದಿದ್ದೆ. ಅದರಂತೆಯೇ ಪರಿಹಾರ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ: ಜನರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನೆರವಾಗಬೇಕು, ಉಚಿತ ಘೋಷಣೆ ನೀಡುವುದಲ್ಲ: ಕಾಂಗ್ರೆಸ್ಗೆ ಸುಮಲತಾ ಟಾಂಗ್
ನಾವು ರೈತರ ಪರವಾಗಿ ಇದ್ದವರು ನಾವು, ರೈತ ಸಂಕಷ್ಟದಲ್ಲಿ ಇದ್ದಾಗ ಧಾವಿಸಿ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದ ಸಿಎಂ ಬೊಮ್ಮಾಯಿ, ಸಾಮಾಜಿಕ ನ್ಯಾಯ ಅಂತಾ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಆದರೆ ಅವರು ಯಾರಿಗೆ ನ್ಯಾಯ ಕೊಟ್ಟರು? ಹಿಂದುಳಿದವರು ಹಿಂದೆ ಉಳಿದರು. ಸಾಮಾಜಿಕ ನ್ಯಾಯದ ಮಾತು ಹೇಳುತ್ತ ಇವರು ಮುಂದೆ ಹೋದರು. ಸಿದ್ದರಾಮಯ್ಯ ಅವರು ಶಾದಿ ಭಾಗ್ಯ ಕೊಟ್ಟಿದ್ದರು, ಎಲ್ಲರೂ ಮದುವೆ ಇವರೇ ಮಾಡುವವರಿದ್ದೆರೇನೋ? ಅವರವರ ಮಕ್ಕಳ ಮದುವೆ ಮಾಡುವ ಶಕ್ತಿ ಎಲ್ಲರಿಗೂ ಇರುತ್ತದೆ. ಇವರು ಶಾದಿ ಭಾಗ್ಯ ಹೇಳಿದ್ದರು. ಆದರೆ ಮುಸ್ಲಿಮರು ಇದಕ್ಕಾಗಿ ಓಡಾಡಿದ್ದರು. ಆದರೆ ಮದುವೆಯಾಗಿ ಎರಡು ವರ್ಷವಾದರೂ ಹಣ ಬರಲಿಲ್ಲ. ಅವರು ಕೊಟ್ಟ ಯಾವ ಭಾಗ್ಯಗಳೂ ಜನರಿಗೆ ತಲುಪಲಿಲ್ಲ, ಸಿದ್ದರಾಮಯ್ಯ ಕೊಟ್ಟಿದ್ದು ಭಾಗ್ಯವಲ್ಲ, ದೌರ್ಭಾಗ್ಯ ಎಂದರು.
ಸದ್ಯ ಕಾಂಗ್ರೆಸ್ನವರು ಹೊಸ ಅಡ್ಡ ಸೋಗು ತೆಗೆದಿದ್ದಾರೆ. ನಾಟಕದ ಮಧ್ಯೆ ಅಡ್ಡ ಸೋಗು ಬರುತ್ತದೆ. ಹಾಗೆಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಅಡ್ಡಸೋಗು ಹಾಕಿದೆ. ಅಡ್ಡ ಸೋಗು ಹಾಕಿಕೊಂಡು ಜನರ ಬಳಿ ಬಂದಿದೆ. ಹತ್ತು ಕೆಜಿ ಅಕ್ಕಿ ಅಂತಾ ಹೇಳುತ್ತಿದ್ದಾರೆ. 10 ಕೆಜಿ ಇದ್ದಿದ್ದನ್ನು 5 ಕೆಜಿಗೆ ಇಳಿಸಿದ್ದೇ ಕಾಂಗ್ರೆಸ್. ಕಾಂಗ್ರೆಸ್‌ನದ್ದು ಚುನಾವಣೆವರೆಗೂ ಮಾತ್ರ ಗ್ಯಾರಂಟಿ ಆ ಬಳಿಕ ಗಳಗಂಟಿ. ಆದರೆ ಜನ ಬಹಳ ಬುದ್ಧಿವಂತರು, ಅವರದ್ದೇ ಗಂಟೆ ಬಾರಿಸಿ ನಡೆರಿ ಅಂತಾ ಕಳುಹಿಸುತ್ತಾರೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ